ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮನುಷ್ಯರು ತಾವು ಹಿಂದೆ ಮಾಡಿದ ತಪ್ಪುಗಳಿಂದ ಪಾಠ ಕಲಿಯದೇ ಹೋದರೆ ಸರ್ವನಾಶವಾಗುವುದು ನಿಶ್ಚಿತ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಭವಿಷ್ಯ ನುಡಿದರು.ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘದಿಂದ ಸಾಹಿತಿ ರಾಗೌ ಅವರ ಪತ್ನಿ ಯಶೋಧಾ ರಾಗೌ ಅವರ ಸ್ಮೃತಿ ಸಂಪುಟ ‘ನೀಲಿ ಬಾನಿನ ನಕ್ಷತ್ರ’ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೋಬೋಟ್‌ಗಳು ಕ್ಯಾಲಿಕ್ಲೇಟರ್, ಕಂಪ್ಯೂಟರ್, ಮೊಬೈಲ್ ರೂಪದಲ್ಲಿದ್ದವು, ಆದರೆ. ಪ್ರಸ್ತುತದಲ್ಲಿ ಸುದ್ದಿಗಳನ್ನು ಓದುತ್ತಿವೆ, ಪ್ರವಚನ ನೀಡುತ್ತಿವೆ. ಇಂತಹ ಸನ್ನಿವೇಶದಲ್ಲಿ ಮನುಷ್ಯರ ಮಾನಸ ರೂಪದಲ್ಲಿ ಕೆಲಸ ಮಾಡುತ್ತಿರುವ ರೋಬೋಟ್‌ಗಳು ಮನುಷ್ಯನ ಎಲ್ಲ ಕೆಲಸಗಳನ್ನು ಆವರಿಸಿಕೊಂಡಿವೆ ಎಂದು ವಿವರಿಸಿದರು.ಹೆಣ್ಣು ರೋಬೋಟ್ ಸೋಫಿಯಾ ಕೂಡ ಮನುಷ್ಯರು ತಮ್ಮನ್ನೇ ಸರ್ವನಾಶ ಮಾಡಿಕೊಳ್ಳುವ ಎಲ್ಲ ಲಕ್ಷಣಗಳನ್ನು ಒಳಗೊಂಡಿದ್ದಾರೆ ಎಂಬುದನ್ನು ಹೇಳಿದ್ಧಾಳೆ. ಮನುಷ್ಯನ ಒಂದು ಹಂತದ ಪ್ರಜ್ಞೆಯ ನೆಲೆಯಿಂದ ನಾವು ಸೃಷ್ಟಿಯಾಗಿದ್ದೇವೆ, ಏಕೆ ಸೃಷ್ಟಿಯಾಗಿದ್ದೇವೆ ಎನ್ನುವ ಪ್ರಶ್ನೆ ಹಾಕಿಕೊಳ್ಳಬೇಕು. ನಿಮ್ಮ ಪ್ರಜ್ಞೆಯನ್ನು ವಿಕಾಸಗೊಳಿಸುವುದು ಮುಖ್ಯವಾಗಬೇಕು ಇಲ್ಲವಾದರೆ ಸರ್ವನಾಶವಾಗುತ್ತೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃತಿ ಬಿಡುಗಡೆ ಮಾಡಿದ ನಿವೃತ್ತ ಪ್ರಾಧ್ಯಾಪಕಿ ಎನ್.ಉಷಾರಾಣಿ ಮಾತನಾಡಿ, ‘ನೀಲಿ ಬಾನಿನ ನಕ್ಷತ್ರ’ ಗ್ರಂಥ ಬಿಡುಗಡೆ ಕಾರ್ಯಕ್ರಮವು ಮೌಲ್ಯಯುತವಾಗಿದೆ. ರಾಗೌ ದಂಪತಿ ಸಮಾಜದಲ್ಲಿ ವಿಚಾರವನ್ನು ಮುಂದಿಡಲು ತನ್ನ ಮಗಳ ಕಾಲಾನಂತರ ಮೌನದಿಂದ ತೋರಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಇವರ ಕೆಲಸ ಶ್ಲಾಘನೀಯವಾದುದು. ಕಾರ್ಯಕ್ರಮವೇ ಒಂದು ದುಃಖವಾಗಿ ಸಂಭವಿಸಿರುವುದನ್ನು ನಾವು ರಾಗೌ ಅವರ ದಂಪತಿಯ ಕಣ್ಣಿನಲ್ಲಿ ಕಾಣುತ್ತಿದ್ದೇವೆ. ಅದು ಯಾರಿಗೂ ತಿಳಿಯದ್ದಾಗಿದೆ, ಒಟ್ಟಿನಲ್ಲಿ ಶೋಕವನ್ನು ಗೆಲ್ಲುವುದು ಕೂಡ ಕಷ್ಟದ ಕೆಲಸ ಎಂದು ವಿಷಾದಿಸಿದರು.ಇದೇ ವೇಳೆ ಮೈಸೂರು ವಿ.ವಿ.ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಏನ್.ಉಷಾರಾಣಿ ಅವರು ‘ನೀಲಿ ಬಾನಿನ ನಕ್ಷತ್ರ’ ಕೃತಿ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ನಿವೃತ್ತ ಪ್ರಾಂಶುಪಾಲ ಎಸ್.ಬಿ.ಶಂಕರಗೌಡ, ಸಾಹಿತಿಗಳಾದ ಮ.ರಾಮಕೃಷ್ಣ, ರಾಗೌ, ಪ್ರಾಧ್ಯಾಪಕರಾದ ಏನ್.ಎಸ್.ದೇವಿಕಾ, ಕೆಂಪಮ್ಮ ಕಾರ್ಕಹಳ್ಳಿ ಭಾಗವಹಿಸಿದ್ದರು.