16000 ಪುಟ ಆರ್‌ಟಿಐ ದಾಖಲೆ ಒಯ್ಯಲು ಎತ್ತಿನಗಾಡಿ ತಂದ!

| Published : Nov 22 2025, 02:15 AM IST

16000 ಪುಟ ಆರ್‌ಟಿಐ ದಾಖಲೆ ಒಯ್ಯಲು ಎತ್ತಿನಗಾಡಿ ತಂದ!
Share this Article
  • FB
  • TW
  • Linkdin
  • Email

ಸಾರಾಂಶ

ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಶಂಕೆಯ ಮೇರೆಗೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿ ದಾಖಲೆ ಕೇಳಿದ್ದ ರೈತನೊಬ್ಬ 16000 ಪುಟಗಳ ಮಾಹಿತಿಯನ್ನು ಪಡೆಯಲಿಕ್ಕಾಗಿ ತನ್ನ ಹಸುವನ್ನು ಮಾರಾಟ ಮಾಡಿ ಅದರಿಂದ ಬಂದ ₹32000 ಹಣವನ್ನು ಗ್ರಾಮ ಪಂಚಾಯಿತಿಗೆ ಪಾವತಿಸಿದ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ.

- 32000 ಶುಲ್ಕ ಕಟ್ಟಲು ಹಸುವನ್ನೇ ಮಾರಿದ ರೈತ

ಟಾಪ್‌- ವಾರೆವ್ಹಾ

- ಅವ್ಯವಹಾರ ಪತ್ತೆಗೆ ಹಾಸನ ರೈತನ ಹರಸಾಹಸ

---

ಕನ್ನಡಪ್ರಭ ವಾರ್ತೆ ಹಾಸನ

ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಶಂಕೆಯ ಮೇರೆಗೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿ ದಾಖಲೆ ಕೇಳಿದ್ದ ರೈತನೊಬ್ಬ 16000 ಪುಟಗಳ ಮಾಹಿತಿಯನ್ನು ಪಡೆಯಲಿಕ್ಕಾಗಿ ತನ್ನ ಹಸುವನ್ನು ಮಾರಾಟ ಮಾಡಿ ಅದರಿಂದ ಬಂದ ₹32000 ಹಣವನ್ನು ಗ್ರಾಮ ಪಂಚಾಯಿತಿಗೆ ಪಾವತಿಸಿದ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ. ಹೀಗೆ ಸಿಕ್ಕ ಮಾಹಿತಿಯನ್ನು ತನ್ನ ಎತ್ತಿನಗಾಡಿಯಲ್ಲಿ ಮನೆಗೆ ಒಯ್ದಿದ್ದಾನೆ!

ಅರಕಲಗೂಡು ತಾಲೂಕಿನ ಬಸವನಹಳ್ಳಿ ಕೊಪ್ಪಲು ಗ್ರಾಮದ ಬಿ.ಎಸ್.ರವಿ ಎಂಬುವವರು 15ನೇ ಹಣಕಾಸು ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಕಾಮಗಾರಿಗಳ ಮಾಹಿತಿ ಕೋರಿ ಕಾಳೇನಹಳ್ಳಿ ಗ್ರಾಮ ಪಂಚಾಯಿತಿಗೆ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಆದರೆ, ಗ್ರಾಮ ಪಂಚಾಯಿತಿ ಪಿಡಿಒ ಈ ಯೋಜನೆಯ ಮಾಹಿತಿಯು ಬರೋಬ್ಬರಿ 16000 ಪುಟಗಳಲ್ಲಿ ಇದ್ದು, ಇದನ್ನು ನೀಡಬೇಕಾದರೆ ಪ್ರತಿ ಪುಟಕ್ಕೆ ₹2 ರಂತೆ ಒಟ್ಟು ₹32000 ಪಾವತಿ ಮಾಡಬೇಕು ಎಂದು ಹೇಳಿ ಕಳುಹಿಸಿದ್ದರು. ಇದರಿಂದ ಹಠಕ್ಕೆ ಬಿದ್ದ ರೈತ ರವಿ ಅವರು ತಮ್ಮ ಮನೆಯಲ್ಲಿದ್ದ ಹಾಲು ಕೊಡುವ ಹಸುವನ್ನು ₹32000ಕ್ಕೆ ಮಾರಾಟ ಮಾಡಿದ್ದು, ಅದೇ ಹಣವನ್ನು ತಂದು ಕಾಳೇನಹಳ್ಳಿ ಗ್ರಾಮ ಪಂಚಾಯಿತಿಗೆ ಪಾವತಿಸಿದ್ದಾರೆ.

ಎತ್ತಿನಗಾಡಿಯಲ್ಲಿ ಮಾಹಿತಿ ಹೊತ್ತೊಯ್ದ:

ಹಣ ಪಾವತಿ ಬಳಿಕ ಗ್ರಾಮ ಪಂಚಾಯಿತಿ ಅವರು ನೀಡಿದ ಬರೋಬ್ಬರಿ 16000 ಪುಟಗಳನ್ನು ಒಳಗೊಂಡ ದಾಖಲೆಗಳ ಮಾಹಿತಿ ಬಂಡಲ್‌ಗಳನ್ನು ತೆಗೆದುಕೊಂಡು ಹೋಗಲು ರೈತ ರವಿ ಅವರು ಕಾಳೇನಹಳ್ಳಿ ಗ್ರಾಮ ಪಂಚಾಯಿತಿಗೆ ತಮ್ಮ ಎತ್ತಿನಗಾಡಿ ತೆಗೆದುಕೊಂಡು ಬಂದಿದ್ದಾರೆ. ಅದರಲ್ಲಿ ನಾಲ್ಕೈದು ದೊಡ್ಡ ಬಂಡಲ್‌ಗಳನ್ನು ಇಟ್ಟುಕೊಂಡು ಹೋಗಿದ್ದಾರೆ.

ಗ್ರಾಮಸ್ಥರಿಂದ ದೂರು:ರೈತ ರವಿ ಅವರನ್ನು ಕುಗ್ಗಿಸಲು ಕೆಲ ಗ್ರಾಮಸ್ಥರು ಸುಖಾ ಸುಮ್ಮನೆ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಆದರೂ ರವಿ ಅವರು ಯಾವ ಬೆದರಿಕೆಗೂ ಹೆದರದೆ, ಪಿಡಿಒ ಅವರ ಹಣಕಾಸಿನ ವಿಚಾರಕ್ಕೂ ಕುಗ್ಗದೆ ತಾವು ಅಂದುಕೊಂಡತೆ ಆರ್‌ಟಿಐ ಅಡಿಯಲ್ಲಿ 15ನೇ ಹಣಕಾಸಿನ ಯೋಜನೆಯಡಿಯಲ್ಲಿ ಕೈಗೊಂಡ ಕಾಮಗಾರಿಗಳ ದಾಖಲೆಯನ್ನು ಪಡೆದುಕೊಂಡಿದ್ದಾರೆ.

* ಹಾಸನ ಜಿಲ್ಲೆ ಕಾಳೇನಹಳ್ಳಿ ಗ್ರಾ.ಪಂಗೆ 15ನೇ ಹಣಕಾಸಿನ ದಾಖಲೆ ಕೇಳಿದ್ದ ರೈತ* ಅರಕಲಗೂಡು ತಾಲೂಕಿನ ಬಸವನಹಳ್ಳಿ ಕೊಪ್ಪಲು ಗ್ರಾಮದ ಬಿ.ಎಸ್.ರವಿ

* ರೈತ ರವಿಯವರ ನಡೆಯಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಶಾಕ್

* ರವಿಯನ್ನು ಕುಗ್ಗಿಸಲು ಪೋಲಿಸ್ ಠಾಣೆಗೆ ಕೆಲ ಗ್ರಾಮಸ್ಥರಿಂದ ದೂರು ದಾಖಲು

* 16000 ಪುಟಗಳ ದಾಖಲೆ ನೀಡಲು ₹32000 ಪಾವತಿಸುವಂತೆ ಪಿಡಿಒ ಬೇಡಿಕೆ

* ಹಾಲು ಕೊಡುತ್ತಿದ್ದ ಹಸುವನ್ನು ₹32000ಕ್ಕೆ ಮಾರಿ ಹಣ ಪಾವತಿಸಿದ ರೈತ ರವಿ

* ದಾಖಲೆಪತ್ರಗಳನ್ನು ಎತ್ತಿನಗಾಡಿಯಲ್ಲಿ ಹಾಕಿಕೊಂಡು ಹೋದ ರೈತ* ಕೊನೆಗೂ ಮಾಹಿತಿ ಹಕ್ಕಿನಡಿ ದಾಖಲೆ ಪಡೆಯುವಲ್ಲಿ ರೈತ ರವಿ ಯಶಸ್ವಿ