ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ನಡೆಯುತ್ತಿರುವ ಯೋಜನೆಯ ಅರ್ಥಪೂರ್ಣ ಕಾರ್ಯಕ್ರಮಗಳು ದೇಶ ವಿದೇಶಗಳು ಮೆಚ್ಚುವಂತಹ ರೀತಿಯಲ್ಲಿ ನಡೆಯುತ್ತಿರುವ ಬಗ್ಗೆ ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ ವ್ಯಕ್ತಪಡಿಸಿದರು.

ಕುಶಾಲನಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ನಡೆಯುತ್ತಿರುವ ಯೋಜನೆಯ ಅರ್ಥಪೂರ್ಣ ಕಾರ್ಯಕ್ರಮಗಳು ದೇಶ ವಿದೇಶಗಳು ಮೆಚ್ಚುವಂತಹ ರೀತಿಯಲ್ಲಿ ನಡೆಯುತ್ತಿರುವ ಬಗ್ಗೆ ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ ವ್ಯಕ್ತಪಡಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಕೊಡಗು ಆಶ್ರಯದಲ್ಲಿ ಆಯೋಜನೆ ಮಾಡಿದ ಗಾಂಧಿ ಸ್ಮೃತಿ ಮತ್ತು ಜನಜಾಗೃತಿ ಸಮಾವೇಶ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸೇರಿದಂತೆ ನೆರೆ ರಾಜ್ಯಗಳಲ್ಲಿ 2 ಸಾವಿರಕ್ಕೂ ಹೆಚ್ಚಿನ ಮದ್ಯವರ್ಜನ ಶಿಬಿರ ಹಮ್ಮಿಕೊಂಡು ಲಕ್ಷಾಂತರ ಕುಟುಂಬಗಳ ಜೀವನ ಸುಗಮವಾಗಿಸಲು ಶ್ರಮಿಸಿದ ಕಾರ್ಯಕ್ರಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಮಾನವ ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಸಂದರ್ಭ ಗಾಂಧೀಜಿಯವರ ತತ್ವ ಸಿದ್ಧಾಂತಗಳು ಮತ್ತು ಅವರ ಆತ್ಮಶಕ್ತಿಯ ಸಂದೇಶಗಳು ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಲು ಪ್ರಯೋಜನವಾಗಿದೆ ಎಂದರು. ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ ಪಿ ಶಶಿಧರ್ ಮಾತನಾಡಿ ಗಾಂಧೀಜಿಯವರ ಶಾಂತಿ ಮಂತ್ರದ ಆದರ್ಶಗಳು ಪರಸ್ಪರ ಪ್ರೀತಿ ಹಂಚುವ ಪ್ರೇರಣೆಗೆ ಒಳಗಾಗಬೇಕಾದ ಅಗತ್ಯತೆ ಇದೆ ಎಂದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕೊಡಗು ಜಿಲ್ಲೆ ಅಧ್ಯಕ್ಷ ಎ ಟಿ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ವೇದಿಕೆಯ ಸ್ಥಾಪಕ ಅಧ್ಯಕ್ಷ ವಕೀಲರು ಆದ ಅಭಿಮನ್ಯು ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ವ್ಯಸನಿಗಳನ್ನು ಮುಕ್ತಗೊಳಿಸಿ ಸಮಾಜದ ಮುಖ್ಯ ವಾಹಿನಿಯಲ್ಲಿ ಅವರಿಗೆ ಗೌರವಯುತ ಸ್ಥಾನ ಸಿಗುವಂತೆ ಮಾಡುವುದು ಈ ಜಾಗೃತಿಯ ಉದ್ದೇಶವಾಗಿದೆ ಎಂದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಅರುಣ್ ಕುಮಾರ್ ಬಾನಂಗಡ ಅವರು ಮದ್ಯಪಾನದಿಂದ ಉಂಟಾಗುವ ಸಾಮಾಜಿಕ ಕಷ್ಟನಷ್ಟಗಳು ಸರ್ಕಾರದ ಬೊಕ್ಕಸಕ್ಕೆ ಆಗುವ ನಷ್ಟ ಕುರಿತಂತೆ ಸರ್ಕಾರದ ಮೂಲಕ ವೈಜ್ಞಾನಿಕ ಅಧ್ಯಯನ ಸಮಿತಿ ರಚನೆ ಮಾಡಲು ಒತ್ತಾಯ, ರಾಜ್ಯಕ್ಕೆ ಶಾಪವಾಗಿ ಪರಿಣಮಿಸಿರುವ ಅಬಕಾರಿ ಪದ್ಧತಿಯನ್ನು ರದ್ದುಗೊಳಿಸುವ, ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಪಾನ ಮತ್ತಿತರ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಮೂಲಕ ಪ್ರಯತ್ನಿಸುವುದು ಸೇರಿದಂತೆ ಹಲವಾರು ಬೇಡಿಕೆಗಳ ಠರಾವು ಪತ್ರ ಮಂಡನೆ ಮಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ಜಯಲಕ್ಷ್ಮಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಮಾಜಿ ಅಧ್ಯಕ್ಷ ಕೆ ಸತೀಶ್ ಹೊನ್ನವಳ್ಳಿ, ಕೊಡಗು ಜಿಲ್ಲೆ ಸಂಘಟನೆಯ ಉಪಾಧ್ಯಕ್ಷ ಪುಂಡರಿಕಾಕ್ಷ, ಕೋಶಾಧಿಕಾರಿ ಶಾಂತಮಲ್ಲಪ್ಪ, ಪ್ರಾದೇಶಿಕ ಅಧಿಕಾರಿ ಗಣೇಶ್ ಆಚಾರ್ಯ, ಮತ್ತು ಸಂಘಟನೆಯ ನಿರ್ದೇಶಕ ವಿಠಲ ಎಸ್ ಸಾಲಿಯಾನ್ ಮತ್ತಿತರರಿದ್ದರು.