ಸಾರಾಂಶ
ಚನ್ನಪಟ್ಟಣ: ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಗರಕಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪಾಪಣ್ಣ (೬೦) ಮೃತವ್ಯಕ್ತಿ. ಗ್ರಾಮದಲ್ಲಿ ಶನಿವಾರ ರಾತ್ರಿ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಯುವಕರೊಂದಿಗೆ ಪಾಲ್ಗೊಂಡಿದ್ದ ಅವರು ಕೆರೆಯಲ್ಲಿ ಕಾಲುಜಾರಿ ಬಿದ್ದುಮೃತಟ್ಟಿದ್ದಾರೆ. ಗ್ರಾಮದಲ್ಲಿ ಕೂರಿಸಿದ್ದ ಗಣಪತಿಯನ್ನು ಭಾನುವಾರ ನುಸುಕಿನ ಜಾವ ಮೂರು ಗಂಟೆಯ ವೇಳೆಯಲ್ಲಿ ವಿಸರ್ಜನೆ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ. ಪಾಪಣ್ಣ ಕೆರೆಯಲ್ಲಿ ಕಾಲು ಜಾರಿ ಬಿದ್ದ ವೇಳೆ ಅವರನ್ನು ಹುಡುಕಿ ರಕ್ಷಿಸಲು ಸ್ಥಳದಲ್ಲಿದ್ದವರು ಪ್ರಯತ್ನಿಸಿದ್ದಾರೆ. ಆದರೆ, ಕತ್ತಲಾದ ಕಾರಣ ಪ್ರಯತ್ನ ವಿಫಲವಾಗಿದೆ. ನಂತರ ಈ ವಿಚಾರ ಅಕ್ಕೂರು ಪೊಲೀಸರಿಗೆ ತಿಳಿದು ಭಾನುವಾರ ಬೆಳಗ್ಗೆ ಅಗ್ನಿಶಾಮಕ ದಳದ ನೆರವಿನಿಂದ ಪಾಪಣ್ಣ ಅವರ ಮೃತದೇಹವನ್ನು ಹುಡುಕಲು ಪ್ರಯತ್ನಿಸಿದರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಶೋಧ ಕಾರ್ಯನಡೆಸಿ ಅಂತಿಮವಾಗಿ ಪಾಪಣ್ಣ ಅವರನ್ನು ಮೃತ ದೇಹವನ್ನು ಕೆರೆಯಿಂದ ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ. ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.