ಸಾರಾಂಶ
ಬೆಂಗಳೂರು : ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ನಿರ್ಮಾಣ ಹಂತದ ಕಟ್ಟಡದ 5ನೇ ಮಹಡಿ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೂಗಾಡಿ ಕೆಲ ಕಾಲ ಹೈಡ್ರಾಮಾ ಸೃಷ್ಟಿಸಿದ ಘಟನೆ ಗುರುವಾರ ಜರುಗಿದೆ.
ದೇವನಹಳ್ಳಿ ನಿವಾಸಿ ಮಂಜುನಾಥ್(37) ಹೈಡ್ರಾಮಾ ಸೃಷ್ಟಿಸಿದವರು. ಶೇಷಾದ್ರಿಪುರ ಕಾಲೇಜಿನ ಹಿಂಭಾಗದ ನಿರ್ಮಾಣ ಹಂತದ ಕಟ್ಟಡದಲ್ಲಿ ಗುರುವಾರ ಬೆಳಗ್ಗೆ ಸುಮಾರು 7.30ಕ್ಕೆ ಈ ಘಟನೆ ನಡೆದಿದೆ. ಶೇಷಾದ್ರಿಪುರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸುಮಾರು ನಾಲ್ಕು ತಾಸು ಆತನ ಮನವೊಲಿಸಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿರ್ಮಾಣ ಹಂತದ ಕಟ್ಟಡದ 5ನೇ ಮಹಡಿ ಏರಿದ ಮಂಜುನಾಥ್, ನಾನು ಇಲ್ಲಿಂದು ಜಿಗಿದು ಸಾಯುತ್ತೇನೆ. ನನ್ನ ಹೆಂಡತಿ ನನ್ನನ್ನು ಬಿಟ್ಟು ಹೋಗಿರುವುದರಿಂದ ಜೀವನ ಬೇಸರವಾಗಿದೆ ಎಂದು ಕೂಗಲು ಆರಂಭಿಸಿದ್ದಾನೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಶೇಷಾದ್ರಿಪುರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆತನ ಮನವೊಲಿಸಲು ಹರಸಾಹಸಪಟ್ಟಿದ್ದಾರೆ.
ಆದರೂ ಆತ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಠ ಹಿಡಿದಿದ್ದ. ಬಳಿಕ ಆತನ ಪೋಷಕರನ್ನು ಸ್ಥಳಕ್ಕೆ ಕರೆಸಿಕೊಂಡು ಆತನನ್ನು ಸಮಾಧಾನಪಡಿಸಿ ಸುರಕ್ಷಿತವಾಗಿ ಕಟ್ಟಡದಿಂದ ಕೆಳಗೆ ಇಳಿಸಿದ್ದಾರೆ. ಮಂಜುನಾಥ್ ಈ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದು, ಕೌಟುಂಬಿಕ ಕಲಹದಿಂದ ಪತ್ನಿ ದೂರುವಾಗಿದ್ದಾರೆ. ಇದರಿಂದ ಖಿನ್ನತೆಗೆ ಒಳಗಾಗಿದ್ದ ಮಂಜುನಾಥ್‌ಗೆ ಪೋಷಕರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರು ಎಂದು ತಿಳಿದು ಬಂದಿದೆ.