ಸಾರಾಂಶ
ಬೋಟಿನಲ್ಲಿದ್ದವರನ್ನು ಮೂಕಾಂಬಿಕ ಬೋಟಿನವರು ರಕ್ಷಣೆ ಮಾಡಿ ಮಲ್ಪೆ ಬಂದರಿನ ದಡಕ್ಕೆ ಸೇರಿಸಿದ್ದಾರೆ. ಸುಮಾರು ೧೮ ಲಕ್ಷ ರುಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಮಲ್ಪೆ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಆಳಸಮುದ್ರ ಬೋಟು ಡಿ.೧೯ರಂದು ಮುಳುಗಡೆಗೊಂಡು, ಅದರಲ್ಲಿದ್ದ ೮ ಮಂದಿ ಮೀನುಗಾರರನ್ನು ಸಮೀಪದ ಬೇರೆ ಬೋಟಿನವರು ರಕ್ಷಿಸಿದ್ದಾರೆ.
ಕಡೆಕಾರು ರಕ್ಷಾ ಅವರಿಗೆ ಸೇರಿದ ಶ್ರೀನಾರಾಯಣ- ಐಐ ಬೋಟು ಡಿ. ೧೨ರಂದು ರಾತ್ರಿ ಮಲ್ಪೆ ಬಂದರಿನಿಂದ ತೆರಳಿತ್ತು, ಡಿ.೧೯ರಂದು ಬೆಳಗ್ಗೆ ೬-೩೦ರ ವೇಳೆ ೨೬ ಮಾರು ಆಳ ದೂರದಲ್ಲಿ ಮೀನುಗಾರಿಕೆ ನಡೆಸುವಾಗ ನೀರಿನಡಿಯಲ್ಲಿ ಯಾವುದೋ ವಸ್ತು ಬೋಟಿಗೆ ಬಡಿದು ನೀರು ಬೋಟಿನ ಒಳ ಪ್ರವೇಶಿಸಲಾರಂಭಿಸಿತು. ತತ್‌ಕ್ಷಣ ಬೋಟಿನವರು ವಯರ್‌ಲೆಸ್ ಮೂಲಕ ಇತರ ಬೋಟಿಗೆ ಸಂದೇಶ ನೀಡಿದರು. ಈ ವೇಳೆ ಶ್ರೀ ಮೂಕಾಂಬಿಕ ಅನುಗ್ರಹ ಬೋಟಿನವನರು ಧಾವಿಸಿ ಬಂದು ಬೋಟನ್ನು ಮೇಲೆಳೆಯಲು ಆರಂಭಿಸಿದರು. ನೀರಿನ ಅಬ್ಬರ ಜಾಸ್ತಿಯಾಗಿದ್ದರಿಂದ ನೀರು ಬೋಟಿನ ಒಳಗೆ ಬರುವುದನ್ನು ತಡೆಯಲು ಸಾಧ್ಯಾವಾಗದೆ ಬೋಟು ಪೂರ್ಣ ಮುಳುಗಡೆಗೊಂಡಿತು. ಬೋಟಿನಲ್ಲಿದ್ದವರನ್ನು ಮೂಕಾಂಬಿಕ ಬೋಟಿನವರು ರಕ್ಷಣೆ ಮಾಡಿ ಮಲ್ಪೆ ಬಂದರಿನ ದಡಕ್ಕೆ ಸೇರಿಸಿದ್ದಾರೆ. ಸುಮಾರು ೧೮ ಲಕ್ಷ ರುಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.