ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಚೆಕ್‌ಪೋಸ್ಟ್‌ ಬಳಿ ಅಕ್ರಮವಾಗಿ ವಾಹನಗಳಿಂದ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ ಗ್ರೀನ್‌ ಟ್ಯಾಕ್ಸ್‌ ಟಿಕೆಟ್‌ ಕಲೆಕ್ಟರ್‌ ಮೇಲೆ ಹಲ್ಲೆ ನಡೆಸಿ, ಹಣ ಕಿತ್ತುಕೊಂಡು ಹೋದ ಚನ್ನಮಲ್ಲೀಪುರ ಗ್ರಾಮದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

- ಮದ್ದೂರು ನಾಕಾಬಂಧಿ ಬಳಿ ಘಟನೆ

- ಹಲ್ಲೆಗೈದ ಆರೋಪಿ ಪೊಲೀಸ್‌ ಬಲೆಗೆ

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಚೆಕ್‌ಪೋಸ್ಟ್‌ ಬಳಿ ಅಕ್ರಮವಾಗಿ ವಾಹನಗಳಿಂದ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ ಗ್ರೀನ್‌ ಟ್ಯಾಕ್ಸ್‌ ಟಿಕೆಟ್‌ ಕಲೆಕ್ಟರ್‌ ಮೇಲೆ ಹಲ್ಲೆ ನಡೆಸಿ, ಹಣ ಕಿತ್ತುಕೊಂಡು ಹೋದ ಚನ್ನಮಲ್ಲೀಪುರ ಗ್ರಾಮದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಮದ್ದೂರು ಚೆಕ್‌ಪೋಸ್ಟ್‌ನ ಗ್ರೀನ್‌ ಟ್ಯಾಕ್ಸ್‌ ಟಿಕೆಟ್‌ ಕಲೆಕ್ಟರ್‌ ಶಿವಕುಮಾರ್‌ ನೀಡಿದ ದೂರಿನ ಮೇರೆಗೆ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಬಿಎನ್‌ಎಸ್‌ ನಡಿ 115(2), 352, 132, 351(2), 308(2) ಪ್ರಕರಣ ದಾಖಲಿಸಿಕೊಂಡು ಚನ್ನಮಲ್ಲೀಪುರ ಗ್ರಾಮದ ಸಿ.ಸಿ. ದೇವರಾಜ್‌ರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ.

ಏ.6ರ ರಾತ್ರಿ ಶಿವಕುಮಾರ್‌ ಮತ್ತು ಗಸ್ತು ವನಪಾಲಕ ಸಿದ್ದೇಶ್‌. ಡಿ. ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದೇವರಾಜ್‌ ಚೆಕ್‌ ಪೋಸ್ಟ್‌ ಮೂಲಕ ಹಾದು ಹೋಗುತ್ತಿದ್ದ ವಾಹನಗಳಿಂದ ಹಣ ವಸೂಲಿ ಮಾಡುತ್ತಿದ್ದರು.

ಇದನ್ನು ಶಿವಕುಮಾರ್‌ ಮತ್ತು ಸಿದ್ದೇಶ್‌ ಪ್ರಶ್ನಿಸಿದ್ದಾರೆ. ಈ ವೇಳೆ ದೇವರಾಜ್ ಇಬ್ಬರನ್ನು ತೀವ್ರವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾನೆ.

ಬಳಿಕ ಸರ್ಕಾರಿ ಕೆಲಸ ಮಾಡಲು ಅಡ್ಡಿಪಡಿಸಿ, ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ, ಅವಾಷ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ನನ್ನ ಬಳಿಯಿದ್ದ ಹಣದ ಬ್ಯಾಗ್‌ ಕದಿಯಲು ಯತ್ನಿಸಿದ್ದಾನೆ. ಆಗ ನಾನು ಹಣದ ಬ್ಯಾಗ್‌ ಬಿಗಿಯಾಗಿ ಹಿಡಿದುಕೊಂಡೆನು. ಆದರೂ ನನಗೆ ಜೀವ ಬೆದರಿಕೆ ಹಾಕಿ, 200 ರು. ಕಿತ್ತುಕೊಂಡು ಹೋದ ಎಂದು ಶಿವಕುಮಾರ್‌ ಆರೋಪಿಸಿದ್ದಾರೆ.

ಬಳಿಕ ನನ್ನ ಕಾಲು ಹಿಡಿದು ಎಳೆದಾಡಿ, ಕೆಳಗೆ ಬೀಳಿಸಿ, ಹಲ್ಲೆ ನಡೆಸಿದ್ದಾರೆ. ರಾತ್ರಿ 9 ಗಂಟೆಗೆ ಚೆಕ್‌ ಪೋಸ್ಟ್‌ ಮುಚ್ಚುವುದಕ್ಕೆ ಹೋದಾಗಲೂ ಸಿ.ಸಿ. ದೇವರಾಜು ಸರ್ಕಾರದ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಆ ಸಮಯದಲ್ಲಿ ನನ್ನಿಂದ ಕಿತ್ತುಕೊಂಡ 200 ರು. ಬೇಲಿಗೆ ಎಸೆದಿದ್ದಾನೆ.

ಅಲ್ಲಿಯೇ ಕರ್ತವ್ಯದಲ್ಲಿದ್ದ ಡಿಆರ್‌ಎಫ್‌ಒ ರವಿ ಕುಮಾರ್‌ ಸಂಗೂರ್‌ ಹಾಗೂ ಹೋಂ ಗಾರ್ಡ್‌ ಕೃಷ್ಣಮೂರ್ತಿ, ಬೀಟ್‌ ಫಾರೆಸ್ಟರ್‌ ಮಹಮದ್‌ ನಸಾಪ್‌ ಬಂದು ದೇವರಾಜುವನ್ನು ಸಮಾಧಾನಪಡಿಸಿ ಕಳುಹಿಸಿದರು ಎಂದು ದೂರಿನಲ್ಲಿ ಹೇಳಿದ್ದಾರೆ.

ದೇವರಾಜ್‌ ಮಾಡಿದ ಹಲ್ಲೆಯಿಂದಾಗಿ ಶಿವಕುಮಾರ್‌ ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆ ದಾಖಲಾಗಿದ್ದಾರೆ.

ದೇವರಾಜು ಮೇಲೆ ಪ್ರಕರಣ ದಾಖಲಿಸಿಕೊಂಡು ಗುಂಡ್ಲುಪೇಟೆ ಪೊಲೀಸರು, ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಒಪ್ಪಿಸಿದ್ದಾರೆ.