ಬೀಜ ಹಾಗೂ ಗೊಬ್ಬರಕ್ಕಾಗಿ ಪಡೆದಿದ್ದ ₹೭೫ ಸಾವಿರ ಹಣವನ್ನು ವಾಪಸ್ ನೀಡುವ ವಿಚಾರದಲ್ಲಿ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ ಹಣ ನೀಡಿದ ವ್ಯಕ್ತಿಯೊಬ್ಬರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿರುವ ಘಟನೆ ಆ. ೨೧ರಂದು ಸಂಜೆ ತಾಲೂಕಿನ ನೀರಲಗಿ ಗ್ರಾಮದಲ್ಲಿ ನಡೆದಿದೆ.
ಶಿಗ್ಗಾಂವಿ: ಬೀಜ ಹಾಗೂ ಗೊಬ್ಬರಕ್ಕಾಗಿ ಪಡೆದಿದ್ದ ₹೭೫ ಸಾವಿರ ಹಣವನ್ನು ವಾಪಸ್ ನೀಡುವ ವಿಚಾರದಲ್ಲಿ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ ಹಣ ನೀಡಿದ ವ್ಯಕ್ತಿಯೊಬ್ಬರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿರುವ ಘಟನೆ ಆ. ೨೧ರಂದು ಸಂಜೆ ತಾಲೂಕಿನ ನೀರಲಗಿ ಗ್ರಾಮದಲ್ಲಿ ನಡೆದಿದೆ.
ಆದರೆ ಘಟನೆ ನಡೆದು 13 ದಿನಗಳಾಗಿದ್ದರೂ ಆರೋಪಿಗಳು ಇನ್ನು ಪೊಲೀಸರ ಕೈಗೆ ಸಿಕ್ಕಿಲ್ಲ.ತಾಲೂಕಿನ ನೀರಲಗಿ ಗ್ರಾಮದ ನೀಲಕಂಠಪ್ಪ ಮೆಣಸಿನಕಾಯಿ ಅವರು ಎರಡು ವರ್ಷಗಳ ಹಿಂದೆ ಬೀಜ ಹಾಗೂ ಗೊಬ್ಬರಕ್ಕಾಗಿ ನಿಂಗಪ್ಪ ಫಕ್ಕೀರಪ್ಪ ಹಂಚಿನಮನಿ ಅವರಿಗೆ ೭೫ ಸಾವಿರ ನೀಡಿದ್ದರು. ಬೆಳೆ ಬಂದ ಬಳಿಕ ಹಣ ಮರಳಿಸುವುದಾಗಿ ನಿಂಗಪ್ಪ ಹೇಳಿದ್ದರು. ಆದರೆ ಹಣ ವಾಪಸ್ ಕೊಟ್ಟಿರಲಿಲ್ಲ.ಕೆಲ ದಿನಗಳ ಹಿಂದೆ ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ''''ಹಣ ನೀಡುವುದಿಲ್ಲ, ಏನು ಮಾಡಿಕೊಳ್ಳುತ್ತಿಯೋ ಮಾಡಿಕೋ'''' ಎಂದು ನಿಂಗಪ್ಪ ಬೆದರಿಕೆ ಹಾಕಿದ್ದಾಗಿ ನೀಲಕಂಠಪ್ಪ ಅವರ ಪತ್ನಿ ಚನ್ನವ್ವ ದೂರಿನಲ್ಲಿ ತಿಳಿಸಿದ್ದಾರೆ.
ಆ. ೨೧ರಂದು ಸಂಜೆ ೬.೩೦ರ ವೇಳೆಗೆ ನೀಲಕಂಠಪ್ಪ ಅವರು ದನ–ಕರುಗಳಿಗೆ ಹುಲ್ಲು ತೆಗೆದುಕೊಂಡು ಮನೆಗೆ ವಾಪಸ್ ಬರುತ್ತಿದ್ದಾಗ ನಿಂಗಪ್ಪ ಫಕ್ಕೀರಪ್ಪ ಹಂಚಿನಮನಿ, ಫಕ್ಕೀರಪ್ಪ ಹಂಚಿನಮನಿ, ಲಕ್ಷ್ಮಣ ಹಂಚಿನಮನಿ ಹಾಗೂ ಸುರೇಶ ಆನಿ ಸೇರಿಕೊಂಡು ಅವಾಚ್ಯವಾಗಿ ಬೈದು ಗಲಾಟೆ ಮಾಡಿದ್ದಾರೆ. ಈ ವೇಳೆ ನಿಂಗಪ್ಪ ಫಕ್ಕೀರಪ್ಪ ಹಂಚಿನಮನಿ ಕೈಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ನೀಲಕಂಠಪ್ಪ ಅವರ ಬಲಗೈಗೆ ಹೊಡೆದು ಗಾಯಗೊಳಿಸಿದ್ದಾರೆ. ಗಾಯಗೊಂಡ ನೀಲಕಂಠಪ್ಪ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.