ಸಾರಾಂಶ
ಬೀದರ್ : ಪ್ರಜ್ವಲ್ ರೇವಣ್ಣನವರ ಎಂದು ಹೇಳಲಾದ ಅಶ್ಲೀಲ ವಿಡಿಯೋ ದೇಶ ಅಲ್ಲದೇ ವಿಶ್ವದಲ್ಲಿ ಕರ್ನಾಟಕ ರಾಜ್ಯದ ಮಾನ ಹರಾಜಾಗಿದೆ. ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ವಿಷಯವಾಗಿದೆ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ ಆರೋಪಿಸಿದರು.
ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಪಿ ವಿದೇಶಕ್ಕೆ ಪರಾರಿಯಾಗಲು ಕಾರಣ ಯಾರು ಎಂಬುದನ್ನು ತನಿಖೆಯಾಗಬೇಕು. ಹೆಣ್ಣು ಮಕ್ಕಳ ಜೊತೆ ಅನಾಗರಿಕತೆಯಿಂದ ನಡೆದುಕೊಂಡಿರುವ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದರು.
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿಯವರೆಗೆ ಪ್ರಜ್ವಲ್ ರೇವಣ್ಣ ವಿಷಯದಲ್ಲಿ ಇಂದಿಗೂ ಮಾತನಾಡಿಲ್ಲ. ಮೋದಿ ಪರಿವಾರದಲ್ಲಿ ಅತ್ಯಾಚಾರಿಗಳು, ಕೊಲೆಗಡುಕರಿದ್ದಾರೆ. ಎನ್‌ಡಿಎ ಸರ್ಕಾರ ಆರೋಪಿಗಳನ್ನು ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.
ನೇಹಾ ಹಿರೇಮಠ ವಿಷಯದಲ್ಲಿ ಬಿಜೆಪಿಗರು ಹೋರಾಟ ಮಾಡಿದ್ದರು. ಆದರೆ ಪ್ರಜ್ವಲ್ ರೇವಣ್ಣ ವಿಷಯದಲ್ಲಿ ಏಕೆ ಮಾತನಾಡುತ್ತಿಲ್ಲ? ಒಂದು ಕಡೆ ನಮ್ಮ ಸರ್ಕಾರ ಮಹಿಳಾ ಪರ ಎಂದು ‘ಬೇಟಿ ಬಚಾವೋ ಬೇಟಿ ಪಡಾವೋ,’ ‘ನಾರಿ ಸಮ್ಮಾನ್’ ಎಂದೆಲ್ಲಾ ಯೋಜನೆ ಜಾರಿಗೆ ತರುತ್ತಾರೆ. ಇನ್ನೊಂದು ಕಡೆ ಮಹಿಳೆಯರ ಮಾಂಗಲ್ಯ ಕಸಿಯುತಿದ್ದಾರೆ.
ಪ್ರಜ್ವಲ್ ರೇವಣ್ಣ ಉಮೇಶರೆಡ್ಡಿಗಿಂತ ವಿಕೃತಕಾಮಿ. ಇಂತಹ ವಿಕೃತ ಮನಸ್ಥಿತಿ ಹೊಂದಿರುವವರಿಗೆ ಕಠಿಣ ಶಿಕ್ಷೆಯಾಗಬೇಕು. ಈ ಕುರಿತು ರಾಜ್ಯಾದ್ಯಂತ ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಆರೋಪಿಗೆ ಕಠಿಣ ಶಿಕ್ಷೆ ಆಗುವವರೆಗೆ ನಿರಂತರ ಹೋರಾಟ ನಡೆಯಲಿದೆ ಎಂದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ನರೇಂದ್ರ ಮೋದಿ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದರು.
ಮಾಜಿ ರಾಜ್ಯಾಧ್ಯಕ್ಷೆ ಮಂಜುಳಾ ನಾಯ್ಡು ಮಾತನಾಡಿ, ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಶಕ್ತಿ ತುಂಬುವ ಕಾರ್ಯ ಮಾಡುತ್ತಿದೆ. ಮಹಿಳೆಯರಿಗೆ ಗೌರವಿಸುತ್ತಿದೆ. ಆದರೆ ಮಹಿಳೆಯರಿಗೆ ಗೌರವ ನೀಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಘಟನೆ ಖಂಡಿಸಿಲ್ಲ ಎಂದ ಅವರು, ಕರ್ನಾಟಕವು ಭಾರತದ ಒಳಗಡೆಯೇ ಇದೆ. ನಾರಿಶಕ್ತಿ ಮೇಲೆ ಅತ್ಯಾಚಾರ ಶೋಷಣೆಯಾಗುತ್ತಿದೆ. ದಯವಿಟ್ಟು ಖಂಡಿಸಿ ಎಂದು ತಿಳಿಸಿದರು. ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಅಲ್ಲದೇ ನೊಂದ ಮಹಿಳೆಯರಿಗೆ ನಾವು ಧೈರ್ಯ ತುಂಬುತ್ತೇವೆ. ಮುಂದೆಯೂ ಮಹಿಳೆಯರಿಗೆ ಅನ್ಯಾಯವಾಗಬಾರದು. ರಕ್ಷಣೆ ಕೊಡಲು ನಾವು ತಯಾರಾಗಿದ್ದೇವೆ. ಎಲ್ಲರೂ ಸೇರಿ ಮಹಿಳೆಯರಿಗೆ ನ್ಯಾಯ ಕೊಡಿಸೋಣ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷೆ ಪೂಜಾ ಜಾರ್ಜ ಸ್ಯಾಮುಯೆಲ್, ಪ್ರಧಾನ ಕಾರ್ಯದರ್ಶಿ ಅಕ್ಕಮಹಾದೇವಿ, ಹಿರಿಯರಾದ ಎ.ಐ.ಸಿ.ಸಿ ಮಾಜಿ ಸದಸ್ಯೆ ಡಾ. ಗುರಮ್ಮಾ ಸಿದ್ದಾರೆಡ್ಡಿ, ಮಾಜಿ ಜಿ.ಪಂ ಅಧ್ಯಕ್ಷೆ ರಾಜಶ್ರೀ ಶ್ರೀಕಾಂತ ಸ್ವಾಮಿ, ಪ್ರಮುಖರಾದ ವನೀಲಾ ಸೂರ್ಯವಂಶಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.