ಸಾರಾಂಶ
ಪ್ರಖರ ಪುಂಡುವೇಷಧಾರಿಯಾಗಿ ಬೆಳೆದ ರೈಗಳು ಬಬ್ರುವಾಹನ, ಅಭಿಮನ್ಯು, ತರಣಿಸೇನ, ಲಕ್ಷ್ಮಣ, ಕೃಷ್ಣ, ಭಂಡಾಸುರ, ಚಂಡಮುಂಡರು, ಹುಂಡಪುಂಡರು, ಚಂಡಪ್ರಚಂಡರು ಮೊದಲಾದ ಪಾತ್ರಗಳಲ್ಲಿ ವಿಜೃಂಭಿಸಿದವರು.
ಕನ್ನಡಪ್ರಭ ವಾರ್ತೆ ಮೂಲ್ಕಿ
2024ನೇ ಸಾಲಿನ ಮಂಡೆಚ್ಚ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಮಾಡಾವು ಕೊರಗಪ್ಪ ರೈ ಆಯ್ಕೆಯಾಗಿದ್ದಾರೆ.ಕರ್ನಾಟಕ ಮೇಳದಲ್ಲಿ ಮಂಡೆಚ್ಚರ ಒಡನಾಡಿಯಾಗಿ ಇದ್ದವರಿಗೆ ಈ ಪ್ರಶಸ್ತಿಯನ್ನು ನೀಡುವುದು ವಾಡಿಕೆಯಾಗಿದ್ದು ಕಳೆದ 20 ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತಾ ಬರುತ್ತಿದೆ.
ಇರಾ ಸೋಮನಾಥೇಶ್ವರ ದೇವಸ್ಥಾನದಲ್ಲಿ ಅ.27ರಂದು ನಡೆಯಲಿರುವ ಕಲ್ಲಾಡಿ ವಿಠಲ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮದಲ್ಲಿ 10 ಸಾವಿರ ನಗದು, ಸನ್ಮಾನ ಫಲಕಗಳನ್ನು ಒಳಗೊಂಡ ಮಂಡೆಚ್ಚ ಪ್ರಶಸ್ತಿಯನ್ನು ಕೊರಗಪ್ಪ ರೈ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಕೊರಗಪ್ಪ ರೈ ಪರಿಚಯ: ಯಕ್ಷಗಾನ ಕಲಾವಿದ ಮಾಡಾವು ಕೊರಗಪ್ಪ ರೈಗಳು ಕರ್ನಾಟಕ, ಬಪ್ಪನಾಡು, ಕಟೀಲು ಮತ್ತು ಕದ್ರಿ ಮೇಳಗಳಲ್ಲಿ ಸುಮಾರು 30 ವರ್ಷಗಳ ತಿರುಗಾಟ ಮಾಡಿದ್ದಾರೆ. ಬಾಲಗೋಪಾಲರಿಂದ ತೊಡಗಿ ಪ್ರಸಂಗದ ಪಾತ್ರದವರೆಗೆ ಎಲ್ಲ ಪಾತ್ರಗಳನ್ನೂ ಮಾಡಿರುವ ಅನುಭವಿ ಕಲಾವಿದ. ಪ್ರಖರ ಪುಂಡುವೇಷಧಾರಿಯಾಗಿ ಬೆಳೆದ ರೈಗಳು ಬಬ್ರುವಾಹನ, ಅಭಿಮನ್ಯು, ತರಣಿಸೇನ, ಲಕ್ಷ್ಮಣ, ಕೃಷ್ಣ, ಭಂಡಾಸುರ, ಚಂಡಮುಂಡರು, ಹುಂಡಪುಂಡರು, ಚಂಡಪ್ರಚಂಡರು ಮೊದಲಾದ ಪಾತ್ರಗಳಲ್ಲಿ ವಿಜೃಂಭಿಸಿದವರು. 1956ರ ಡಿಸೆಂಬರ್ 26ರಂದು ಮಹಾಬಲ ರೈ - ಕಮಲ ದಂಪತಿ ಸುಪುತ್ರನಾಗಿ ಜನಿಸಿದ ಕೊರಗಪ್ಪ ರೈಗಳು ಕೈಯೂರಿನ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ತನಕ ಓದಿ, ಬಳಿಕ ಧರ್ಮಸ್ಥಳದ ಲಲಿತ ಕಲಾ ಕೇಂದ್ರದಲ್ಲಿ ಗುರು ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸ ಕಲಿತಿದ್ದಾರೆ.