ಸಾರಾಂಶ
ನದಿ ಜಾಗೃತಿ ಯಾತ್ರೆಗೆ ತಲಕಾವೇರಿ ಕ್ಷೇತ್ರದಲ್ಲಿ ಚಾಲನೆ
ಕನ್ನಡಪ್ರಭ ವಾರ್ತೆ ಕುಶಾಲನಗರಪ್ರಸಕ್ತ ದಿನಗಳಲ್ಲಿ ಪ್ರಕೃತಿಯೊಂದಿಗೆ ಮಾನವನ ಸಂಬಂಧ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.ಅವರು ಅಖಿಲ ಭಾರತ ಸನ್ಯಾಸಿ ಸಂಘ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 14ನೇ ವರ್ಷದ ತಲಕಾವೇರಿ-ಪೂಂಪ್ ಹಾರ್ ನದಿ ಜಾಗೃತಿ ಯಾತ್ರೆಗೆ ತಲಕಾವೇರಿ ಕ್ಷೇತ್ರದಲ್ಲಿ ಚಾಲನೆ ನೀಡಿ ಮಾತನಾಡಿದರು.ನದಿ ಜಲ ಮೂಲಗಳನ್ನು ಸ್ವಚ್ಛವಾಗಿ ಹರಿಯಲು ಬಿಡಬೇಕು. ಪ್ರಕೃತಿ ಮತ್ತು ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಲಮೂಲಗಳ ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರು ಕಾಳಜಿ ಹೊಂದಬೇಕು. ರಾಷ್ಟ್ರದಲ್ಲಿ ಜಲಮೂಲಗಳು, ನದಿಗಳು ಕಣ್ಮರೆ ಹಾಗೂ ಕಲುಷಿತಗೊಂಡು ನೀರು ನೇರ ಬಳಕೆಗೆ ಅಡ್ಡಿ ಉಂಟಾಗುತ್ತಿದೆ ಎಂದರು.ಯಾವುದೇ ಪ್ರಾಣಿ ಪಕ್ಷಿಗಳು ಪ್ರಕೃತಿಗೆ ಹಾನಿ ಮಾಡುವುದಿಲ್ಲ, ಮಾನವನ ಸ್ವಾರ್ಥ ಹಾಗೂ ಪ್ರಕೃತಿಯ ಮೇಲೆ ಮಾನವನ ಹಸ್ತಕ್ಷೇಪ ನಿಲ್ಲಬೇಕಾಗಿದೆ. ಆ ಮೂಲಕ ಸ್ವಚ್ಛ ಕಾವೇರಿ, ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ ಎಂದು ಹೇಳಿದರು.ಉತ್ತರದಲ್ಲಿ ಗಂಗಾ ಆರತಿ ರೀತಿಯಲ್ಲಿ ದಕ್ಷಿಣ ಭಾರತದಲ್ಲಿ ಕಾವೇರಿ ನದಿಗೆ ಆರತಿ ಬೆಳಗುವ ಕಾರ್ಯಕ್ರಮದ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ಹರಿಸಿರುವುದು ನಿಜಕ್ಕೂ ಮೆಚ್ಚುವ ಕಾರ್ಯ. ಈ ಮೂಲಕ ಜನರಿಗೆ ನದಿ ಸಂರಕ್ಷಣೆಯ ಮಹತ್ವ ಅರಿವು ಹಾಗೂ ಹೆಚ್ಚಿನ ಜಾಗೃತಿ ಉಂಟಾಗಲಿದೆ ಎಂದರು.
ಅಭಿವೃದ್ಧಿಗೊಂಡಿರುವ ರಾಷ್ಟ್ರಗಳಲ್ಲಿ ಜಲ ಮೂಲಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ ಶ್ರೀಗಳು, ಯಾವುದೇ ಪ್ರಾಣಿಗಳು ಪಕ್ಷಿಗಳು ಜಲಮೂಲಗಳನ್ನು ಕಲುಷಿತ ಗೊಳಿಸುವುದಿಲ್ಲ. ಮಾನವನ ಹಸ್ತಕ್ಷೇಪವೇ ನದಿ ನೀರಿನ ಗುಣಮಟ್ಟ ಕ್ಷೀಣಿಸಲು ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸ್ವಚ್ಛ ಕಾವೇರಿಗಾಗಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನದಿ ಸಂರಕ್ಷಣೆಯ ಕುರಿತಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಕಾವೇರಿ ಸಂರಕ್ಷಣೆಯ ನಿಟ್ಟಿನಲ್ಲಿ ಹಲವು ಕ್ರಿಯಾ ಯೋಜನೆಗಳನ್ನು ಹಮ್ಮಿಕೊಂಡಿದೆ. ನದಿಗೆ ಜೀವಂತ ಸ್ಥಾನಮಾನ ನೀಡುವ ಮೂಲಕ ನದಿಯ ರಕ್ಷಣೆಗೆ ಮುಂದಾಗ ಬೇಕಾಗಿದೆ. ಜಲಮೂಲಗಳು ಹಾಗೂ ನದಿಗಳ ಸಂರಕ್ಷಣೆಗಾಗಿ ಕಾನೂನು ರೂಪಿಸುವುದರೊಂದಿಗೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನಹರಿಸಬೇಕಾಗಿದೆ ಎಂದು ಹೇಳಿದರು.ಅಖಿಲ ಭಾರತ ಸನ್ಯಾಸಿಗಳ ಸಂಘದ ಪ್ರಮುಖರಾದ ಶ್ರೀ ವೇದಾಂತ ನಂದ ಸ್ವಾಮೀಜಿ ಮಾತನಾಡಿ, ದಕ್ಷಿಣ ಭಾರತದ ಜೀವನದಿಯಾಗಿರುವ ಕಾವೇರಿ ಕೋಟ್ಯಂತರ ಜನರ ಜೀವ ಸೆಲೆಯಾಗಿದೆ. ಮೂಲ ಕಾವೇರಿಯಿಂದ ನದಿ ಸಮುದ್ರ ಸಂಗಮವಾಗುವ ತನಕ ಅದರ ಸಂಪೂರ್ಣ ರಕ್ಷಣೆಯ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಕಳೆದ 14 ವರ್ಷಗಳಿಂದ ನದಿಯುದ್ದಕ್ಕೂ ಎರಡು ರಾಜ್ಯಗಳ ಸಾಧುಸಂತರು ಹಾಗೂ ಕಾರ್ಯಕರ್ತರು ನಿರಂತರವಾಗಿ ಹಲವು ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಿಗೆ ಅರಿವು ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಸಂಘದ ಪದಾಧಿಕಾರಿ ಶ್ರೀ ಶಿವರಾಮನಂದ ಸ್ವಾಮೀಜಿ ಮಾತನಾಡಿ, ನದಿಯ ಬಗ್ಗೆ ಜನತೆಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಮ್ಮ ಸಂಘಟನೆಗಳ ಮೂಲಕ ತಮಿಳುನಾಡಿನ ಬಹುತೇಕ ನದಿ ತಟಗಳಲ್ಲಿ ಆರತಿ ಕಾರ್ಯಕ್ರಮ ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಕಾವೇರಿ ನಾಡಿನ ಜನತೆ ಉತ್ತಮ ಮಳೆ ಬೆಳೆಯಾಗುವುದರೊಂದಿಗೆ ಸುಭೀಕ್ಷವಾಗಿ ಜೀವನ ನಡೆಸುವಂತಾಗಲಿ ಎನ್ನುವುದು ನಮ್ಮ ಕಾರ್ಯಕ್ರಮಗಳ ಉದ್ದೇಶ ಹಾಗೂ ಗುರಿಯಾಗಿದೆ ಎಂದರು.ತಲಕಾವೇರಿ ಕ್ಷೇತ್ರದ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ಯಾತ್ರೆಗೆ ಶುಭ ಕೋರಿದರು.* ವಿಶೇಷ ಪೂಜೆದಕ್ಷಿಣ ಭಾರತದ ತಮಿಳುನಾಡು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಸಾಧು-ಸಂತರ ತಂಡದ ಸದಸ್ಯರು ಕ್ಷೇತ್ರದಲ್ಲಿ ಕಾವೇರಿ ಕುಂಡಿಕೆ ಬಳಿ ವಿಶೇಷ ಪೂಜೆ ನಂತರ ಕಾವೇರಿ ಮಾತೆಯ ರಥಕ್ಕೆ ಪೂಜೆ ಸಲ್ಲಿಸಿ ಕಾವೇರಿ ಮಾತೆಗೆ ಅರ್ಚನೆ, ಅಷ್ಟೋತ್ತರ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.* ಸನ್ಮಾನ
ಮೌನ ವ್ರತದಲ್ಲಿರುವ ಅಖಿಲ ಭಾರತ ಸನ್ಯಾಸಿಗಳ ಸಂಘದ ಸಂಸ್ಥಾಪಕ ಶ್ರೀ ರಮಾನಂದ ಸ್ವಾಮೀಜಿ, ಅರಮೇರಿ ಶ್ರೀಗಳನ್ನು, ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಮತ್ತು ಕ್ಷೇತ್ರದ ಪಾರುಪತ್ತೆಗಾರರಾದ ಮಹೇಶ್ ಅವರನ್ನು ಸನ್ಮಾನಿಸಿದರು.ಈ ಸಂದರ್ಭ ಅಖಿಲ ಭಾರತ ಸನ್ಯಾಸಿಸಂಘದ ಜಾತ್ರೆಯ ಸಂಚಾಲಕ ಆದಿತ್ಯಾನಂದ ಸ್ವಾಮೀಜಿ, ಕಾವೇರಿ ರಿವರ್ ಪ್ರೊಟೆಕ್ಷನ್ ಟ್ರಸ್ಟ್ ಪ್ರಮುಖ ವಾಸು ರಾಮಚಂದ್ರನ್, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಕುಶಾಲನಗರ ಕೊಡವ ಸಮಾಜ ನಿರ್ದೇಶಕಿ ಧರಣಿ ಸೋಮಯ್ಯ ಸಾಧು ಸಂತರು ಮತ್ತು ಕಾರ್ಯಕರ್ತರು ಇದ್ದರು.ನಂತರ ಭಾಗಮಂಡಲ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ಸಂಗಮದಲ್ಲಿ ಯಾತ್ರಾ ತಂಡ ಪೂಜೆ ಸಲ್ಲಿಸಿ ಕಾವೇರಿ ಮಾತೆಗೆ ಅಭಿಷೇಕ ನೆರವೇರಿಸಿದರು. ಬಳಿಕ ನದಿಗೆ ಮಹಾ ಆರತಿ ಬೆಳಗಿದರು.