ಪ್ರಕರಣಗಳ ಇತ್ಯರ್ಥದಲ್ಲಿ ಮಂಡ್ಯ ಎಸಿ ಕೋರ್ಟ್ ಮೇಲುಗೈ...!

| Published : Apr 10 2025, 01:00 AM IST

ಪ್ರಕರಣಗಳ ಇತ್ಯರ್ಥದಲ್ಲಿ ಮಂಡ್ಯ ಎಸಿ ಕೋರ್ಟ್ ಮೇಲುಗೈ...!
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ಪ್ರಕರಣಗಳನ್ನು ಶೀಘ್ರಗತಿಯಲ್ಲಿ ವಿಲೇವಾರಿ ಮಾಡುವುದರಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ನ್ಯಾಯಾಲಯ ಮೇಲುಗೈ ಸಾಧಿಸಿದೆ. ಒಂದೂವರೆ ವರ್ಷದ ಹಿಂದೆ ಪ್ರಕರಣಗಳ ಬಾಕಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಮಂಡ್ಯ ಇದೀಗ ಪ್ರಕರಣಗಳ ವಿಲೇವಾರಿಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನದಲ್ಲಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಸಾರ್ವಜನಿಕ ಪ್ರಕರಣಗಳನ್ನು ಶೀಘ್ರಗತಿಯಲ್ಲಿ ವಿಲೇವಾರಿ ಮಾಡುವುದರಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ನ್ಯಾಯಾಲಯ ಮೇಲುಗೈ ಸಾಧಿಸಿದೆ. ಒಂದೂವರೆ ವರ್ಷದ ಹಿಂದೆ ಪ್ರಕರಣಗಳ ಬಾಕಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಮಂಡ್ಯ ಇದೀಗ ಪ್ರಕರಣಗಳ ವಿಲೇವಾರಿಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನದಲ್ಲಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಒಂದು ವರ್ಷ ಎಂಟು ತಿಂಗಳ ಹಿಂದೆ ಮಂಡ್ಯ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ೨೧೦೦ ಪ್ರಕರಣಗಳು ಬಾಕಿ ಇದ್ದವು. ಬೆಂಗಳೂರು, ದೊಡ್ಡಬಳ್ಳಾಪುರ ಬಿಟ್ಟರೆ ಅತಿ ಹೆಚ್ಚು ಪ್ರಕರಣಗಳು ಮಂಡ್ಯದಲ್ಲೇ ಬಾಕಿ ಉಳಿದಿದ್ದವು. ಒಂದೂವರೆ ವರ್ಷ ಎರಡು ವರ್ಷದ ಪ್ರಕರಣಗಳೂ ವಿಲೇವಾರಿಯಾಗದೆ ಬಾಕಿ ಇದ್ದವು. ಇದರಿಂದ ಜನರು ಎಸಿ ಕೋರ್ಟ್ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದರು.

೨೯೮ ಪ್ರಕರಣಗಳು ಬಾಕಿ:

ಉಪ ವಿಭಾಗಾಧಿಕಾರಿಯಾಗಿ ಎಂ.ಶಿವಮೂರ್ತಿ ಅವರು ಅಧಿಕಾರ ವಹಿಸಿಕೊಂಡ ನಂತರದಲ್ಲಿ ಪ್ರಕರಣಗಳ ವಿಲೇವಾರಿ ವೇಗವನ್ನು ಪಡೆದುಕೊಂಡಿತು. ಅಧಿಕಾರಕ್ಕೆ ಬಂದ ಒಂದು ವರ್ಷ ಎಂಟು ತಿಂಗಳಲ್ಲಿ ಬರೋಬ್ಬರಿ ೩೨೦೦ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ. ಈಗ ಕೇವಲ ೨೯೮ ಪ್ರಕರಣಗಳು ಮಾತ್ರ ಬಾಕಿ ಉಳಿದುಕೊಂಡಿವೆ. ಇದರಲ್ಲಿ ಒಂದು ವರ್ಷದ ಪ್ರಕರಣಗಳು ೯೮ ಇದ್ದರೆ ಉಳಿದ ೨೦೦ ಪ್ರಕರಣಗಳು ಆರು ತಿಂಗಳ ಒಳಗಿನದ್ದಾಗಿವೆ.

ಅರ್ಹ ಪ್ರಕರಣಗಳಿದ್ದರಷ್ಟೇ ದಾಖಲು:

ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಅವರು ನ್ಯಾಯಾಲಯಕ್ಕೆ ಸಲ್ಲಿಕೆಯಾಗುವ ಎಲ್ಲಾ ಪ್ರಕರಣಗಳನ್ನು ಪರಿಶೀಲನೆ ನಡೆಸಿ ಅರ್ಹ ಪ್ರಕರಣಗಳನ್ನು ಮಾತ್ರ ದಾಖಲಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಎಸಿ ಕೋರ್ಟ್ ವ್ಯಾಪ್ತಿಗೆ ಬಾರದ ಪ್ರಕರಣಗಳನ್ನು ಅಲ್ಲೇ ಹಿಂಬರಹ ನೀಡುವಂತೆ ಸೂಚಿಸಿದ್ದು, ಪ್ರತಿ ತಿಂಗಳು ಸರಾಸರಿ ೧೫೦ ಪ್ರಕರಣಗಳು ದಾಖಲಾಗುತ್ತಿದ್ದರೆ ಅದರಲ್ಲಿ ೫೦ ರಿಂದ ೬೦ ಪ್ರಕರಣಗಳು ಅರ್ಹವಾಗಿದ್ದು, ಉಳಿದ ೯೦ ರಿಂದ ೧೦೦ ಕೇಸ್‌ಗಳು ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗಿನ ಪ್ರಕರಣಗಳಾಗಿರುತ್ತವೆ ಎಂದು ತಿಳಿದುಬಂದಿದೆ.

ವಾರದಲ್ಲಿ ೪ ದಿನ ವಿಚಾರಣೆ ಕಡ್ಡಾಯ:

ವಾರದಲ್ಲಿ ೪ ದಿನ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಅವರು ಪ್ರಕರಣಗಳ ವಿಚಾರಣೆಯನ್ನು ಕಡ್ಡಾಯವಾಗಿ ನಡೆಸುತ್ತಿದ್ದಾರೆ. ಮಂಗಳವಾರದಂದು ಮಂಡ್ಯ, ಬುಧವಾರ ಮದ್ದೂರು, ಶುಕ್ರವಾರದಂದು ಮಳವಳ್ಳಿ, ಗುರುವಾರದ ದಿನ ಪಿಟಿಸಿಎಲ್ ಮತ್ತು ಹಿರಿಯ ನಾಗರಿಕರ ಪ್ರಕರಣ ವಿಚಾರಣೆಯನ್ನು ತಪ್ಪದೇ ನಡೆಸುತ್ತಾ ಬಂದಿದ್ದಾರೆ. ಪ್ರಕರಣಗಳು ಹೆಚ್ಚು ಬಾಕಿ ಇದ್ದ ಸಮಯದಲ್ಲಿ ಎರಡನೇ ಶನಿವಾರ ಮತ್ತು ನಾಲ್ಕನೇ ಭಾನುವಾರ ಕೂಡ ಕಚೇರಿಗೆ ಅಧಿಕಾರಿಗಳು-ನೌಕರರನ್ನು ಕರೆಸಿಕೊಂಡು ಕಾರ್ಯನಿರ್ವಹಿಸಿದ್ದಾರೆ. ಎಂ.ಶಿವಮೂರ್ತಿ ಅವರ ಈ ಕಾರ್ಯವೈಖರಿಯಿಂದಲೇ ಪ್ರಕರಣಗಳ ಶೀಘ್ರ ಇತ್ಯರ್ಥ ಸಾಧ್ಯವಾಗಿದೆ ಎಂದು ಹಲವು ಅಧಿಕಾರಿ ವರ್ಗದವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಮುಂದೂಡಿಕೆಗೆ ಅವಕಾಶವಿಲ್ಲ:

ಹಿಂದೆಲ್ಲಾ ಮೂರು ತಿಂಗಳಿಗೊಮ್ಮೆ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರರಕರಣಗಳ ವಿಚಾರಣೆ ನಡೆಸಲಾಗುತ್ತಿತ್ತು. ಈಗ ಪ್ರತಿ ವಾರವೂ ವಿಚಾರಣೆ ನಡೆಯುತ್ತಿದೆ. ಮುಂದೂಡುವುದಕ್ಕೆ ಅವಕಾಶವನ್ನೇ ನೀಡದೆ ತ್ವರಿತಗತಿಯಲ್ಲಿ ನ್ಯಾಯಾಲಯಕ್ಕೆ ದಾಖಲಾಗುವ ಪ್ರಕರಣಗಳನ್ನು ಎಂ.ಶಿವಮೂರ್ತಿ ಇತ್ಯರ್ಥ ಪಡಿಸುತ್ತಿದ್ದಾರೆ. ವಿಳಂಬ ನ್ಯಾಯ-ಅದು ನ್ಯಾಯವೇ ಅಲ್ಲ ಎಂಬ ಮಾತಿನಲ್ಲಿ ನಂಬಿಕೆ ಇಟ್ಟು ನ್ಯಾಯಾಲಯಗಳ ಮೇಲೆ ವಿಶ್ವಾಸವಿಟ್ಟು ಬರುವ ಜನರಿಗೆ ಶೀಘ್ರ ನ್ಯಾಯದಾನ ಮಾಡುತ್ತಾ ಸಾರ್ವಜನಿಕ್ರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರಕರಣಗಳ ಶೀಘ್ರ ಇತ್ಯರ್ಥದಿಂದ ಜನರಿಗೆ ಹಣ, ಸಮಯದ ಉಳಿತಾಯದ ಜೊತೆಗೆ ಅನಗತ್ಯ ಅಲೆದಾಟ ತಪ್ಪಿದೆ. ಮೊದಲೆಲ್ಲಾ ಎಸಿ ಕಚೇರಿ ಮುಂದೆ ೫೦ ರಿಂದ ೬೦ ಮಂದಿ ಕ್ಯೂ ನಿಲ್ಲುತ್ತಿದ್ದರು. ಈಗ ಅಂತಹ ಪರಿಸ್ಥಿತಿ ಇಲ್ಲ. ಕೆಲವೊಂದು ಸಣ್ಣಪುಟ್ಟ ಪ್ರಕರಣಗಳನ್ನು ಒಂದೇ ದಿನದ ವಿಚಾರಣೆಯಲ್ಲಿ ಇತ್ಯರ್ಥ ಮಾಡಿ ಕಳುಹಿಸುತ್ತಿರುವುದು ದೂರದಿಂದ ಬರುವ ರೈತರಿಗೆ ಸಮಾಧಾನವನ್ನು ತಂದಿದೆ.

ಹಿರಿಯ ನಾಗರಿಕರಿಗೂ ತ್ವರಿತ ನ್ಯಾಯ:

ಹಿರಿಯ ನಾಗರಿಕರ ಪ್ರಕರಣಗಳು ಮೂರು ತಿಂಗಳೊಳಗೆ ಇತ್ಯರ್ಥಪಡಿಸಲು ಅವಕಾಶವಿದ್ದರೂ ಅಲ್ಲಿಯವರೆಗೆ ಅವುಗಳನ್ನು ಮುಂದುವರೆಸದೆ ಎರಡು ತಿಂಗಳಲ್ಲೇ ಮುಗಿಸಿಕೊಡುತ್ತಿದ್ದಾರೆ. ಅವರು ಕರ್ತವ್ಯಕ್ಕೆ ಹಾಜರಾದ ಸಮಯದಲ್ಲಿದ್ದ ೯೮ ಪ್ರಕರಣಗಳಲ್ಲಿ ಈಗ ೬ ಪ್ರಕರಣಗಳು ಮಾತ್ರ ಬಾಕಿ ಇದ್ದು, ಅವು ದಾಖಲಾಗಿ ಒಂದು ತಿಂಗಳಷ್ಟೇ ಕಳೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪಿಟಿಸಿಎಲ್ (ಪರಿಶಿಷ್ಟ ಜಾತಿ-ಪಂಗಡದವರ ಜಮೀನು ಪ್ರಕರಣಗಳು) ಪ್ರಕರಣಗಳು ಉಪವಿಭಾಗಾಧಿಕಾರಿಗಳಿಗೆ ಸವಾಲಿನ ಪ್ರಕರಣಗಳಾಗಿವೆ. ಅವು ೨೦೦೮-೦೯ನೇ ಸಾಲಿನಿಂದಲೂ ಬಾಕಿ ಉಳಿದುಕೊಂಡಿವೆ. ಇಂತಹ ೧೫೮ ಪ್ರಕರಣಗಳು ಬಾಕಿ ಇದ್ದು ಇವುಗಳಲ್ಲಿ ೧೦೦ ಪ್ರಕರಣಗಳು ಕ್ಲಿಷ್ಟಕರವಾಗಿವೆ. ಅವುಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸಿ ದಾಖಲೆಗಳೊಂದಿಗೆ ತಾಳೆ ಹಾಕಿ ನ್ಯಾಯದಾನ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ಮೇಲೆ ಜನರು ನಂಬಿಕೆ, ವಿಶ್ವಾಸ ಕಳೆದುಕೊಳ್ಳಬಾರದು. ಸಾರ್ವಜನಿಕರಿಗೆ ಶೀಘ್ರ ನ್ಯಾಯ ಸಿಗಬೇಕು. ಆಗ ಮಾತ್ರ ಅವರ ನಂಬಿಕೆ ಉಳಿಸಿಕೊಳ್ಳಲು ಸಾಧ್ಯ. ನಾನು ಅಧಿಕಾರಕ್ಕೆ ಬಂದಾಗ ೨೧೦೦ ಪ್ರಕರಣಗಳು ಬಾಕಿ ಇದ್ದವು. ಈವರೆಗೆ ೩೨೦೦ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದೇನೆ. ಇನ್ನು ೨೯೮ ಪ್ರಕರಣಗಳು ಬಾಕಿ ಉಳಿದಿವೆ. ಎಸಿ ಕೋರ್ಟ್‌ಗಳಲ್ಲಿ ತ್ವರಿತಗತಿಯ ನ್ಯಾಯ ಸಿಗುತ್ತಿರುವುದರಿಂದ ಸಿವಿಲ್ ನ್ಯಾಯಾಲಯದ ಮೇಲೆ ಪ್ರಕರಣಗಳ ಹೊರೆ ಕಡಿಮೆಯಾಗಿದೆ.

- ಎಂ.ಶಿವಮೂರ್ತಿ, ಉಪವಿಭಾಗಾಧಿಕಾರಿಜನರು ಬಯಸುವುದು ಶೀಘ್ರ ನ್ಯಾಯ. ಅವು ಎಸಿ ಕೋರ್ಟ್‌ಗಳಿಂದ ಸಿಗುತ್ತಿರುವುದು ಸಂತಸದ ಸಂಗತಿ. ಎಂ.ಶಿವಮೂರ್ತಿ ಅವರ ಕಾರ್ಯನಿರ್ವಹಣೆ ಜನಮೆಚ್ಚುಗೆ ಗಳಿಸಿದೆ. ಒಂದೂವರೆ ವರ್ಷದಲ್ಲಿ ೩೨೦೦ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಸಾಮಾನ್ಯದ ಮಾತಲ್ಲ. ಕೆಲಸದ ಒತ್ತಡದ ನಡುವೆಯೂ ನ್ಯಾಯದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುತ್ತಿರುವ ಅವರ ಕಾರ್ಯ ಮಾದರಿಯಾಗಿದೆ.

- ವೇಣುಗೋಪಾಲ್, ಸಾತನೂರು, ಮಂಡ್ಯ