ವ್ಯಕ್ತಿ ಮೇಲೆ ನಾಲ್ವರಿಂದ ಹಲ್ಲೆ: ಒಬ್ಬನ ಬಂಧನ

| Published : Nov 22 2024, 01:21 AM IST

ಸಾರಾಂಶ

ರಾಷ್ಟ್ರೀಯ ಹೆದ್ದಾರಿಯ ಎಡಬದಿ ನಾಲ್ವರು ಓರ್ವ ವ್ಯಕ್ತಿಯನ್ನು ತಡೆದು, ಹಲ್ಲೆ ಮಾಡುತ್ತಿದ್ದುದನ್ನು ತಡೆಯಲು ಬಂದ ಪೊಲೀಸರ ಮೇಲೆಯೇ ದಾಳಿ ಮಾಡಿದ ನಾಲ್ವರ ಪೈಕಿ ಓರ್ವನನ್ನು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಇಆರ್‌ಎಸ್‌ಎಸ್‌ (ಹೊಯ್ಸಳ 112) ಸಿಬ್ಬಂದಿ ಬೈಕ್‌ ಸಮೇತ ಬಂಧಿಸಿದ್ದಾರೆ.

- ಪೊಲೀಸರ ಮೇಲೂ ದಾಳಿ ಯತ್ನ, ಕರ್ತವ್ಯಪ್ರಜ್ಞೆ ಮೆರೆದ ಸಿಬ್ಬಂದಿ

- ಬೈಕ್ ಸಮೇತ ಓರ್ವ ಬಂಧನ, ಮೂವರು ಕತ್ತಲಲ್ಲಿ ಪರಾರಿ - ಪೊಲೀಸ್‌ ಸಿಬ್ಬಂದಿ ಕಾರ್ಯವೈಖರಿ ಮೆಚ್ಚಿ ಎಸ್‌ಪಿ ಪ್ರಶಂಸನಾ ಪತ್ರ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಷ್ಟ್ರೀಯ ಹೆದ್ದಾರಿಯ ಎಡಬದಿ ನಾಲ್ವರು ಓರ್ವ ವ್ಯಕ್ತಿಯನ್ನು ತಡೆದು, ಹಲ್ಲೆ ಮಾಡುತ್ತಿದ್ದುದನ್ನು ತಡೆಯಲು ಬಂದ ಪೊಲೀಸರ ಮೇಲೆಯೇ ದಾಳಿ ಮಾಡಿದ ನಾಲ್ವರ ಪೈಕಿ ಓರ್ವನನ್ನು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಇಆರ್‌ಎಸ್‌ಎಸ್‌ (ಹೊಯ್ಸಳ 112) ಸಿಬ್ಬಂದಿ ಬೈಕ್‌ ಸಮೇತ ಬಂಧಿಸಿದ್ದಾರೆ.

ಇಆರೆಸ್ಸೆಸ್‌ ವಾಹನದ ಸಿಬ್ಬಂದಿ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಟಿ.ಮಾಲತೇಶ, ವಾಹನ ಚಾಲಕ, ಕಾನ್‌ಸ್ಟೇಬಲ್‌ ಎ.ವಿನೋದಕುಮಾರ ತಾಲೂಕಿನ ಎಚ್.ಕಲ್ಪನಹಳ್ಳಿಯಿಂದ ಮುಂದೆ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಅವರ ಕಣ್ಣಿಗೆ ಹೆದ್ದಾರಿ ಪಕ್ಕ ಯಾರೋ ನಾಲ್ವರು ಅಪರಿಚಿತರು ಒಬ್ಬನನ್ನು ತಡೆದು, ಹಲ್ಲೆ ಮಾಡುತ್ತಿದ್ದುದನ್ನು ಕಂಡು ತಕ್ಷಣ ಅಲ್ಲಿಗೆ ತಲುಪಿದ್ದಾರೆ.

ಪೊಲೀಸ್ ವಾಹನ ಕಂಡು ಒಂದೇ ಬೈಕಿನಲ್ಲಿ ನಾಲ್ವರು ಆರೋಪಿಗಳು ತಪ್ಪಿಸಿಕೊಂಡು ಹೋಗುತ್ತಿದ್ದರು. ಅವರನ್ನು ಟಿ.ಮಾಲತೇಶ ಹಾಗೂ ಎ.ವಿನೋದಕುಮಾರ ಹಿಂಬಾಲಿಸಿ, ಹಿಡಿಯಲು ಪ್ರಯತ್ನಿಸುತ್ತಿದ್ದರು. ಆಗ ನಾಲ್ವರು ಬೈಕ್‌ನಿಂದ ಇಳಿದು, ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳ ಪೈಕಿ ಮೂವರು ಕತ್ತಲಲ್ಲಿ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ. ಓರ್ವ ಆರೋಪಿ ಬೈಕ್ ಸಮೇತ ಸಿಕ್ಕಿ ಬಿದ್ದಿದ್ದಾನೆ.

ಆರೋಪಿಯನ್ನು ಬೈಕ್ ಸಮೇತ ಠಾಣೆಗೆ ಕರೆ ತಂದು, ಹಲ್ಲೆಗೊಳಗಾಗಿದ್ದ ವ್ಯಕ್ತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪರಾರಿಯಾದ ಮೂವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

ಎಸ್‌ಪಿ ಶ್ಲಾಘನೆ:

ಹೆಡ್ ಕಾನ್‌ಸ್ಟೇಬಲ್ ಟಿ.ಮಾಲತೇಶ, ವಾಹನ ಚಾಲಕ, ಕಾನ್‌ಸ್ಟೇಬಲ್‌ ಎ.ವಿನೋದಕುಮಾರ ಕರ್ತವ್ಯಪ್ರಜ್ಞೆ, ಪರಿಶ್ರಮ ಮೆಚ್ಚಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಪ್ರಶಂಸಾ ಪತ್ರ ನೀಡಿ, ಪ್ರೋತ್ಸಾಹಿಸಿದರು. ಈ ಸಂದರ್ಭ ಪೊಲೀಸ್ ಇನ್‌ಸ್ಪೆಕ್ಟರ್‌ ತೇಜಾವತಿ, ಪೊಲೀಸ್ ನಿಸ್ತಂತು ವಿಭಾಗದ ಇನ್‌ಸ್ಟೆಕ್ಟರ್‌ ನಿತೇಶ್, ಅಧಿಕಾರಿ-ಸಿಬ್ಬಂದಿ ಇದ್ದರು.

- - - -21ಕೆಡಿವಿಜಿ11: