ಎಸ್.ಕೋಡಿಹಳ್ಳಿಯಲ್ಲಿ ಸುಧಾರಿತ ತೆಂಗು ಬೆಳೆ ಬೇಸಾಯದ ಕುರಿತು ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಕಡೂರುದೀರ್ಘಾವಧಿ ತೋಟಗಾರಿಕಾ ಬೆಳೆಗಳಿಗೆ ನಿರ್ವಹಣೆ ಹೊಣೆಗಾರಿಕೆ ಬಹುಮುಖ್ಯ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಚ್.ಕೆ. ಜಯದೇವಪ್ಪ ತಿಳಿಸಿದರು.

ತಾಲೂಕಿನ ಎಸ್.ಕೋಡಿಹಳ್ಳಿ ಗ್ರಾಮದಲ್ಲಿ ಸುಧಾರಿತ ತೆಂಗು ಬೆಳೆ ಬೇಸಾಯದ ಕುರಿತು ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಸಾವಯುವ ಗೊಬ್ಬರ ವಿತರಿಸಿ ಮಾತನಾಡಿ ಬಯಲುಸೀಮೆ ಭಾಗದಲ್ಲಿ ಪ್ರಧಾನ ತೋಟಗಾರಿಕಾ ಬೆಳೆಯಾದ ತೆಂಗಿನ ನಿರ್ವಹಣೆ ಬಗ್ಗೆ ಇಲಾಖೆ ವಿಶೇಷ ಗಮನಹರಿಸುತ್ತಿದ್ದು, ಬೆಳೆಗಾರರು ಕಾಪಾಡಿಕೊಂಡು ಬಂದಿರುವ ತೆಂಗಿಗೆ ಪುನಶ್ಚೇತನ ಕಾರ್ಯವಾಗಬೇಕಿದೆ. ಮಳೆ ಅಭಾವ ಸೇರಿದಂತೆ ಇತರೆ ರೋಗ ಬಾಧೆಗಳಿಂದ ತೆಂಗಿನ ಕಾಯಿಗಳ ಫಸಲು ಕಡಿಮೆಯಾಗುತ್ತಿದೆ. ಇದಕ್ಕೆ ಭೂಮಿ ಫಲವತ್ತತೆ ಹೆಚ್ಚಾಗಲು ಬೆಳೆಗಾರರು ಹೆಚ್ಚು ಒತ್ತುಕೊಡಬೇಕು ಎಂದರು.ತೆಂಗು ಬೆಳೆಗೆ ಸಮರ್ಪಕ ನೀರು ಮತ್ತು ಪೋಷಕಾಂಶಗಳ ನಿರ್ವಹಣೆ ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದು. ಜೊತೆಯಲ್ಲಿ ಸಾವಯುವ ಗೊಬ್ಬರ ಬಳಕೆಯೊಂದಿಗೆ ಸಮಗ್ರ ಪೋಷಕಾಂಶ ಮತ್ತು ನಿರ್ವಹಣೆ ಕ್ರಮ ಅನುಸರಿಸುವುದು ಮುಖ್ಯ. ತೆಂಗಿಗೆ ಕಾಡುತ್ತಿರುವ ನುಸಿ ರೋಗದಿಂದ ಮರಗಳಿಗೆ ಹೆಚ್ಚಿನ ಹಾನಿಗೊಳ್ಳುವ ಸಾಧ್ಯತೆ ಇದ್ದು, ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ವಿಧಾನದಿಂದ ನುಸಿ ಹಾವಳಿ ನಿಯಂತ್ರಣಗೊಳಿಸಲು ಸಾಧ್ಯ. ಇದಕ್ಕಾಗಿ ಇಲಾಖೆ ಯಿಂದ ಸಂಪನ್ಮೂಲ ವ್ಯಕ್ತಿಗಳ ಮೂಲಕ ತೆಂಗು ಬೆಳೆಗಾರರಿಗೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ ಎಂದರು.ರೈತರು ತೋಟಗಾರಿಕೆಯ ತೆಂಗಿನ ಜೊತೆಗೆ ಬಾಳೆ, ಕೋಕೊ, ಕಾಳುಮೆಣಸು, ಶುಂಠಿ ಮತ್ತು ಅಲ್ಪಾವಧಿ ತರಕಾರಿ ಬೆಳೆಗಳಿಗೆ ಸಮಗ್ರ ಬೆಳೆಗಳ ಪದ್ಧತಿ ಅಳವಡಿಸಿದರೆ ಭವಿಷ್ಯದ ದಿನಗಳಲ್ಲಿ ಆದಾಯದ ಮೂಲ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ರೈತರು ಪ್ರಗತಿದತ್ತ ಕೃಷಿ ಚಟುವಟಿಕೆಗಳಿಗೆ ಒತ್ತುಕೊಡಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ತೆಂಗಿನ ಕೃಷಿಯಲ್ಲಿ ಜೇನಿನ ಮಹತ್ವದ ಕುರಿತು ಪಾತ್ರದ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಕಿಸಾನ್ ಸೆಲ್ ಘಟಕದ ಅಧ್ಯಕ್ಷ ಶರತ್, ಇಲಾಖೆ ಸಹಾಯಕ ನಿರ್ದೇಶಕರಾದ ಚೇತನ್, ಸತೀಶ್, ಕಲ್ಲೇಶ್ ರೈತರು ಗ್ರಾಮಸ್ತರು ಮತ್ತಿತರಿದ್ದರು.

18ಕೆಕೆಡಿಯು1.ಕಡೂರು ತಾಲ್ಲೂಕಿನ ಎಸ್.ಕೋಡಿಹಳ್ಳಿ ಗ್ರಾಮದಲ್ಲಿ ತೋಟಗಾರಿಕಾ ಇಲಾಖೆಯಿಂದ ಆಯೋಜಿಸಿದ್ದ ಸುಧಾರಿತ ತೆಂಗು ಬೆಳೆ ಬೇಸಾಯದ ಕುರಿತು ಕಾರ್ಯಾಗಾರದಲ್ಲಿ ಹಿರಿಯ ಸಹಾಯಕ ನಿರ್ದೇಶಕ ಎಚ್.ಕೆ. ಜಯದೇವಪ್ಪ ಸಾವಯುವ ಗೊಬ್ಬರ ವಿತರಿಸಿದರು.