ಮನುಷ್ಯ ಚಿತ್ತಶುದ್ಧಿಗಾಗಿ ಗುರು ಮಾರ್ಗದರ್ಶನ ಪಡೆಯಲಿ: ವಚನಾನಂದ ಶ್ರೀ

| Published : Aug 09 2025, 12:00 AM IST

ಮನುಷ್ಯ ಚಿತ್ತಶುದ್ಧಿಗಾಗಿ ಗುರು ಮಾರ್ಗದರ್ಶನ ಪಡೆಯಲಿ: ವಚನಾನಂದ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯನಿಗೆ ಮೊದಲು ಚಿತ್ತ ಶುದ್ಧಿ ಬೇಕು. ಅದಕ್ಕಾಗಿ ಗುರುಗಳ ದರ್ಶನ ಬೋಧನ ಅತ್ಯವಶ್ಯ. ಗುರು ಲಿಂಗ ಜಂಗಮ ಪಾದೋದಕ ಪ್ರಸಾದದ ಮಹತ್ವ ಅರ್ಥ ಮಾಡಿಕೊಳ್ಳಬೇಕು.

ಹಾನಗಲ್ಲ: ಬಾಗಿ ನಡೆದವರ ಬಾಳು ಬಂಗಾರವಾಗುತ್ತದೆ. ಚಿತ್ತ ಶುದ್ಧಿ ಮೊದಲ ಆದ್ಯತೆಯಾಗಲಿ. ಅಹಂಕಾರದ ಅವಸರ ವೈಯಕ್ತಿಕ ಹಾಗೂ ಸಾಮಾಜಿಕವಾಗಿಯೂ ಸಫಲವಾಗದು ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿಗಳು ತಿಳಿಸಿದರು.

ಶುಕ್ರವಾರ ತಾಲೂಕಿನ ಶಂಕ್ರಕೊಪ್ಪ ಗ್ರಾಮದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲೂಕು ಘಟಕ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಪೂಜಾ ಕ್ರಿಯೆ ಹಾಗೂ ಅದರ ಲಾಭಗಳ ಕುರಿತು ವಿವರವಾದ ಮಾಹಿತಿ ನೀಡಿದರು.

ಮನುಷ್ಯನಿಗೆ ಮೊದಲು ಚಿತ್ತ ಶುದ್ಧಿ ಬೇಕು. ಅದಕ್ಕಾಗಿ ಗುರುಗಳ ದರ್ಶನ ಬೋಧನ ಅತ್ಯವಶ್ಯ. ಗುರು ಲಿಂಗ ಜಂಗಮ ಪಾದೋದಕ ಪ್ರಸಾದದ ಮಹತ್ವ ಅರ್ಥ ಮಾಡಿಕೊಳ್ಳಬೇಕು. ಲಿಂಗಾರ್ಚನೆ, ನಿರೀಕ್ಷಣೆ, ಲಿಂಗಾನುಸಂಧಾನದ ಅನುಭವವಾಗಬೇಕು. ಶಿವ ತತ್ವದ ನೈಜ ಅರ್ಥವನ್ನು ಅರಿಯುವುದು ಅತ್ಯಂತ ಮುಖ್ಯ ಎಂದರು.ದೇವ ಭಾಷೆಯನ್ನು ಜನ ಭಾಷೆಯನ್ನಾಗಿ ಎಲ್ಲರಿಗೂ ಲಿಂಗ ಪೂಜೆಯ ಅರಿವು ಮೂಡಿಸಿ, ಸ್ಥಾವರ ಲಿಂಗದ ಜತೆಗೆ ಇಷ್ಟಲಿಂಗವನ್ನು ಪೂಜೆಗೆ ನೀಡಿದ ಜಗಜ್ಯೋತಿ ಬಸವಣ್ಣನವರು ಯಾರೂ ಶೂದ್ರರಲ್ಲ. ಭಗವಂತನಿಗೆ ಎಲ್ಲರೂ ಸಮಾನರು. ಎಲ್ಲರಿಗೂ ಪೂಜೆಯ ಹಕ್ಕಿದೆ ಎಂದು ಪೂಜೆಗಾಗಿ ಇಷ್ಟಲಿಂಗವನ್ನು ಕರುಣಿಸಿದವರು ಬಸವಣ್ಣ ಎಂದರು.

ವಚನಗಳು ಚಿತ್ತವನ್ನು ಶುದ್ಧಿ ಮಾಡುವ ನಿರ್ಮಲ ಗಂಗೆಯಂತೆ. ದೇಹವೇ ದೇಗುಲ ಎಂದ ಬಸವಣ್ಣ ನಮ್ಮಲ್ಲಿಯೇ ಮಂದಿರವಿದೆ ಎಂಬುದನ್ನು ಕರುಣಿಸಿ, ಆತ್ಮನಲ್ಲಿ ಪರಮಾತ್ಮನನ್ನು ಕಾಣುವ ಸಂದೇಶ ನೀಡಿದ್ದಾರೆ ಎಂದರು.ವಚನ ಪಠಣದ ಮೂಲಕ ಲಿಂಗ ಪೂಜೆ ಕೈಗೊಂಡು, ಭಕ್ತರಿಗೂ ವಚನಗಳ ಮೂಲಕ ಲಿಂಗಪೂಜೆಯ ವಿಧಿ ವಿಧಾನಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಅಗಡಿ, ತಾಲೂಕು ಅಧ್ಯಕ್ಷ ಕರಿಬಸಪ್ಪ ಶಿವೂರ, ಪ್ರಧಾನ ಕಾರ್ಯದರ್ಶಿ ಎಸ್.ಎಂ. ಕೋತಂಬರಿ, ಬಸವಣ್ಣೆಪ್ಪ ಬೆಂಚಳ್ಳಿ, ಸಿದ್ದಲಿಂಗಪ್ಪ ಕಮಡೊಳ್ಳಿ, ಮಾರುತಿ ಶಿಡ್ಲಾಪೂರ, ಮಾಲತೇಶ ಸೊಪ್ಪಿನ, ಭುವನೇಶ್ವರ ಶಿಡ್ಲಾಪೂರ, ಮಲ್ಲಿಕಾರ್ಜುನ ಹಾವೇರಿ, ಮಹೇಶ ಹಾವೇರಿ, ಶಂಕ್ರಣ್ಣ ಬಿಸರಳ್ಳಿ, ಭರಮಣ್ಣ ಶಿವೂರ, ಮಧು ಪಾಣೀಗಟ್ಟಿ, ಅನಿತಾ ಶಿವೂರ, ಕೆ.ಬಿ. ಪಾಟೀಲ, ನಿಂಗಪ್ಪ ಪೂಜಾರ, ನಿಜಲಿಂಗಪ್ಪ ಮುದೆಪ್ಪನವರ ಇತರರು ಪಾಲ್ಗೊಂಡಿದ್ದರು.