ನಗರದ ರಾಮನಹಳ್ಳಿ ಸ್ಮಶಾನದಲ್ಲಿ ಭಾನುವಾರ ಶಿವದೇವಾಲಯ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಶಿವ ಸರ್ವಂತರ್ಯಾಮಿ, ಸರ್ವಶಕ್ತ, ಶಿವನಿಲ್ಲದ ಜಾಗವೇ ಇಲ್ಲ ಹೀಗಾಗಿ ಸ್ಮಶಾನದಲ್ಲೂ ಶಿವನಿಗೆ ದೇವಾಲಯ ನಿರ್ಮಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ನಗರದ ರಾಮನಹಳ್ಳಿ ಸ್ಮಶಾನದಲ್ಲಿ ಭಾನುವಾರ ಶಿವದೇವಾಲಯ ಉದ್ಘಾಟಿಸಿ ಮಾತನಾಡಿ ರಾಮನಹಳ್ಳಿ ಹಿಂದೂ ರುದ್ರಭೂಮಿಗೆ ಶತಮಾನಗಳ ಇತಿಹಾಸವಿದೆ. ಇಲ್ಲಿ ಆಗಾಗ್ಗೆ ಸ್ವಚ್ಛತಾ ಸೇವಾ ಕಾರ್ಯಮಾಡುತ್ತಿದ್ದೆವು. ರುದ್ರಭೂಮಿಯಲ್ಲಿ ಒಂದು ದೇವಾಲಯಬೇಕೆಂಬ ಬಹಳ ವರ್ಷಗಳ ಬೇಡಿಕೆ. ಹಿಂದೆ ಒಂದು ದೇವಾಲಯ ಇತ್ತು. ಕಲ್ಲಿನ ವಿಗ್ರಹ ಇರಲಿಲ್ಲ, ನಗರ ಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ ಶಿವನ ಕಲ್ಲಿನ ವಿಗ್ರಹ ಕೆತ್ತಿಸಿ ಕೊಟ್ಟಿದ್ದಾರೆ ಎಂದರು.ಪುಣ್ಯದ ಮೂಲಕ ಬರುವ ಮನುಷ್ಯ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು. ಮನುಷ್ಯನಿಗೆ ಮಾತ್ರ ವಿವೇಚನಾ ಶಕ್ತಿ, ಬುದ್ದಿಶಕ್ತಿ, ಇಹ ಪರ ತಿಳಿದುಕೊಳ್ಳುವ ಆಧ್ಯಾತ್ಮಿಕ ಶಕ್ತಿ ಇದೆ. ಅದನ್ನು ಅರ್ಥಮಾಡಿಕೊಂಡು ಬದುಕಬೇಕು ಎಂದು ಹೇಳಿದರು.ಸಾವು ಎಲ್ಲರಿಗೂ ನಿಶ್ಚಿತ. ಸಾವು ಗೆದ್ದವರಾರಿಲ್ಲ. ನಿತ್ಯ ಸ್ಮಶಾನ ನೋಡುತ್ತಿದ್ದರೆ ಜೀವನದ ಸತ್ಯ ಅರಿತು ಪಾಪ ಪುಣ್ಯದ ಭೀತಿಯಲ್ಲಿ ಮನುಷ್ಯ ಬದುಕುತ್ತಾನೆ. ಆಗ ಬದುಕಿನ ಮೌಲ್ಯ ಅರ್ಥವಾಗಿ, ಕೆಟ್ಟದ್ದರಿಂದ ಪಾಪ, ಒಳ್ಳೆಯದರಿಂದ ಮಾತ್ರ ಒಳಿತು ಎಂಬ ಮನೋಭಾವ ಬಲಿಯಲು ಸಾಧ್ಯ. ಹೀಗಾಗಿ ಸ್ಮಶಾನದಲ್ಲಿ ಶಿವನ ದೇವಾಲಯ ನಿರ್ಮಿಸಲಾಗಿದೆ.
ಶಿವ ಸರ್ವಾಂತರ್ಯಾಮಿ, ಸರ್ವಶಕ್ತ, ಯಾರಲ್ಲೂ ಮೇಲು ಕೀಳು ಮಾಡದ ಶಿವ ಇಲ್ಲದ ಜಾಗ ಎಲ್ಲೂ ಇಲ್ಲ. ಮನುಷ್ಯ, ಪ್ರಾಣಿ ಪಕ್ಷಿಗಳಲ್ಲೂ ಶಿವನಿದ್ದಾನೆ, ಶಿವ ದೂರವಾದರೆ ಶವ ಆಗುತ್ತೇವೆ. ಹೀಗಾಗಿ ಶಿವನ ಧ್ಯಾನದಲ್ಲಿ ಇರಬೇಕೆಂಬ ಕಾರಣಕ್ಕೆ ಇಲ್ಲಿ ಶಿವ ದೇವಾಲಯ ಕಟ್ಟಿದ್ದೇವೆ ಎಂದರು.
ಬೆಳಗ್ಗೆಯಿಂದ ನವಗ್ರಹ, ರುದ್ರಹೋಮ ಶಿವ ಅಷ್ಟೋತ್ತರ ಸಹಸ್ರನಾಮ ಪೂಜೆಯನ್ನು ಸತ್ಯಮೂರ್ತಿ , ಶಿವಮೂರ್ತಿ ತಂಡ ನೆರವೇರಿಸಿತು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ನಗರ ಬಿಜೆಪಿ ಅಧ್ಯಕ್ಷ ಪುಷ್ಪರಾಜ್, ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ, ಕುಮಾರ್, ಮಣಿ, ಶಿವಕುಮಾರ್, ರವಿ, ವೆಂಕಟೇಶ್ ಮತ್ತಿತರರಿದ್ದರು.ಫೋಟೋನಗರದ ರಾಮನಹಳ್ಳಿ ಸ್ಮಶಾನದಲ್ಲಿ ಭಾನುವಾರ ಶಿವದೇವಾಲಯವನ್ನು ಸಿ.ಟಿ.ರವಿ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ನಗರ ಬಿಜೆಪಿ ಅಧ್ಯಕ್ಷ ಪುಷ್ಪರಾಜ್, ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ ಮೊದಲಾದವರಿದ್ದರು.