ಮಂಡೇಪಂಡ ತಂಡಕ್ಕೆ ಒಲಿದ ‘ಮುದ್ದಂಡ ಕಪ್‌’

| Published : Apr 28 2025, 12:52 AM IST

ಸಾರಾಂಶ

ಮುದ್ದಂಡ ಕಪ್‌ ಫೈನಲ್‌ನಲ್ಲಿ ಭಾನುವಾರ ಮಂಡೇಪಂಡ ತಂಡ ಮೂರು ಬಾರಿಯ ಚಾಂಪಿಯನ್‌ ಚೇಂದಂಡ ತಂಡವನ್ನು ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದೆ.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಳೆ ಬಾಧಿತ ಕೊಡವ ಕುಟುಂಬಗಳ ನಡುವಿನ 25ನೇ ವರ್ಷದ ಕೌಟುಂಬಿಕ ಹಾಕಿ ಮುದ್ದಂಡ ಕಪ್‌ ಫೈನಲ್‌ನಲ್ಲಿ ಭಾನುವಾರ, ಮಂಡೇಪಂಡ ತಂಡ, ಮೂರು ಬಾರಿಯ ಚಾಂಪಿಯನ್ ಚೇಂದಂಡ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದ ಮೊದಲಾರ್ಧದಲ್ಲಿ ಮಂಡೇಪಂಡ 1-0 ಗೋಲಿನಿಂದ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯಾರ್ಧದ ವೇಳೆ ದಿಢೀರ್ ಮಳೆ ಬಂದು ಪಂದ್ಯವನ್ನೇ ಸ್ಥಗಿತಗೊಳಿಸುವಂತೆ ಮಾಡಿತು. ಇದರಿಂದ ಏಕೈಕ ಗೋಲಿನ ಮುನ್ನಡೆ ಪಡೆದಿದ್ದ ಮಂಡೇಪಂಡ ತಂಡವನ್ನು ವಿಜಯಿ ಎಂದು ಘೋಷಣೆ ಮಾಡಲಾಯಿತು.ಪಂದ್ಯದ ಆರಂಭಿಕ ಕ್ಷಣಗಳಲ್ಲೇ ಚೇಂದಂಡ ತಂಡಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ದೊರಕಿದರೂ ಅದು ಗೋಲಾಗಿ ಪರಿವರ್ತನೆಯಾಗಿಲ್ಲ. ದಾಳಿಗೆ ಪ್ರತಿ ದಾಳಿ ನಡೆಸಿದ ಮಂಡೇಪಂಡ ತಂಡ, ಆಕರ್ಷಕ ಶಾರ್ಟ್ ಪಾಸ್‌ಗಳ ಮೂಲಕ ಎದುರಾಳಿ ಚೇಂದಂಡ ತಂಡದ ಗೋಲು ಆವರಣವನ್ನು ಪ್ರವೇಶಿಸಿ ಗೋಲು ಗಳಿಕೆಯ ಪ್ರಯತ್ನ ನಡೆಸಿ ಗೋಲು ಗಳಿಸುವ ಪ್ರಯತ್ನದಲ್ಲಿ ವಿಫಲವಾಯಿತು.

ಮಂಡೇಪಂಡ ತಂಡ ತನಗೆ ದೊರೆತ ಮೊದಲ ಪೆನಾಲ್ಟಿ ಕಾರ್ನರ್‌ನಲ್ಲಿ ಗೌತಮ್, ಮಿಂಚಿನ ಗೋಲು ಸಿಡಿಸುವ ಮೂಲಕ ಮೊದಲ ಕ್ವಾರ್ಟರ್‌ನಲ್ಲಿ ಮಂಡೇಪಂಡ ತಂಡ, ಮಾಜಿ ಚಾಂಪಿಯನ್ ಚೇಂದಂಡ ತಂಡದ ವಿರುದ್ಧ 1-0 ಗೋಲಿನ ಮುನ್ನಡೆಯನ್ನು ಸಾಧಿಸಿತು.

ಪಂದ್ಯಕ್ಕೆ ಮಳೆ ಅಡ್ಡಿ:

ದ್ವಿತೀಯ ಕ್ವಾರ್ಟರ್‌ನಲ್ಲಿ ಚೇಂದಂಡ ತಂಡ ಸಮಬಲದ ಗೋಲಿಗಾಗಿ ಆರಂಭಿಕ ಹಂತದಿಂದಲೇ ದಾಳಿಗೆ ಮುನ್ನುಗ್ಗಿತು. ದ್ವಿತೀಯ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆದುಕೊಂಡಿತು. ಮತ್ತೆ ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. ಈ ವೇಳೆ ಭಾರಿ ಮಳೆ ಸುರಿದು ಮೈದಾನದ ತುಂಬೆಲ್ಲ ಮಳೆ ನೀರು ನಿಂತಿತು. ಪರಿಣಾಮ ಪಂದ್ಯ ಸ್ಥಗಿತಗೊಳಿಸಲಾಯಿತು. ನಂತರ ಮಳೆ ಕಡಿಮೆಯಾದ ಬಳಿಕ ಮೈದಾನದಿಂದ ಮಳೆ ನೀರನ್ನು ತೆಗೆದು ಆಟಕ್ಕೆ ಮುಕ್ತಗೊಳಿಸಲಾಯಿತು. ಚೇಂದಂಡ ತಂಡ ಪಂದ್ಯವನ್ನು ಸಮಬಲದತ್ತ ತರಲು ಪ್ರಯತ್ನಿಸಿತು. ಆದರೆ ಮಂಡೇಪಂಡ ತಂಡ ಯುವ ಗೋಲ್ ಕೀಪರ್ ದ್ಯಾನ್ ಬೋಪಣ್ಣ ಆಕರ್ಷಕವಾಗಿ ಚೆಂಡನ್ನು ತಡೆಯುವಲ್ಲಿ ಸಫಲರಾದರು. ಮತ್ತೆ ಮಳೆ ಆರಂಭವಾದ ಹಿನ್ನೆಲೆಯಲ್ಲಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

ಈ ವೇಳೆ ಮುದ್ದಂಡ ಹಾಕಿ ಆಯೋಜಕರು, ಕೊಡವ ಹಾಕಿ ಅಕಾಡೆಮಿ ಪ್ರಮುಖರು ಹಾಗೂ ತೀರ್ಪುಗಾರರು ಚರ್ಚೆ ನಡೆಸಿ ಒಂದು ಗೋಲು ದಾಖಲಿಸಿದ್ದ ಮಂಡೇಪಂಡ ತಂಡವನ್ನು ವಿಜಯಿ ಎಂದು ಘೋಷಣೆ ಮಾಡಿದರು.

ಪಂದ್ಯಾವಳಿಯ ವಿಜೇತ ತಂಡಕ್ಕೆ 5 ಲಕ್ಷ ರು. ನಗದು, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 3 ಲಕ್ಷ ರು. ನಗದು ಹಾಗೂ ಆಕರ್ಷಕ ಟ್ರೋಫಿ, ಸೆಮಿಫೈನಲ್‌ಗೆ ಬಂದ ಎರಡು ತಂಡಗಳಿಗೆ ತಲಾ 1 ಲಕ್ಷದಂತೆ ನಗದು ಹಾಗೂ ಟ್ರೋಫಿ ನೀಡಲಾಯಿತು.

ಫೈನಲ್ ಪಂದ್ಯಕ್ಕೂ ಮುನ್ನ ನಡೆದ ತೃತೀಯ ಸ್ಥಾನದ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡ 2-1 ಗೋಲುಗಳ ಅಂತರದಿಂದ ಕುಪ್ಪಂಡ (ಕೈಕೇರಿ) ತಂಡವನ್ನು ಮಣಿಸಿತು. ನೆಲ್ಲಮಕ್ಕಡ ತೃತೀಯ ಹಾಗೂ ಕುಪ್ಪಂಡ (ಕೈಕೇರಿ) ನಾಲ್ಕನೇ ಬಹುಮಾನವನ್ನು ಪಡೆದುಕೊಂಡಿತು. ನೆಲ್ಲಮಕ್ಕಡ ತಂಡದ ಪರ ಆಶಿಕ್ ಅಪ್ಪಣ್ಣ ಹಾಗೂ ಅಯ್ಯಪ್ಪ ತಲಾ 1 ಗೋಲು ದಾಖಲಿಸಿದರು. ಕುಪ್ಪಂಡ ಪರ ದ್ಯಾನ್ 1 ಗೋಲು ಬಾರಿಸಿದರು.