ಜಗಳೂರು ತಾಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಕುಡಿಯುವ ನೀರು, ನೈರ್ಮಲ್ಯ, ಬೀದಿದೀಪಗಳ ನಿರ್ವಹಣೆ ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪ್ರಮುಖ ಕರ್ತವ್ಯವಾಗಿದೆ. ಪ್ರತಿದಿನ ಪಿಡಿಒಗಳು ಕಡ್ಡಾಯವಾಗಿ ಗ್ರಾಪಂನ ಒಂದು ಗ್ರಾಮಕ್ಕೆ ಭೇಟಿ ನೀಡಿ, ಸಾರ್ವಜನಿಕರ ಅಹವಾಲು ಆಲಿಸಿ, ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಬೇಕು. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವಂತಿಲ್ಲ ಎಂದು ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಹಿತ್ಯ ಬಿ. ಆಲದಕಟ್ಟಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

- ಜಗಳೂರು ತಾಪಂನಲ್ಲಿ ವಿಬಿಜಿ ರಾಮ್ ಜೀ ಪ್ರಗತಿ ಪರಿಶೀಲನಾ ಸಭೆ । ಜನರ ಸಮಸ್ಯೆ ಪರಿಹಾರಕ್ಕೆ ಪಿಡಿಒಗಳು ಶ್ರಮಿಸಲು ಸೂಚನೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಕುಡಿಯುವ ನೀರು, ನೈರ್ಮಲ್ಯ, ಬೀದಿದೀಪಗಳ ನಿರ್ವಹಣೆ ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪ್ರಮುಖ ಕರ್ತವ್ಯವಾಗಿದೆ. ಪ್ರತಿದಿನ ಪಿಡಿಒಗಳು ಕಡ್ಡಾಯವಾಗಿ ಗ್ರಾಪಂನ ಒಂದು ಗ್ರಾಮಕ್ಕೆ ಭೇಟಿ ನೀಡಿ, ಸಾರ್ವಜನಿಕರ ಅಹವಾಲು ಆಲಿಸಿ, ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಬೇಕು. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವಂತಿಲ್ಲ ಎಂದು ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಹಿತ್ಯ ಬಿ. ಆಲದಕಟ್ಟಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್’ (ವಿಬಿಜಿ ರಾಮ್ ಜೀ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನ ಗ್ರಾಮಗಳಲ್ಲಿ ದೀಪಾವಳಿ ಹಬ್ಬಕ್ಕೂ ಮುನ್ನ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ನನ್ನ ವ್ಯಾಪ್ತಿಯಲ್ಲಿ 852 ಹಳ್ಳಿಗಳಿವೆ. ಒಬ್ಬ ಪಿಡಿಒಗೆ ಕೇವಲ 6ರಿಂದ 8 ಹಳ್ಳಿಗಳ ಜವಾಬ್ದಾರಿಯಷ್ಟೇ ಇರಬಹುದು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸಮಯವಿಲ್ಲ ಎನ್ನುವಂತಿಲ್ಲ. ಸಭೆಯಲ್ಲಿ ಸಾರ್ವಜನಿಕರು ಹಾಗೂ ರೈತ ಮುಖಂಡರು ಪ್ರಸ್ತಾಪಿಸಿದ ಸಮಸ್ಯೆಗಳನ್ನು ದಾಖಲಿಸಿಕೊಂಡಿದ್ದೇನೆ. ಅವುಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದೇ ನನ್ನ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದರು.

ದೂರುಗಳ ಸರಮಾಲೆ:

ಸಭೆಗೂ ಮುನ್ನ ಸಾರ್ವಜನಿಕರ ಕುಂದುಕೊರತೆ ಆಲಿಸಿದ ಸಿಇಒಗೆ ಗ್ರಾಮೀಣ ಭಾಗದ ಸಮಸ್ಯೆಗಳ ಸರಮಾಲೆಯೇ ಎದುರಾಯಿತು. ಹನುಮಂತಾಪುರ ಸರ್ಕಾರಿ ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಲಭ್ಯವಿಲ್ಲ. ಕ್ಯಾಸೇನಹಳ್ಳಿಗೆ ವಿಬಿ ಜಿ ರಾಮ್ ಜೀ ಯೋಜನೆಯ ಎಂಜಿನಿಯರ್ ಕಿರಣ್ ಪಾಟೀಲ್ ಭೇಟಿ ನೀಡುತ್ತಿಲ್ಲ ಎಂಬ ಆರೋಪ. ಬಸವನಕೋಟೆ ಗ್ರಾಮದಲ್ಲಿ ಹೈಮಾಸ್ಟ್ ದೀಪಗಳು ಕೆಟ್ಟುಹೋಗಿವೆ. ನೀತಿ ಸಂಹಿತೆ ಬಳಿಕ ತಾಲೂಕಿನ 23 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸುವ ಅಗತ್ಯವಿದೆ. ಇ-ಸ್ವತ್ತು ಪ್ರಕ್ರಿಯೆಯನ್ನು ಸರಳೀಕರಿಸಿ ಸಾರ್ವಜನಿಕರಿಗೆ ಶೀಘ್ರ ಸೇವೆ ಒದಗಿಸಬೇಕು ಎಂದು ಅಹವಾಲು ಸಲ್ಲಿಸಲಾಯಿತು.

ಅಲ್ಲದೆ, ಹಲವು ಗ್ರಾಮಗಳಿಗೆ ಕಸದ ವಾಹನಗಳು ಬರುತ್ತಿಲ್ಲ. ದೇವಿಕೆರೆ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ಒಂದೇ ಒಂದು ದಿನವೂ ನೀರು ಪೂರೈಕೆಯಾಗಿಲ್ಲ ಎಂಬ ದೂರು. ಭರಮಸಮುದ್ರ ಗ್ರಾಮದ ದಲಿತ ಕಾಲೋನಿಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವವಿದ್ದು, 8 ಕೊಳವೆಬಾವಿಗಳಿದ್ದರೂ ನೀರಿನ ಸಮಸ್ಯೆ ಬಗೆಹರಿದಿಲ್ಲ. ಗ್ರಂಥಾಲಯವಿದ್ದರೂ ತೆರೆಯುತ್ತಿಲ್ಲ. ಪಿಡಿಒ ಗ್ರಾಮಕ್ಕೆ ಬರುವುದೇ ಇಲ್ಲ ಎಂದು ದೂರಲಾಯಿತು.

ತಾಲೂಕಿನಲ್ಲಿ ವಿಬಿ ಜಿ ರಾಮ್ ಜೀ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಗ್ರಾಮೀಣ ಭಾಗದ ಮಹಿಳೆಯರು ಗಂಟುಮೂಟೆ ಕಟ್ಟಿಕೊಂಡು ಬೆಂಗಳೂರು ಸೇರಿದಂತೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಕೂಲಿ ಕೆಲಸ ಅರಸಿ ಗುಳೆ ಹೋಗುತ್ತಿದ್ದಾರೆ ಎಂಬಿತ್ಯಾದಿ ದೂರುಗಳು ಜನರಿಂದ ಸಲ್ಲಿಕೆಯಾದವು.

ಜೆಜೆಎಂ ವೈಫಲ್ಯಕ್ಕೆ ಜಿಪಂ ಸಿಇಒ ಅಸಮಾಧಾನ:

ತಾಲೂಕಿನಾದ್ಯಂತ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆ ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ. ನಲ್ಲಿಗಳಲ್ಲಿ ನೀರು ಬರುತ್ತಿಲ್ಲ, ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿವೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸಾದಿಕ್ ಉಲ್ಲಾ ವಿರುದ್ಧ ಸಭೆಯಲ್ಲಿ ಅನೇಕರು ಗಂಭೀರ ಆರೋಪ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ₹472 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಯ ಟ್ರಯಲ್ ರನ್ ಜನವರಿ ವೇಳೆಗೆ ಯಶಸ್ವಿಯಾಗುವ ನಿರೀಕ್ಷೆಯಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಕಾಮಗಾರಿಯ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಿ, ಶೀಘ್ರ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ. ತಾಲೂಕಿನಲ್ಲಿ 4 ಲಕ್ಷ ಮಾನವ ದಿನಗಳ ಗುರಿ ಹೊಂದಲಾಗಿದ್ದು, ಪ್ರಸ್ತುತ 2.21 ಲಕ್ಷ ಮಾನವ ದಿನಗಳ ಕೆಲಸ ಮಾತ್ರ ಸೃಷ್ಟಿಯಾಗಿದೆ ಎಂದರು.

ಕೂಲಿ ಹಣ ಪಾವತಿಯಲ್ಲಿ ವಿಳಂಬ:

ವಿಬಿ ಜಿ ರಾಮ್ ಜೀ ಯೋಜನೆಯಡಿ ಕೆ2 ತಂತ್ರಾಂಶದ ಮೂಲಕ ಕೂಲಿ ಹಾಗೂ ಸಲಕರಣೆಗಳ ಹಣ ಪಾವತಿಸುವ ಪ್ರಕ್ರಿಯೆಯಲ್ಲಿ ತಾಂತ್ರಿಕ ತೊಡಕು ಉಂಟಾಗಿರುವುದರಿಂದ ಪಾವತಿಯಲ್ಲಿ ವಿಳಂಬವಾಗಿದೆ. ಹಣ ಪಾವತಿಯಾಗಲಿದೆ. ಪಿಡಿಒಗಳು ಕ್ರಿಯಾ ಯೋಜನೆ ರೂಪಿಸಿ ರೈತರು ಮತ್ತು ಕೂಲಿ ಕಾರ್ಮಿಕರಿಗೆ ಕೆಲಸ ಒದಗಿಸಬೇಕು. ಪಂಚಾಯಿತಿ ಕಚೇರಿಗಳ ಸೂಚನಾ ಫಲಕಗಳಲ್ಲಿ ಲಭ್ಯವಿರುವ ಕಾಮಗಾರಿಗಳ ವಿವರಗಳನ್ನು ಕಡ್ಡಾಯವಾಗಿ ಪ್ರಕಟಿಸಿ, ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದರು.

ಬಾಕಿ ಅರ್ಜಿಗಳ ವಿಲೇವಾರಿಗೆ ಸೂಚನೆ:

ಅರಣ್ಯ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ಬುಡಕಟ್ಟು ಜನರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಅರಣ್ಯ ಕಾಯ್ದೆಯ ವ್ಯಾಪ್ತಿಯ ಕಾರಣಕ್ಕೆ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಅರಣ್ಯ ಅಧಿಕಾರಿಗಳು ಬಲವಂತವಾಗಿ ಒಕ್ಕಲೆಬ್ಬಿಸುತ್ತಿದ್ದಾರೆ. ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಗ್ರಾಮೀಣ ಭಾಗದ ರೈತರ ಹೊಲಗಳಿಗೆ ತೆರಳುವ ರಸ್ತೆ ಸಮಸ್ಯೆಯನ್ನೂ ಬಗೆಹರಿಸಬೇಕು ಎಂದು ರೈತ ಮುಖಂಡ ಬೈರನಾಯಕನಹಳ್ಳಿ ರಾಜು ಒತ್ತಾಯಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ಎಇಇ ನಾಗೇಂದ್ರಪ್ಪ, ತಾಲೂಕು ಪಂಚಾಯಿತಿ ಇಒ ಕೆಂಚಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

- - -

-28ಜೆ.ಜಿ.ಎಲ್.1:

ಜಗಳೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಸಾಹಿತ್ಯ ಬಿ. ಆಲದಕಟ್ಟಿ ಅವರು ವಿಬಿ ಜಿ ರಾಮ್ ಜೀ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.