ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಗುಣಮಟ್ಟದ ಆಹಾರ ಪದ್ಧತಿ ಅಳವಡಿಸಿಕೊಳ್ಳುವ ಜೊತೆಗೆ ದಿನನಿತ್ಯ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸುಧಾ ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ರಿಜಿಸ್ಟರ್ ಭಾರತಿನಗರ ವತಿಯಿಂದ ಸ್ಪಂದನ ಆಸ್ಪತ್ರೆ ಮತ್ತು ವರ್ಧಮಾನ ನೇತ್ರಾಲಯ ಸಹಯೋಗದೊಂದಿಗೆ ನವ ಜೀವನೋತ್ಸವ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪ್ರತಿದಿನ ಹೆಚ್ಚು ನಡೆದಾಡುವ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಆರೋಗ್ಯ ಉತ್ತಮಪಡಿಸಿಕೊಳ್ಳಬಹುದು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಡೆಸುತ್ತಿರುವ ಆರೋಗ್ಯ ಶಿಬಿರಗಳಿಂದ ಗ್ರಾಮಾಂತರ ಪ್ರದೇಶದ ಜನಸಾಮಾನ್ಯರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಲವು ಉಪಯುಕ್ತ ಕಾರ್ಯಕ್ರಮಗಳು ನಡೆಯುತ್ತಿವೆ. ಸಂಘದ ಸದಸ್ಯರೆಲ್ಲರೂ ಆರೋಗ್ಯ ಶಿಬಿರದ ಉಪಯೋಗ ಪಡೆದುಕೊಳ್ಳಬೇಕು ಎಂದರು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸುವರ್ಣ ಭಟ್ ಮಾತನಾಡಿ, ದುಶ್ಚಟಗಳನ್ನು ಬಿಟ್ಟು ಹೊಸ ಬದುಕು ಕಟ್ಟಿಕೊಂಡು ಜೀವನವನ್ನು ನಡೆಸುವುದರಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿ ಆಗಬಹುದು ಎಂದರು.

ಜಿಲ್ಲಾ ಜನಜಾಗೃತಿ ಸದಸ್ಯರಾದ ಕ್ಯಾತಘಟ್ಟ ರವಿಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಧರಣಿ ಪುಟ್ಟೇಗೌಡ, ವೈದ್ಯರಾದ ಮನೋಜ್, ನಿಕಿತಾ, ರಾಜು, ಸಾಗರ ಮೇಲ್ವಿಚಾರಕಿ ಅಶ್ವಿನಿ, ಭಾರತಿ ಸೇರಿದಂತೆ ಸೇವಾ ಪ್ರತಿನಿಧಿಗಳು ಸಂಘದ ಸದಸ್ಯರು ಹಾಜರಿದ್ದರು.

ಸರ್ಕಾರಿ ಶಾಲೆ ಉಳಿವಿಗೆ ಸದಾ ಸಹಕಾರ: ಮಲ್ಲಿಕಾರ್ಜುನ್

ಕಿಕ್ಕೇರಿ: ಮಕ್ಕಳು ಶಿಕ್ಷಣ, ಜ್ಞಾನಾರ್ಜನೆಯ ಹಸಿವನ್ನು ಪ್ರೀತಿಯಿಂದ ಸ್ವೀಕರಿಸಿ ಸಂತೃಪ್ತಿಪಡಿಸಿಕೊಳ್ಳಲು ಶಿಕ್ಷಕರು ಮಾರ್ಗದರ್ಶಕರಾಗಿದ್ದಾರೆ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ ತಿಳಿಸಿದರು.ಹೋಬಳಿಯ ಜಕ್ಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಶಾರದಾಪೂಜೆ ಸಮಾರಂಭದಲ್ಲಿ ಮಾತನಾಡಿ, ಸರ್ಕಾರಿ ಶಾಲೆ ಬಲವರ್ಧನೆ ಬಲುಮುಖ್ಯ, ಸರ್ಕಾರಿ ಶಾಲೆ ಉಳಿವಿಗೆ ಎಲ್ಲ ರೀತಿಯ ಸಹಕಾರ ಸದಾ ತಮ್ಮದಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷರಮೇಶ್ ಮಾತನಾಡಿ, ಕುಗ್ರಾಮದ ಇಲ್ಲಿನ ಶಾಲೆ ಯಾವುದೇ ಕಾರಣಕ್ಕೂ ಮುಚ್ಚುದಂತೆ ಕ್ರಮ ವಹಿಸಬೇಕು. ಸರ್ಕಾರಿ ಶಾಲೆ ಉಳಿಸುವುದು ಎಲ್ಲರ ಕರ್ತವ್ಯ. ಬಡಮಕ್ಕಳು, ದುರ್ಬಲ ವರ್ಗದವರಿಗೆ ಸರ್ಕಾರಿ ಶಾಲೆ ಅಕ್ಷಯ ಪಾತ್ರೆಯಾಗಿದೆ. ಸರ್ಕಾರಿ ಶಾಲೆ ಉಳಿದರೆ ಬಡವರ ಮಕ್ಕಳ ಶೈಕ್ಷಣಿಕ ಕಲ್ಯಾಣಾಭಿವೃದ್ಧಿಯಾಗಲಿದೆ ಎಂದರು.ಮುಖ್ಯಶಿಕ್ಷಕ ಹೇಮಣ್ಣಶೆಟ್ಟಿ ಮಾತನಾಡಿ, ಸರ್ಕಾರದಿಂದ ಉಚಿತವಾಗಿ ಎಲ್ಲ ಸವಲತ್ತು ಮಕ್ಕಳಿಗೆ ಸಿಗುತ್ತಿದೆ. ಶಿಕ್ಷಕರು ಉತ್ತಮ ಸೇವೆ ಮಾಡಲು ಸದಾ ಬದ್ಧರಿದ್ದೇವೆ. ಪೋಷಕರ ಸಹಕಾರದಿಂದ ಸರ್ಕಾರಿ ಶಾಲೆ ಬಲವರ್ಧನೆ ಖಂಡಿತ ಸಾಧ್ಯವಾಗಲಿದೆ ಎಂದರು.

ಶಾರದಾ ಪೂಜೆ ಪರೀಕ್ಷೆ ಭಯ ನಿವಾರಿಸಲು, ದೇವಿಯನ್ನು ಭಕ್ತಿಯಿಂದ ಪೂಜಿಸಿಸಬೇಕು. ಓದಿರುವುದನ್ನು ಬರೆಯಲು ಆತ್ಮಸ್ಥೈರ್ಯ ನೀಡುವ ದೇವಿಯ ಆರಾಧನೆ ಪೂಜೆ ಆಗಿದೆ ಎಂದು ಹೇಳಿದರು.ಮಕ್ಕಳು ಅಭಿನಯಗೀತೆ, ನೃತ್ಯ, ವಿವಿಧ ವೇಷ ಭೂಷಣ ಧರಿಸಿ ಹಾಡಿ ನಲಿದು ಸಂಭ್ರಮಸಿದರು. ಮಕ್ಕಳಿಂದ ಜರುಗಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಪ್ರಿಯಾ, ಸದಸ್ಯರಾದ ಶಿವರಾಜು, ಗೋವಿಂದರಾಜು, ದೇವರಾಜು, ಯುವರಾಜು, ದೊಡ್ಡೇಗೌಡ, ಶಿವಮ್ಮ, ಪವಿತ್ರಾ ಮತ್ತಿತರರಿದ್ದರು.