ಸಾರಾಂಶ
ಮನುಷ್ಯನ ಬದುಕು ಎರಡು ಆದ್ಯಂತಗಳ ನಡುವೆ ನಡಿತದ, ಒಂದು ಹುಟ್ಟು ಇನ್ನೊಂದು ಸಾವು, ಹುಟ್ಟು ಆದಿಯಾದರೆ ಸಾವು ಅಂತ್ಯ ಆಗೆತಿ, ಇದರ ನಡುವಿನ ಬದುಕಿನಲ್ಲಿ ಮನುಷ್ಯ ಜೀವನದ ಬಹುಮುಖ್ಯ ಉದ್ದೇಶ ಸಂತೋಷವೇ ಆಗಿದೆ. ಆದರೆ ನಶ್ವರ ಜೀವನದಲ್ಲಿ ದುರಾಸೆ ಹಿಂದೆ ಬಿದ್ದು ಮನುಷ್ಯ ಸದಾ ದುಃಖವನ್ನೇ ಪಡೆಯುತ್ತಿದ್ದಾನೆ. ಇದು ವಾಸ್ತವ ಎಂದು ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ಬ್ಯಾಡಗಿ: ಮನುಷ್ಯನ ಬದುಕು ಎರಡು ಆದ್ಯಂತಗಳ ನಡುವೆ ನಡಿತದ, ಒಂದು ಹುಟ್ಟು ಇನ್ನೊಂದು ಸಾವು, ಹುಟ್ಟು ಆದಿಯಾದರೆ ಸಾವು ಅಂತ್ಯ ಆಗೆತಿ, ಇದರ ನಡುವಿನ ಬದುಕಿನಲ್ಲಿ ಮನುಷ್ಯ ಜೀವನದ ಬಹುಮುಖ್ಯ ಉದ್ದೇಶ ಸಂತೋಷವೇ ಆಗಿದೆ. ಆದರೆ ನಶ್ವರ ಜೀವನದಲ್ಲಿ ದುರಾಸೆ ಹಿಂದೆ ಬಿದ್ದು ಮನುಷ್ಯ ಸದಾ ದುಃಖವನ್ನೇ ಪಡೆಯುತ್ತಿದ್ದಾನೆ. ಇದು ವಾಸ್ತವ ಎಂದು ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.ಅವರು ಇಲ್ಲಿಯ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಧ್ಯಾತ್ಮ ಪ್ರವಚನದಲ್ಲಿ ಮಾತನಾಡಿದರು.
ಎದಿಯೊಳಗ ಪ್ರೇಮ ಸಂತೋಷ ಇದ್ದರ ಎಲ್ಲವೂ ಚೆಂದ ಇರತೇತಿ, ಅದ ಎದಿಯೊಳಗ ಪ್ರೇಮ ಸಂತೋಷ ಇಲ್ಲ ಎಂದ್ರ ಎಲ್ಲವೂ ನಶ್ವರ ಅನಿಸ್ತೇತಿ. ಜೀವನ ಅನುಭವಗಳ ಪ್ರವಾಹ ಐತಿ. ಸುಖ-ದುಃಖಗಳ ಅನುಭವ ನಮ್ಮೊಳಗೆ ಇದೆ. ಅದನ್ನ ಹುಡುಕಿ ಸಂತೋಷದಿಂದ ಬದುಕೋದು ಕಲಿಬೇಕ ಎಂದರು.ಮದುವಿ ಮಂಚೆ ಹೆಂಡತಿ ಜೊತಿ ಮಾತಾಡಿದ್ರ ಸಾಕಷ್ಟು ಸಂತೋಷ ಇರತೇತಿ, ಅದ ಮದುವಿ ಆದ ಮ್ಯಾಲ ಅದ ಮಾತ ದುಃಖ ಕೊಡತೇತಿ, ಹಂಗಾದ್ರ ಸುಖ ಮಾತಿನೊಳಗೆ ಇದೆಯೋ? ಅಥವಾ ಮಾತು ನಿಲ್ಲಿಸೋದ್ರಾಗ ಐತೋ? ದುಡ್ಡು ಇದ್ರ ಸುಖ ಇರತೇತಿ ಅನ್ನಕೊಂಡ ಮನುಷ್ಯನಿಗೆ ರೊಕ್ಕಾ ಜಾಸ್ತಿ ಬಂತು. ಆಮ್ಯಾಲ್ ಆರೋಗ್ಯ ಕೈಕೊಟ್ಟತ ಆವಾಗ ಡಾಕ್ಟರಗೆ ಹೇಳತಾನ ಎಷ್ಟಾರ ಖರ್ಚು ಆಗಲಿ ನನ್ನ ಆರೋಗ್ಯ ಸರಿ ಮಾಡ್ರಿ ಅಂತ, ಅವಾಗ ಸುಖ ದುಡ್ಡಿಂದ, ಆರೋಗ್ಯದ ಮ್ಯಾಲ್ ಶಿಫ್ಟ್ ಆತ. ಒಮ್ಮೆ ಹುಟ್ಟು ಸುಖ ಕೊಟ್ಟರ, ಮತ್ತೊಮ್ಮೆ ಸಾವು ಸುಖ ಕೊಟ್ಟೆತಿ, ಹಾಗಾದ್ರ ಎಲ್ಲಿ ಐತಿ ಸುಖ, ಇನ್ನು ತಿಳಿವಲ್ಲದ ಮನುಷ್ಯನಿಗೆ.“ಎರೆಯಂತೆ ಕರಕರಗಿ, ಮಳಲಂತೆ ಜರಿ ಜರಿದು, ಕನಸಿನಲಿ ಕಳವಳಿಸಿ ಆನು ಬೆರೆಗಾದೆ, ಆವಿಗೆಯ ಕಿಚ್ಚಿನಂತೆ ಕುದಿ ಕುದಿದು ಬೆಂದೆ ನಾ, ಆಪತ್ತಿಗೆ ಆಗುವ ಸಖಿಯ ರನಾರನು ಕಾಣೆ, ಅರಸಿ ಕಾಣದ ತನುವ, ಬೆರೆಸಿ ಕೂಡದ ಸುಖವ ಎನಗೆ ನೀ ಕರುಣಿಸಾ ಚನ್ನಮಲ್ಲಿಕಾರ್ಜುನ”ಎಂಬ ಅಕ್ಕಮಹಾದೇವಿ ವಚನದ ಸಾರ ಸುಖದ ಹುಡುಕಾಟದಲ್ಲಿ ಇರುವ ಮನುಷ್ಯನಿಗೆ ಇಂದು ಅತ್ಯವಶ್ಯಾಗಿ ಬೇಕಾಗೇತಿ ಎಂದರು.