ಅಕ್ರಮ ಮರಳು ಸಾಗಿಸುತ್ತಿದ್ದ ಟಿಪ್ಪರ್ ವಾಹನ ಡಿಕ್ಕಿ ಹೊಡೆದು ಓರ್ವ ವ್ಯಕ್ತಿಯನ್ನು ಬಲಿ ಪಡೆದ ಮಾಹಿತಿ ಇದ್ದರೂ ಪೊಲೀಸ್ ಠಾಣೆಯಲ್ಲಿ ಮರಳು ದಂಧೆಕೋರರ ಮೇಲೆ ಪ್ರಕರಣ ದಾಖಲಿಸಲು ಗಣಿ ಮತ್ತು ಭೂ ವಿಜ್ಞಾನಿಗಳು ವಿಳಂಬ ಮಾಡಿದ್ದಕ್ಕೆ ಗ್ರಾಮಸ್ಥರು ಮತ್ತು ಮೃತನ ಕುಟಂಬಸ್ಥರು ಆಕ್ರೋಶ
ಗಂಗಾವತಿ: ನವಲಿಯಿಂದ ಗಂಗಾವತಿಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೈರಾಪುರ-ಆದಾಪುರ ಗ್ರಾಮದ ಬಳಿ ಭಾನುವಾರ ಬೆಳಗ್ಗೆ ನಡೆದಿದೆ.
ನವಲಿ ಗ್ರಾಮದ ದಳಪತಿ ರುದ್ರಗೌಡ ಪೊಲೀಸ್ ಪಾಟೀಲ್ ( 61) ಸ್ಥಳದಲ್ಲೆ ಮೃತಪಟ್ಟ ದುರ್ದೈವಿ. ಈತ ತನ್ನ ಪುತ್ರ ರಾಮನಗೌಡನ ಜತೆಗೆ ಬೈಕ್ ಮೇಲೆ ಬೈರಾಪುರದಿಂದ ನವಲಿ ಗ್ರಾಮಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ನವಲಿಯಿಂದ ಗಂಗಾವತಿಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಬೈಕ್ ಚಲಾಯಿಸುತ್ತಿದ್ದ ರಾಮನಗೌಡ ಬೈಕ್ ಮೇಲಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದರೆ. ಹಿಂದೆ ಕುಳಿತ್ತಿದ್ದ ತಂದೆ ರುದ್ರಗೌಡರನ್ನು ಟಿಪ್ಪರ್ ಎಳೆದುಕೊಂಡು ಹೋಗಿದ್ದರಿಂದ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಮರಳು ದಂಧೆ ನಡೆಸುತ್ತಿದ್ದ ಹೆಬ್ಬಾಳ ಗ್ರಾಮದ ಉಮೇಶ ಎನ್ನುವರಿಗೆ ಟಿಪ್ಪರ್ ವಾಹನ ಸೇರಿದ್ದು, ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ.ನವಲಿ ಗ್ರಾಮಸ್ಥರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಟಿಪ್ಪರ್ ವಾಹನವನ್ನು ಕನಕಗಿರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಪ್ರಕರಣ ದಾಖಲಿಸಲು ವಿಳಂಬ: ಆಕ್ರೋಶ: ಅಕ್ರಮ ಮರಳು ಸಾಗಿಸುತ್ತಿದ್ದ ಟಿಪ್ಪರ್ ವಾಹನ ಡಿಕ್ಕಿ ಹೊಡೆದು ಓರ್ವ ವ್ಯಕ್ತಿಯನ್ನು ಬಲಿ ಪಡೆದ ಮಾಹಿತಿ ಇದ್ದರೂ ಪೊಲೀಸ್ ಠಾಣೆಯಲ್ಲಿ ಮರಳು ದಂಧೆಕೋರರ ಮೇಲೆ ಪ್ರಕರಣ ದಾಖಲಿಸಲು ಗಣಿ ಮತ್ತು ಭೂ ವಿಜ್ಞಾನಿಗಳು ವಿಳಂಬ ಮಾಡಿದ್ದಕ್ಕೆ ಗ್ರಾಮಸ್ಥರು ಮತ್ತು ಮೃತನ ಕುಟಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಟಿಪ್ಪರ್ ಮಾಲೀಕ ಮತ್ತು ನಾಪತ್ತೆಯಾದ ಚಾಲಕನ್ನು ಬಂಧಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ನವಲಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಮರಳು ಸಂಗ್ರಹ ದಂಧೆ ನಡೆಯುತ್ತಿದ್ದು, ಈ ಮರಳು ಸಾಗಿಸುತ್ತಿದ್ದ ವಾಹನಗಳ ಅಪಘಾತದಿಂದ ಸುಮಾರು 25ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಕಾಟಾಚಾರಕ್ಕೆ ಗಣಿ ಮತ್ತು ಭೂ ಇಲಾಖೆಯಿಂದ ಅನುಮತಿ ಪಡೆದು ಅಕ್ರಮವಾಗಿ ರಾತ್ರೋರಾತ್ರಿ ಸಾಗಾಣಿಕೆ ನಡೆಸುತ್ತಿರುವುದರ ಬಗ್ಗೆ ಗ್ರಾಮಸ್ಥರು ತಹಸೀಲ್ದಾರ, ಪೊಲೀಸ್ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನಿಗಳಿಗೆ ಮಾಹಿತಿ ನೀಡಿದ್ದರೂ ಸಹ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ. ಪ್ರತಿ ವರ್ಷ 5 ರಿಂದ 10 ಜನರು ಬಲಿ ತೆಗೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಚಾಲಕರು ಮದ್ಯಪಾನ ಮಾಡಿ ಟಿಪ್ಪರ್ ಚಲಾಯಿಸುವದು,ವಾಹನಗಳಿಗೆ ಬ್ರೇಕ್ ಇಲ್ಲದೇ ಇರುವದು, ನಂಬರ್ ಪ್ಲೇಟ್ ಇಲ್ಲದೆ ಸಂಚಾರ ಮಾಡುತ್ತಿರುವದು ಅಪಘಾತಕ್ಕೆ ಕಾರಣವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮರಳು ಸಾಗಿಸುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾನೆ. ಟಿಪ್ಪರ್ ಮಾಲೀಕ ಹಾಗೂ ಚಾಲಕನ ಹೆಸರು ಗೊತ್ತಾಗಿಲ್ಲ. ಈ ದಂಧೆಗೆ ಕಡಿವಾಣ ಹಾಕಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನಿ ನಾಗರಾಜ್ ತಿಳಿಸಿದ್ದಾರೆ.
ನವಲಿ ಗ್ರಾಮದಲ್ಲಿ ಅಕ್ರಮ ಮರಳು ದಂಧೆ ಅಧಿಕವಾಗಿದೆ. ಕಳೆದ ವಾರ ಜೆಸಿಬಿ ಸೇರಿದಂತೆ ಟಿಪ್ಪರ್‌ಗಳನ್ನು ವಶಪಡಿಸಿಕೊಂಡು ಮರಳು ದಂಧೆಕೋರರ ಮೇಲೆ ಪ್ರಕರಣ ದಾಖಲಿಸಿದೆ. ಕೂಡಲೇ ಮರಳು ಸಾಗಿಸುತ್ತಿದ್ದ ಟಿಪ್ಪರ್ ವಶ ಪಡಿಸಿಕೊಳ್ಳುತ್ತೇವೆ ಎಂದು ಗಂಗಾವತಿ ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್ ತಿಳಿಸಿದ್ದಾರೆ.