ವೈಜ್ಞಾನಿಕವಾಗಿ ನೀರು ನಿರ್ವಹಣೆ ಮಾಡಿ ಭೂಮಿ ಫಲವತ್ತತೆ ಕಾಪಾಡಿ: ಬಂಡಿವಡ್ಡರ್

| Published : Jul 21 2025, 12:00 AM IST

ವೈಜ್ಞಾನಿಕವಾಗಿ ನೀರು ನಿರ್ವಹಣೆ ಮಾಡಿ ಭೂಮಿ ಫಲವತ್ತತೆ ಕಾಪಾಡಿ: ಬಂಡಿವಡ್ಡರ್
Share this Article
  • FB
  • TW
  • Linkdin
  • Email

ಸಾರಾಂಶ

ಬೆಳೆಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಮತ್ತು ರಸಗೊಬ್ಬರ ಬಳಸುತ್ತಿರುವುದರಿಂದ ಭೂಮಿಯಲ್ಲಿ ನಿಸರ್ಗದತ್ತವಾಗಿ ಜೈವಿಕ ಕ್ರಿಯೆ ನಡೆಯದೆ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗಲು ಕಾರಣವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕುರುಗೋಡು

ಬೆಳೆಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಮತ್ತು ರಸಗೊಬ್ಬರ ಬಳಸುತ್ತಿರುವುದರಿಂದ ಭೂಮಿಯಲ್ಲಿ ನಿಸರ್ಗದತ್ತವಾಗಿ ಜೈವಿಕ ಕ್ರಿಯೆ ನಡೆಯದೆ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗಲು ಕಾರಣವಾಗುತ್ತಿದೆ ಎಂದು ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ಪ್ರಾಧ್ಯಾಪಕ ಬಿ.ವೈ. ಬಂಡಿವಡ್ಡರ್ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ರೈತ ಸಮುದಾಯ ಭವನದಲ್ಲಿ ಧಾರವಾಡದ ಜನ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ವತಿಯಿಂದ ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನೀರು ಬಳಕೆದಾರರ ಸಂಘದ ಸದಸ್ಯರು ಮತ್ತು ರೈತರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಚಟುವಟಿಕೆಗೆ ಬೇಕಾಗುದಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಲಭ್ಯವಿದೆ. ಆದರೆ ವೈಜ್ಞಾನಿಕವಾಗಿ ನೀರು ನಿರ್ವಹಣೆ ಮಾಡದ ಪರಿಣಾಮ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಕೃಷಿ ವಿಜ್ಞಾನಿಗಳು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ನೀರು, ಕ್ರಿಮಿನಾಶಕ ಮತ್ತು ರಸಗೊಬ್ಬರ ಬಳಕೆಮಾಡಿ ಗುಣಮಟ್ಟದ ಬೆಳೆ ಬೆಳೆಯಬೇಕು ಎಂದು ಸಲಹೆ ನೀಡಿದರು.

ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಇಂದುಧರ ಹಿರೇಮಠ ಮಾತನಾಡಿ, ನೀರು ಬಳಕೆದಾರರ ಸಹಕಾರಿ ಸಂಘದ ನಿರ್ದೇಶಕರು ಮತ್ತು ಪದಾಧಿಕಾರಿಗಳು ಕಾಲಕಾಲಕ್ಕೆ ಸಭೆ ನಡೆಸಿ ನೀರಾವರಿ ನಿಗಮದಿಂದ ಸಂಘಕ್ಕೆ ಹಂಚಿಕೆಯಾಗುವ ನೀರಿನ ಪ್ರಮಾಣ ಕುರಿತು ಚರ್ಚಿಸಿ ಎಲ್ಲ ರೈತರಿಗೆ ನೀರು ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.

ನೀರಾವರಿ ನಿಯಮದ ಪ್ರಕಾರ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಭೂಮಿ ಹೊಂದಿದ ರೈತರು ಹೊರತುಪಡಿಸಿ ಬೇರೆಯವರು ಅನಧಿಕೃತವಾಗಿ ಕಾಲುವೆ ನೀರು ಬಳಕೆ ಮಾಡಿದರೆ ನೀರು ಬಳಕೆದಾರರ ಸಂಘದವರು ಪೊಲೀಸ್ ಠಾಣೆಗೆ ದೂರು ನೀಡಿ ಕೊನೆಯ ಭಾಗದ ರೈತರಿಗೆ ನ್ಯಾಯ ದೊರೆಕಿಸಿಕೊಡಬೇಕು ಎಂದರು.

ಹಗರಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನ ಎಸ್.ರವಿ ಮಾತನಾಡಿ, ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರ ಮತ್ತು ಕ್ರಿಮಿನಾಶಕ ಬಳಕೆಯಿಂದ ಭೂಮಿಯಲ್ಲಿ ನೈಸರ್ಗಿವಾಗಿ ದೊರೆಯುವ ಲಘುಷೋಶಕಾಂಶಗಳ ಕೊರತೆ ಉಂಟಾಗುತ್ತದೆ. ಪರಿಣಾಮ ಇಳುವರಿ ಕುಂಠಿತವಾಗಲು ಕಾರಣವಾಗುತ್ತದೆ ಎಂದರು.

ರೈತರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿ ಸೂಕ್ತವಾದ ಬೆಳೆ ಬೆಳೆಯಬೇಕು. ಭೂ ಫಲವತ್ತತೆ ಹೆಚ್ಚಿಸಲು ಕೊಟ್ಟಿಗೆ ಗೊಬ್ಬರದ ಜತೆಗೆ ಜೈವಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಹಗರಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞರಾದ ಮಲ್ಲೇಶ ಮತ್ತು ಪಲಯ್ಯ ಭತ್ತದ ಬೆಳೆ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ನೀರು ನಿರ್ವಹಣೆ ಮಹಾಮಂಡಳಿ ನಿರ್ದೇಶಕ ಎಚ್.ಶಾಂತನಗೌಡ ಅಧ್ಯಕ್ಷತೆ ವಹಿಸಿದ್ದರು. ವಾಲ್ಮಿಸಂಸ್ಥೆಯ ಫಕಿರೇಶ್ ಅಂಗಡಿ, ನೀರಾವರಿ ಇಲಾಖೆ ಎಇಇ ರಾಮರೆಡ್ಡಿ, ವೀರೇಶ್ ಮತ್ತು ರೈತರು ಇದ್ದರು.