ಕಳೆದ ತಿಂಗಳು ಅಬ್ಬಿಗೆರೆಯ ನಿಸರ್ಗ ಲೇಔಟ್‌ನಲ್ಲಿ ನಡೆದಿದ್ದ ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕನ ಕೊಲೆ ಪ್ರಕರಣ ಸಂಬಂಧ ಮೃತನ ಸ್ನೇಹಿತನನ್ನು ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ತಿಂಗಳು ಅಬ್ಬಿಗೆರೆಯ ನಿಸರ್ಗ ಲೇಔಟ್‌ನಲ್ಲಿ ನಡೆದಿದ್ದ ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕನ ಕೊಲೆ ಪ್ರಕರಣ ಸಂಬಂಧ ಮೃತನ ಸ್ನೇಹಿತನನ್ನು ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶ ಗೋರಖ್‌ಪುರದ ರವೀಂದರ್‌ ಬಂಧಿತನಾಗಿದ್ದು, ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಇನ್ನೂ ಇಬ್ಬರು ಆರೋಪಿಗಳ ಪತ್ತೆಗೆ ಪೊಲೀಸರ ತನಿಖೆ ಮುಂದುವರೆದಿದೆ. ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ತನ್ನ ಗೆಳೆಯ ವಿದ್ಯಾ ಪ್ರಸಾದ್‌ ಅಲಿಯಾಸ್‌ ವಿದ್ಯಾಭಾರತಿಯನ್ನು ಹತ್ಯೆಗೈದು ಬಳಿಕ ಖಾಲಿ ನಿವೇಶನದಲ್ಲಿ ಬಿಸಾಡಿ ಪರಾರಿಯಾಗಿದ್ದ. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.

ಮದ್ಯದ ಅಮಲಿನಲ್ಲಿ ಗಲಾಟೆ:

ನಿಸರ್ಗಲೇಔಟ್‌ ಸಮೀಪ ಬಾಡಿಗೆ ರೂಮ್‌ನಲ್ಲಿ ಉತ್ತರಪ್ರದೇಶದ ರವೀಂದರ್‌ ಹಾಗೂ ವಿದ್ಯಾಪ್ರಸಾದ್‌ ನೆಲೆಸಿದ್ದರು. ಪೆಂಟರ್ ಆಗಿ ಇಬ್ಬರು ಕೆಲಸ ಮಾಡುತ್ತಿದ್ದರು. ಏ.20 ರಂದು ರಾತ್ರಿ ರೂಮ್‌ನಲ್ಲಿ ಮದ್ಯ ಸೇವಿಸುವಾಗ ಕ್ಷುಲ್ಲಕ ಕಾರಣಕ್ಕೆ ಗೆಳೆಯರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿ, ವಿದ್ಯಾಪ್ರಸಾದ್‌ನ ಎದೆ ಹಾಗೂ ಹೊಟ್ಟೆಗೆ ಬಲವಾಗಿ ಗುದ್ದಿದ್ದ. ಈ ಹೊಡೆತದಿಂದ ನಿತ್ರಾಣನಾಗಿ ಆತ ಕುಸಿದು ಬಿದ್ದಿದ್ದಾನೆ. ಈ ಗಲಾಟೆ ಬಳಿಕ ರವೀಂದ್ರ ನಿದ್ರೆಗೆ ಜಾರಿದ್ದ. ಮರು ದಿನ ಬೆಳಗ್ಗೆ ಕೆಲಸಕ್ಕೆ ತೆರಳಿದ್ದ ರವೀಂದರ್‌, ಮಧ್ಯಾಹ್ನ ಮನೆಗೆ ಬಂದು ಸ್ನೇಹಿತನನ್ನು ಮಾತನಾಡಿಸಲು ಯತ್ನಿಸಿದ್ದಾನೆ. ರಾತ್ರಿ ಹಲ್ಲೆಯಿಂದ ವಿದ್ಯಾಪ್ರಸಾದ್ ಮೃತಪಟ್ಟಿದ್ದ.

ಗೆಳೆಯ ಸಾವಿನಿಂದ ಭಯಗೊಂಡ ರವೀಂದರ್, ಅದೇ ದಿನ ರಾತ್ರಿ ತನ್ನ ಸ್ನೇಹಿತರನ್ನು ರೂಮ್‌ಗೆ ಕರೆಸಿಕೊಂಡಿದ್ದಾನೆ. ಬಳಿಕ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ನಿರ್ಜನಪ್ರದೇಶದಲ್ಲಿ ಬಿಸಾಡಿದ ಆರೋಪಿಗಳು, ರಾತ್ರೋರಾತ್ರಿ ನಗರ ತೊರೆದು ತಮ್ಮೂರು ಸೇರಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಸೆರೆಯಾಗಿದ್ದು ಹೇಗೆ?

ಏ.24 ರಂದು ನಿಸರ್ಗ ಲೇಔಟ್‌ನ ಬಿಡಿಎ ಲೇಔಟ್‌ನ ಉದ್ಯಾನದಲ್ಲಿ ಅಪರಿಚಿತನ ವ್ಯಕ್ತಿ ಮೃತದೇಹ ಪತ್ತೆಯಾಗಿತ್ತು. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಮೃತದೇಹ ಪತ್ತೆಯಾದ 3 ದಿನಗಳ ಹಿಂದೆ ರಾತ್ರಿ ಬೈಕ್‌ವೊಂದರಲ್ಲಿ ಮೂವರು ಸಾಗುವ ದೃಶ್ಯ ಸಿಕ್ಕಿತು. ಈ ಸುಳಿವು ಆಧರಿಸಿ ತನಿಖೆಗಿಳಿದ ಕೊನೆಗೆ ಹಂತಕ ಜಾಡು ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ.