ಕನ್ನಡಪ್ರಭ ವಾರ್ತೆ ಮಂಡ್ಯ

ಶಾಸಕ ಪಿ.ರವಿಕುಮಾರ್ ಅವರ ನೇತೃತ್ವದಲ್ಲಿ ತಾಲ್ಲೂಕಿನ ಹೊಸಬೂದನೂರು ಗ್ರಾಮದಲ್ಲಿ ಎರಡು ದಿನಗಳ ನಡೆದ ‘ಬೂದನೂರು ಉತ್ಸವ’ಕ್ಕೆ ಭಾನುವಾರ ರಾತ್ರಿ ಸಂಭ್ರಮದ ತೆರೆ ಬಿದ್ದಿತು.

ಹೊಯ್ಸಳ ಶಿಲ್ಪಕಲೆಗೆ ಹೆಸರಾದ ಶ್ರೀಕಾಶಿವಿಶ್ವನಾಥ ಮತ್ತು ಶ್ರೀಅನಂತಪದ್ಮನಾಭ ದೇವಾಲಯವಿರುವ ಹೊಸಬೂದನೂರು ಗ್ರಾಮದಲ್ಲಿ ನಡೆದ ಬೂದನೂರು ಉತ್ಸವದಲ್ಲಿ ಸಹಸ್ರಾರು ಜನರು ಭಾಗವಹಿಸಿ ಯಶಸ್ವಿಗೊಳಿಸಿದರು. ಇದರೊಂದಿಗೆ ಪ್ರವಾಸೋದ್ಯಮ ಉತ್ತೇಜನಕ್ಕೆ ಪೂರಕವಾಗಿ ಇತಿಹಾಸದ ಹಿನ್ನೆಲೆಯಲ್ಲಿ ವಾಸ್ತವವನ್ನು ಸಾರುವ ಪ್ರಯತ್ನ ನಡೆಯಿತು.

ಈ ಬಾರಿಯ ಉತ್ಸವದಲ್ಲಿ ಜಿಲ್ಲೆಯಲ್ಲಿ ಮೊಟ್ಟ ಮೊದಲಬಾರಿಗೆ ಹೆಲಿಟೂರಿಸಂನ್ನು ಆರಂಭಿಸಲಾಯಿತು. ಬೆಂಗಳೂರು, ಮೈಸೂರಿನಂತಹ ದೊಡ್ಡ ನಗರಗಳಲ್ಲಿ ಆಯೋಜನೆಗೊಳ್ಳುತ್ತಿದ್ದ ಹೆಲಿಕಾಪ್ಟರ್ ಜಾಯ್ ರೈಡ್‌ನ್ನು ಮಂಡ್ಯದಲ್ಲಿ ಆರಂಭಿಸಿದ ಹೆಗ್ಗಳಿಕೆ ಶಾಸಕ ಪಿ.ರವಿಕುಮಾರ್‌ ಅವರದ್ದಾಗಿದೆ. ಚಿಂದಗಿರಿದೊಡ್ಡಿಯಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಿ, ಅಲ್ಲೇ ಸಾರ್ವಜನಿಕರಿಗೆ ಹೆಲಿ ರೈಡ್‌ಗೆ ಅವಕಾಶ ಕಲ್ಪಿಸಿದ್ದರಿಂದ ನೂರಾರು ಜನರು ಕಾಪ್ಟರ್ ಮೂಲಕ ಆಗಸದಿಂದ ಮಂಡ್ಯ ನಗರವನ್ನು ವೀಕ್ಷಿಸಿ ಪುಳಕಿತಗೊಂಡಿದ್ದಾರೆ.

ಶನಿವಾರ ರಾತ್ರಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ತಂಡದಿಂದ ನಡೆದ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಗುರುಕಿರಣ್, ಗಣೇಶ್, ಸಿಂಚನ್, ಅನುಪಮ ಭಟ್ ಅವರ ಹಾಡುಗಳಿಗೆ ಜನರು ತಲೆದೂಗಿದರು. ಚಿಕ್ಕ ಮಕ್ಕಳು ಮತ್ತು ಯುವಜನರು ಫಿದಾ ಆದರು. ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟನ ಹಾಸ್ಯಕ್ಕೆ ಜನತೆ ಶಿಳ್ಳೆ ಮತ್ತು ಚಪ್ಪಾಳೆ ಹೊಡೆದು ಸಂತಸಪಟ್ಟರು.


ಸಮಾರೋಪ ಸಮಾರಂಭ:

ಉತ್ಸವದ ಎರಡನೇ ದಿನವಾದ ಭಾನುವಾರ ಸ್ಥಳೀಯ ಕಲಾವಿದರು ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಜಾನಪದ, ಭಾವಗೀತೆ ಮತ್ತು ಸೋಬಾನೆ ಪದಗಳನ್ನು ಹಾಡಿ ಜನತೆಯನ್ನು ರಂಜಿಸಿದರು.

ಗಾಯಕ ರಾಜೇಶ್ ಕೃಷ್ಣನ್ ತಂಡದವರು ಹಲವು ಹಾಡುಗಳನ್ನು ಹಾಡಿ ಜನತೆಯನ್ನು ಮಂತ್ರ ಮುಗ್ದಗೊಳಿಸಿದರು.