ಮಲ್ಪೆ: ಬಲೆಗೆ ಬಿದ್ದ ವೇಲ್ ಶಾರ್ಕ್‌ ರಕ್ಷಿಸಿದ ಮೀನುಗಾರರಿಗೆ ಸನ್ಮಾನ

| Published : Oct 06 2024, 01:17 AM IST

ಸಾರಾಂಶ

ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬಲೆಗೆ ಬಿದ್ದ ವಿನಾಶದಂಚಿನಲ್ಲಿರುವ ವೇಲ್ ಶಾರ್ಕ್‌ (ಬೊಟ್ಟು ತಾಟೆ) ಅನ್ನು ಕೊಲ್ಲದೇ ಬಲೆಯಿಂದ ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರನ್ನು ಮಂಗಳೂರಿನ ಮೀನುಗಾರಿಗೆ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರ, ಮೀನುಗಾರಿಕೆ ಇಲಾಖೆ ಮತ್ತು ಮಂಗಳೂರಿನ ಮೀನುಗಾರಿಕಾ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಲ್ಪೆ

ಇತ್ತೀಚೆಗೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬಲೆಗೆ ಬಿದ್ದ ವಿನಾಶದಂಚಿನಲ್ಲಿರುವ ವೇಲ್ ಶಾರ್ಕ್‌ (ಬೊಟ್ಟು ತಾಟೆ) ಅನ್ನು ಕೊಲ್ಲದೇ ಬಲೆಯಿಂದ ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರನ್ನು ಶನಿವಾರ ಮಂಗಳೂರಿನ ಮೀನುಗಾರಿಗೆ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರ, ಮೀನುಗಾರಿಕೆ ಇಲಾಖೆ ಮತ್ತು ಮಂಗಳೂರಿನ ಮೀನುಗಾರಿಕಾ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.ಈ ವೇಲ್‌ ಶಾರ್ಕ್‌ ಅನ್ನು ರಕ್ಷಿಸಿದ್ದ ಬೋಟ್‌ನ ಮಾಲೀಕ ಸದಾಶಿವ ಎಸ್‌. ಮೆಂಡನ್‌ ಅವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ, ಮಲ್ಪೆಯಿಂದ ಸುಮಾರು 15 ನಾಟಿಕಲ್‌ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಭಾರಿ ಗಾತ್ರದ ಮೀನು ಬಲೆಗೆ ಸಿಕ್ಕಿಕೊಂಡಿತು. ಬಲೆ ಎಳೆದು ನೋಡಿದಾಗ ಅದು ಸುಮಾರು 2 ಟನ್ ತೂಕದ ಬೊಟ್ಟು ತಾಟೆ ಆಗಿತ್ತು, ಅದನ್ನು ಕೊಲ್ಲಬಾರದು ಎಂದು ಬಲೆಯಿಂದ ಬಿಡಿಸಿ ನಾವು ಕಡಲಿಗೆ ಬಿಟ್ಟಿದ್ದೇವೆ ಎಂದು ವಿವರಿಸಿದರು.

ಈ ಸಂದರ್ಭ ಮಾತನಾಡಿದ ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಸುಜಿತಾ ಥಾಮಸ್, ವೇಲ್‌ ಶಾರ್ಕ್‌, ಗಿಟಾರ್‌ ಫಿಶ್‌, ಡಾಲ್ಫಿನ್‌ ಸೇರಿದಂತೆ ವಿನಾಶದಂಚಿನಲ್ಲಿರುವ 12 ಪ್ರಭೇದದ ಮೀನುಗಳನ್ನು ಹಿಡಿಯುವುದಕ್ಕೆ ನಿರ್ಬಂಧವಿದೆ. ಆದ್ದರಿಂದ ಇಂತಹ ಮೀನುಗಳು ಬಲೆಗೆ ಬಿದ್ದರೆ ಅವುಗಳನ್ನು ಮರಳಿ ಸಮುದ್ರಕ್ಕೆ ಬಿಡಬೇಕು. ಈ ಹಿನ್ನೆಲೆಯಲ್ಲಿ ಮಲ್ಪೆಯ ಮೀನುಗಾರರ ಕೆಲಸ ಶ್ಲಾಘನೀಯ ಮತ್ತು ಇತರಿಗೂ ಮಾದರಿಯಾಗಿದೆ ಎಂದರು.ಬಂದರು ಇಲಾಖೆಯ ಉಪ ನಿರ್ದೇಶಕಿ ಸವಿತಾ ಖಾದ್ರಿ, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್‌ ಆರ್‌. ಆಳ್ವ, ಉಪ ನಿರ್ದೇಶಕಿ ಅಂಜನಾ ದೇವಿ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಪರ್ಸಿನ್‌ ಮೀನುಗಾರರ ಸಂಘ ಅಧ್ಯಕ್ಷ ನಾಗರಾಜ ಸುವರ್ಣ, ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಮೃದುಲಾ ರಾಜೇಶ್ ಉಪಸ್ಥಿತರಿದ್ದರು.

-------------ಪ್ಲಾಸ್ಟಿಕ್‌ನಿಂದ ಮೀನು, ಮೀನುಗಾರಿಕೆಗೆ ಅಪಾಯ

ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಂಡೇಲರ ಸಂಘ ಅಧ್ಯಕ್ಷ ರವಿರಾಜ್‌ ಸುವರ್ಣ ಮಾತನಾಡಿ, ಭಾರಿ ಪ್ರಮಾಣದಲ್ಲಿ ಪ್ಲ್ಯಾಸ್ಟಿಕ್‌ ತ್ಯಾಜ್ಯಗಳು ಸಮುದ್ರ ಸೇರುತ್ತಿದ್ದು, ಇದು ಮೀನು ಸಂತತಿಗೆ ಅಪಾಯಕಾರಿಯಾಗಿದೆ. ಇದರಿಂದಲೂ ಅನೇಕ ಮೀನುಗಳ ಸಂತತಿ ನಾಶವಾಗುತ್ತಿದೆ. ಇದು ನೇರವಾಗಿ ಮೀನುಗಾರಿಕೆ ವೃತ್ತಿಯ ಮೇಲೂ ಪರಿಣಾಮ ಬೀರುತ್ತಿದೆ. ಅಧಿಕಾರಿಗಳು ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರ ಸೇರುವುದನ್ನು ತಡೆಯುವ ಬಗ್ಗೆಯೂ ಗಂಭೀರವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.