ನಗರಸಭೆ ಖಾಲಿ ಹುದ್ದೆಗಳ ನೇಮಕಾತಿಗೆ ಒತ್ತಾಯ

| Published : Jul 27 2024, 12:58 AM IST

ಸಾರಾಂಶ

ನಗರಸಭೆಯಲ್ಲಿ ಸಣ್ಣ ಸಣ್ಣ ಕೆಲಸಗಳಿಗೂ ಅವಳಿ ನಗರದ ಜನರು ಪರದಾಡುವ ಸ್ಥಿತಿ

ಗದಗ: ಗದಗ-ಬೆಟಗೇರಿ ನಗರಸಭೆಗೆ ಪೂರ್ಣಾವಧಿ ಪೌರಾಯುಕ್ತರು ಮತ್ತು 240 ಹುದ್ದೆಗಳು ಖಾಲಿ ಇದ್ದು ನೇಮಕಾತಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಸಮಿತಿ ಜಿಲ್ಲಾಧ್ಯಕ್ಷ ರಾಘವೇಂದ್ರ ಪರಸಪ್ಪ ಪರಾಪೂರ ಮಾತನಾಡಿ, ನಗರಸಭೆಯಲ್ಲಿ ಕಳೆದ ಒಂದು ವರ್ಷದಿಂದ ಪೂರ್ಣಾವಧಿ ಪೌರಾಯುಕ್ತರು ಇಲ್ಲ. ಕೇವಲ ಪ್ರಭಾರಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಹಾಗೂ ನಗರಸಭೆಯಲ್ಲಿ 240 ಹುದ್ದೆ ಖಾಲಿ ಇವೆ. ಇದರಿಂದ ನಗರಸಭೆಯಲ್ಲಿ ಸಣ್ಣ ಸಣ್ಣ ಕೆಲಸಗಳಿಗೂ ಅವಳಿ ನಗರದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದ್ದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ನಗರಸಭೆಯಲ್ಲಿ ಪೌರಾಯುಕ್ತರ ಹುದ್ದೆ, ಸೀನಿಯರ್ ಪ್ರೋಗ್ರಾಮ್ ಒಂದು, ಕಿರಿಯ ಅಭಿಯಂತರ 2 ಹುದ್ದೆ, ಹಿರಿಯ ಆರೋಗ್ಯ ನಿರೀಕ್ಷಕರ 2 ಹುದ್ದೆ, ಪ್ರಥಮ ದರ್ಜೆ ಸಹಾಯಕರ 2 ಹುದ್ದೆ, ಶೀಘ್ರ ಲಿಪಿಕಾರ 2 ಹುದ್ದೆ, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರ 2 ಹುದ್ದೆ, ನೀರು ಸರಬರಾಜು ಸಹಾಯಕರ 8 ಹುದ್ದೆ, ದ್ವೀತಿಯ ದರ್ಜೆ ಸಹಾಯಕರ ಹುದ್ದೆ 3, ವಾಹನ ಚಾಲಕರ 8 ಹುದ್ದೆ ಖಾಲಿ ಹೀಗೆ ಇನ್ನೂ ಅನೇಕ ಹುದ್ದೆಗಳು ಖಾಲಿ ಇವೆ.

ನಗರಸಭೆಯಲ್ಲಿ ಖಾಯಂ ಪೌರಕಾರ್ಮಿಕರಾಗಿ 264 ಜನರು ಕಾರ್ಯನಿರ್ವಹಿಸಿದ್ದರು. ಇದರಲ್ಲಿ ಈ ಸದ್ಯ 136 ಪೌರ ಕಾರ್ಮಿಕರು ಸೇವಾ ನಿವೃತ್ತಿ ಹೊಂದಿರುತ್ತಾರೆ. ಇನ್ನುಳಿದ ಇದಕ್ಕೆ ಕೇವಲ 128 ಜನರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 10-15 ವರ್ಷಗಳಿಂದ ಒಳಗುತ್ತಿಗೆ ಪೌರಕಾರ್ಮಿಕರು ಅಂತಾ 92 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ವೇತನ, ಪಿಎಫ್, ಎ.ಎಸ್.ಐ ಪ್ರತಿ ತಿಂಗಳ ನೀಡುತ್ತಿದ್ದಾರೆ. ಈ 92 ಪೌರ ಕಾರ್ಮಿಕರನ್ನು ಕಾಯಂ ಪೌರಕಾರ್ಮಿರನ್ನಾಗಿ ಸೇರ್ಪಡೆ ಮಾಡಬೇಕು. ಇನ್ನುಳಿದ 44 ಪೌರ ಕಾರ್ಮಿಕ ಹುದ್ದೆಗಳು ಖಾಲಿ ಉಳಿಯುತ್ತವೆ. ಇದರಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 61 ಜನ ಟಾಟಾ ಎಸಿ ಡ್ರೈವರ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಇನ್ನೂ 133 ಮಹಿಳೆಯರು ಮನೆ ಮನೆ ಕಸ ಸಂಗ್ರಹಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 22 ಜನ ಟಾಟಾ ಎಸಿ ಡ್ರೈವರ ಮತ್ತು 22 ಮನೆ ಮನೆ ಕಸ ಸಂಗ್ರಹಣೆ ಮಹಿಳೆಯರನ್ನು ಕಾಯಂ ಪೌರಕಾರ್ಮಿಕರನ್ನು ನೇಮಕ ಮಾಡಿದರೆ 264 ಹುದ್ದೆಗಳು ಭರ್ತಿ ಆಗುತ್ತವೆ. ಆಗ ಗದಗ-ಬೆಟಗೇರಿ ಅವಳಿ ನಗರದ ಜನತೆಗೆ ಉತ್ತಮವಾದ ಸ್ವಚ್ಛತೆ ನೀಡುವುದರ ಜತೆಗೆ ನಗರಸಭೆ ಉತ್ತಮ ಆಡಳಿತಕ್ಕೆ ಅನುಕೂಲವಾಗುವುದು ಎಂದರು.

ಹಿಂದಿನ ಸರ್ಕಾರ ರಾಜ್ಯದ ನಗರಸಭೆ,ಪುರಸಭೆ, ಪಪಂಗಳನ್ನು ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಂಡಿದೆ. ಈ ನೇರ ನೇಮಕಾತಿಯಲ್ಲಿ ಗದಗ ಜಿಲ್ಲೆಯ ನರಗುಂದ, ಲಕ್ಷ್ಮೇಶ್ವರ, ಗಜೇಂದ್ರಗಡ, ನರೇಗಲ್ಲ, ಮುಳಗುಂದ ಪುರಸಭೆ, ಪಪಂ ಪೌರ ಕಾರ್ಮಿಕರು ನೇರ ನೇಮಕಾತಿ ಒಳಪಟ್ಟು ವೇತನ ಪಡೆಯುತ್ತಿದ್ದಾರೆ. ಜಿಲ್ಲಾ ಸ್ಥಳವಾದ ಗದಗ-ಬೆಟಗೇರಿ ನಗರಸಭೆಯ ಯಾವೊಬ್ಬ ಪೌರಕಾರ್ಮಿಕರನ್ನು ಈ ನೇರ ವೇತನಕ್ಕೆ ಮಾಡಿರುವುದಿಲ್ಲ. ಇದಕ್ಕೆ ಕಾರಣ ಏನೆಂದು ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಗದಗ-ಬೆಟಗೇರಿ ನಗರಸಭೆ ಪೌರಕಾರ್ಮಿಕರಿಗೆ ನೇರವೇತನ ಭಾಗ್ಯದಿಂದ ವಂಚಿತಗೊಳಿಸಿ ದಲಿತ ಪೌರಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ಇದನ್ನು ಪರಗಣಿನೆಗೆ ತೆಗೆದುಕೊಂಡು ಗದಗ-ಬೆಟಗೇರಿ ನಗರಸಭೆ ಪೌರಕಾರ್ಮಿಕರಿಗೆ ಆದ ಅನ್ಯಾಯ ಸರಿಪಡಿಸಿ ಗದಗ-ಬೆಟಗೇರಿ ನಗರಸಭೆ ಪೂರ್ಣವಾಧಿ ಪೌರಾಯುಕ್ತರು ಹಾಗೂ ಖಾಲಿ ಇರುವ 240 ಹುದ್ದೆಗಳನ್ನು ಭರ್ತಿ ಮಾಡಿ ಗದಗ-ಬೆಟಗೇರಿ ಜನತೆಗೆ ಅನುಕೂಲ ಮಾಡಿಕೊಂಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗಣೇಶ ಹುಬ್ಬಳ್ಳಿ, ಮಂಜುನಾಥ ತೌಜಲ್, ಪರಶುರಾಮ ಸಂಗಾಪೂರ, ಮರಿಯಪ್ಪ ಪರಾಪೂರ,ಇಮಾಮ ಕುನ್ನಿಬಾವಿ, ರಾಷ್ಟ್ರೀನ್ ಜೋಸೆಫ್ ಸೇರಿದಂತೆ ಅನೇಕರು ಇದ್ದರು.