ಉಚಿತ ಕಾನೂನು ಸೇವೆ ಕುರಿತು ಜನಜಾಗೃತಿ ಅಗತ್ಯ

| Published : Nov 11 2025, 01:45 AM IST

ಉಚಿತ ಕಾನೂನು ಸೇವೆ ಕುರಿತು ಜನಜಾಗೃತಿ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಈ ಕಾಯಿದೆ ೧೯೯೫, ನವೆಂಬರ್ ೦೯ ರಂದು ಜಾರಿಗೆ ಬಂದಿತು. ರಾಷ್ಟ್ರೀಯ ಕಾನೂನು ಸೇವೆಗಳ ದಿನದಂದು ಕಾನೂನು ಜಾಗೃತಿ ಶಿಬಿರಗಳು, ಉಚಿತ ಕಾನೂನು ಸೇವೆಗಳ ನೆರವಿನ ಲಭ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವಂತಹ ಕಾರ್ಯವನ್ನು ಮಾಡಲಾಗುತ್ತದೆ. ೧೯೯೪ ರ ತಿದ್ದುಪಡಿ ಕಾಯಿದೆಯ ನಂತರ ಈ ಕಾಯಿದೆಯನ್ನು ನವೆಂಬರ್ ೧೯೯೫ ರಂದು ಜಾರಿಗೆ ತರಲಾಯಿತು.

ಕನ್ನಡಪ್ರಭ ವಾರ್ತೆ ಕೆಜಿಎಫ್ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆಯಡಿಯಲ್ಲಿ, ಸಮಾಜದ ದುರ್ಬಲ ವರ್ಗದವರಿಗೆ ಉಚಿತ ಕಾನೂನು ಸೇವೆಗಳ ನೆರವಿನ ಲಭ್ಯತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರತಿವರ್ಷ ನ.೦೯ ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಆಚರಿಸಲಾಗುತ್ತದೆ ಎಂದು ೩ ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶಿವಕುಮಾರ್ ಬಿ.ತಿಳಿಸಿದರು. ವಕೀಲರ ಭವನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು, ಕಾನೂನು ಸೇವಾ ಪ್ರಾಧಿಕಾರಗಳ ಕಾಯಿದೆ ೧೯೮೭ ಜಾರಿಗೊಂಡ ದಿನದ ಸ್ಮರಣಾರ್ಥವಾಗಿ ಪ್ರತಿ ವರ್ಷ ನವೆಂಬರ್ ೦೯ ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಆಚರಿಸಲಾಗುತ್ತದೆ ಎಂದರು.

ಜನತೆಗೆ ಅರಿವು ಮೂಡಿಸಿ

ಈ ಕಾಯಿದೆ ೧೯೯೫, ನವೆಂಬರ್ ೦೯ ರಂದು ಜಾರಿಗೆ ಬಂದಿತು. ರಾಷ್ಟ್ರೀಯ ಕಾನೂನು ಸೇವೆಗಳ ದಿನದಂದು ಕಾನೂನು ಜಾಗೃತಿ ಶಿಬಿರಗಳು, ಉಚಿತ ಕಾನೂನು ಸೇವೆಗಳ ನೆರವಿನ ಲಭ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವಂತಹ ಕಾರ್ಯವನ್ನು ಮಾಡಲಾಗುತ್ತದೆ ಎಂದರು. ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್.ರಾಜಗೋಪಾಲಗೌಡ ಮಾತನಾಡಿ, ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ ೧೯೮೭ ಏನೆಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ ೧೯೮೭ ನ್ನು ಕೇಂದ್ರ ಸರ್ಕಾರವು ಭಾರತದ ಸಂವಿಧಾನದ ೩೯೦ ಮತ್ತು ಅದರ ಸಮಿತಿಯು ಮಾಡಿದ ಶಿಫಾರಸುಗಳಿಗೆ ಅನುಗುಣವಾಗಿ ಜಾರಿಗೆ ತಂದಿದೆ ಎಂದರು.

ದುರ್ಬಲರಿಗೆ ಕಾನೂನು ನೆರವು

೧೯೯೪ ರ ತಿದ್ದುಪಡಿ ಕಾಯಿದೆಯ ನಂತರ ಈ ಕಾಯಿದೆಯನ್ನು ನವೆಂಬರ್ ೧೯೯೫ ರಂದು ಜಾರಿಗೆ ತರಲಾಯಿತು. ಅಂದಿನಿಂದ ಈ ಮುಖ್ಯ ಕಾಯಿದೆಯಲ್ಲಿ ಹಲವಾರು ತಿದ್ದುಪಡಿಗಳನ್ನು ಮಾಡಲಾಗಿದೆ. ಈ ಕಾಯ್ದೆಯ ಮೂಲಕ ಸಮಾಜದ ಹಿಂದುಳಿದ ವರ್ಗಗಳು, ಆರ್ಥಿಕವಾಗಿ ದುರ್ಬಲವಿರುವ ವರ್ಗಗಳು ಮತ್ತು ವಿಕಲಚೇತನರಿಗೆ ಉಚಿತ ಕಾನೂನು ನೆರವನ್ನು ಪಡೆಯುವ ಹಕ್ಕನ್ನು ನೀಡಲಾಗಿದೆ ಎಂದರು.

ಕಾನೂನು ಸೇವೆಗಳ ಪ್ರಾಧಿಕಾರ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ನ್ಯಾಯಮೂರ್ತಿ ಆರ್.ಎನ್ ಮಿಶ್ರಾ ಡಿಸೆಂಬರ್ ೦೫, ೧೯೯೫ ರಂದು ಕಾನೂನು ಸೇವೆಗಳ ಪ್ರಾಧಿಕಾರ ೧೯೮೭ ರ ಅಡಿಯಲ್ಲಿ ಜಾರಿಗೆ ತಂದರು. ಈ ಪ್ರಾಧಿಕಾರವು ಅಗತ್ಯವಿರುವವರಿಗೆ ಉಚಿತ ಕಾನೂನು ನೆರವು, ಮಾರ್ಗದರ್ಶನವನ್ನು ಒದಗಿಸುವ ಮತ್ತು ಮಧ್ಯಸ್ಥಿಕೆ ಹಾಗೂ ಸೌಹಾರ್ದಯುತ ಇತ್ಯರ್ಥಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸುವಂತಹ ಕಾರ್ಯವನ್ನು ಮಾಡುತ್ತದೆ.ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎನ್.ಬಿ.ಜಯಲಕ್ಷ್ಮೀ ಮಾತನಾಡಿ, ಕಾನೂನು ವ್ಯವಸ್ಥೆಗಳ ಬಗ್ಗೆ ಜಾಗೃತಿ ಮೂಡಿಸು ಪ್ರಯತ್ನ ಮಾಡಲಾಗುತ್ತಿದೆ. ವ್ಯಕ್ತಿ ಬಡವನಾಗಿರಲಿ, ವಿಕಲ ಚೇತನರಾಗಿರಲಿ, ಸಮಾಜದ ದುರ್ಬಲ ವರ್ಗದವನಾಗಿರಲಿ ಎಲ್ಲರಿಗೂ ನ್ಯಾಯ ಪಡೆಯುವ ಸಮಾನ ಅವಕಾಶವಿದೆ. ಅವರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಲು ಅವರಿಗೆ ಉಚಿತ ಕಾನೂನು ನೆರವು ಮತ್ತು ಉಚಿತ ಸಮಲೋಚನೆಯನ್ನು ನೀಡಲಾಗುತ್ತದೆ. ಹೀಗೆ ಜನರಿಗೆ ನ್ಯಾಯ ಪಡೆಯುವ ಹಕ್ಕಿನ ಬಗ್ಗೆ ಅರಿವು ಮೂಡಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿನೋದ್‌ಕುಮಾರ್ ಎಂ, ಒಂದನೇ ಅಪರ ಸಿವಿಲ್ ನ್ಯಾಯಾಧೀಶೆ ಶೆಮಿದ.ಕೆ, ವಕೀಲರ ಸಂಘದ ಉಪಾಧ್ಯಕ್ಷರಾದ ಮಣಿವಣ್ಣನ್ ಕಾನೂನು ಸೇವೆಗಳ ಕುರಿತು ಮಾತನಾಡಿದರು.