ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ವಿಜಯದಶಮಿ ದಿನದಂದು ಸಕ್ಕರೆ ನಗರದಲ್ಲಿ ದಸರಾ ಸಾಂಸ್ಕೃತಿಕ ಉತ್ಸವ ಪರಂಪರೆಗೆ ನಾಂದಿ ಹಾಡಿದ ಮಂಡ್ಯ ಯೂತ್ ಗ್ರೂಪ್ ವತಿಯಿಂದ ಶನಿವಾರ ಮಂಡ್ಯ ದಸರಾ ಉತ್ಸವ ವಿಜೃಂಭಣೆಯಿಂದ ಜರುಗಿತು. ಬೆಳ್ಳಿರಥದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಮೆರವಣಿಗೆ ಜನರನ್ನು ಆಕರ್ಷಿಸಿದರೆ, ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.ನಗರದ ಶ್ರೀ ಕಾಳಿಕಾಂಬ ದೇವಾಲಯದ ಗಜೇಂದ್ರಮೋಕ್ಷ ಕೊಳದ ಬಳಿ ಇರುವ ಬನ್ನಿಮರಕ್ಕೆ ಮಧ್ಯಾಹ್ನ ೩.೧೫ರಿಂದ ೩.೫೦ರೊಳಗೆ ಸಲ್ಲುವ ಶ್ರವಣನಕ್ಷತ್ರ ಕುಂಭ ಲಗ್ನದಲ್ಲಿ ಶಾಸಕ ಪಿ.ರವಿಕುಮಾರ್ ಮತ್ತು ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗಿ ಎಲ್ಲೆಡೆ ಸುಭಿಕ್ಷೆ ನೆಲೆಸಲಿ. ರೈತರ ಬೆಳೆ ಕೈಸೇರಿ ಅವರ ಬದುಕು ಹಸನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ನಂತರ ಬೆಳ್ಳಿರಥದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಶ್ರೀ ಚಾಮುಂಡೇಶ್ವರಿ ದೇವಿಗೆ ಶಾಸಕ ಪಿ.ರವಿಕುಮಾರ್ ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಜಾನಪದ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು.ಶ್ರೀ ಕಾಳಿಕಾಂಬ ದೇವಾಲಯದ ಮುಂಭಾಗದಿಂದ ಮಂಡ್ಯ ದಸರಾ ಮೆರವಣಿಗೆಗೆ ಆರಂಭಗೊಂಡಿತು. ೨೦ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಜೊತೆಗೂಡಿದವು. ಒಂದೊಂದು ನೆಲದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾತಂಡಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ ಪ್ರದರ್ಶನ ನೀಡುತ್ತಾ ಮುಂದೆ ಮುಂದೆ ಸಾಗಿದವು. ಕಲಾವಿದರ ಪ್ರತಿಭಾ ಪ್ರದರ್ಶನ ಸಾರ್ವಜನಿಕರನ್ನು ಬಹುವಾಗಿ ಆಕರ್ಷಿಸಿತು.
ಈ ಬಾರಿ ಕೇರಳ ಚಂಡೆ, ಭದ್ರಕಾಳಿ ವೀರಗಾಸೆ, ನಾಗರಹೊಳೆ ಜೇನುಕುರುಬರ ಕುಣಿತ, ಕೋಳಿ ಗೊಂಬೆ ತಂಡದವರನ್ನು ವಿಶೇಷವಾಗಿ ಕರೆತರಲಾಗಿತ್ತು. ಹೊಸದಾಗಿ ಸೇರ್ಪಡೆಗೊಂಡಿದ್ದ ಕಲಾತಂಡಗಳು ನೋಡುಗರ ಮೆಚ್ಚುಗೆಗೆ ಪಾತ್ರವಾಗಿದ್ದವು. ಬೆಂಕಿ ಭರಾಟೆ, ದೊಣ್ಣೆವರಸೆ ಪ್ರದರ್ಶನ ಜನರನ್ನು ರೋಮಾಂಚನಗೊಳಿಸಿತು. ಡೊಳ್ಳಿನ ಶಬ್ಧ ಎಲ್ಲೆಡೆ ಮಾರ್ಧನಿಸಿತು. ಡೊಳ್ಳಿನ ಶಬ್ಧಕ್ಕೆ ತಕ್ಕಂತೆ ಕಲಾವಿದರ ಕುಣಿತವೂ ಆಕರ್ಷಣೀಯವಾಗಿತ್ತು. ತಮಟೆ ಸದ್ದು ಕೂಡ ಡೊಳ್ಳಿಗೆ ಸರಿಸಮನಾಗಿ ಮೊಳಗುತ್ತಿತ್ತು.ಪುಟ್ಟ ಕಾಲು ಉದ್ದ ದೇಹದೊಂದಿಗೆ ಮೈಮೇಲೆ ಕಪ್ಪು ಚುಕ್ಕೆಗನ್ನಿರಿಸಿಕೊಂಡು ಶ್ವೇತ ವರ್ಣದಲ್ಲಿ ಪಾಲ್ಗೊಂಡಿದ್ದ ಬನ್ನೂರು ಕುರಿಗಳು ಎಲ್ಲರ ಗಮನಸೆಳೆದವು. ಹುಲಿವೇಷ, ಗೊರವರ ಕುಣಿತ, ವೀರಮಕ್ಕಳ ಕುಣಿತ ಪ್ರದರ್ಶನ ಶಹಬ್ಬಾಸ್‌ಗಿರಿ ಪಡೆದುಕೊಂಡವು. ಇನ್ನುಳಿದಂತೆ ನಾದಸ್ವರ, ಪೂಜಾ ಕುಣಿತ, ಚಿಲಿಪಿಲಿಗೊಂಬೆ, ಸೋಮನ ಕುಣಿತ, ಶ್ರೀರಂಗಪಟ್ಟಣ ಡ್ರಮ್ಸ್, ತಮಟೆ, ನಗಾರಿ, ಕಂಸಾಳೆ ಅತ್ಯುತ್ತಮ ಪ್ರದರ್ಶನ ನೀಡಿ ರಂಜಿಸಿದವು.
ಈ ವೇಳೆ ದಸರಾ ಸಾಂಸ್ಕೃತಿಕ ಉತ್ಸವದ ಮೆರವಣಿಗೆಯಲ್ಲಿ ಶ್ರೀನಿವಾಸಮೂರ್ತಿ ಎಂಬುವವರು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ವೇಷ ಧರಿಸಿ, ನೆರೆದಿದ್ದ ಜನರ ಗಮನ ಸೆಳೆದರು.ಮಂಡ್ಯ ದಸರಾ ಮೆರವಣಿಗೆ ಸಾಗುವ ರಸ್ತೆಗಳ ಇಕ್ಕೆಲಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನಿಂತು ವೀಕ್ಷಿಸಿದರು. ವಿಶ್ವೇಶ್ವರಯ್ಯ ರಸ್ತೆಯಿಂದ ಹೊಸಹಳ್ಳಿ ವೃತ್ತದವರೆಗೆ ಹಾಗೂ ಹೊಸಹಳ್ಳಿ ವೃತ್ತದಿಂದ ಬನ್ನೂರು ರಸ್ತೆವರೆಗೂ ಕಟ್ಟಡಗಳ ಮೇಲೆ ನಿಂತು ದಸರಾ ಮೆರವಣಿಗೆಯನ್ನು ನೋಡಿ ಆನಂದಿಸಿದರು.
ಮೆರವಣಿಗೆಯು ಶ್ರೀ ಕಾಳಿಕಾಂಬ ದೇವಾಲಯದ ಆವರಣದಿಂದ ಹೊರಟು ಎಸ್.ಡಿ.ಜಯರಾಂ ವೃತ್ತದ ಬಳಿ ಬೆಂಗಳೂರು- ಮೈಸೂರು ಹೆದ್ದಾರಿ ಸೇರಿ ಅಲ್ಲಿಂದ ಮಹಾವೀರ ವೃತ್ತ ತಲುಪಿತು. ನಂತರ ವಿ.ವಿ.ರಸ್ತೆ ಮಾರ್ಗವಾಗಿ ಹೊಸಹಳ್ಳಿ ವೃತ್ತಕ್ಕೆ ಆಗಮಿಸಿತು. ಬಳಿಕ ನೂರಡಿ ರಸ್ತೆ ಮಾರ್ಗವಾಗಿ ತೆರಳಿ ಬನ್ನೂರು ರಸ್ತೆ ಮೂಲಕ ಶ್ರೀ ಚಾಮುಂಡೇಶ್ವರಿ ದೇವಾಲಯದ ಬಳಿ ಮೆರವಣಿಗೆ ಅಂತ್ಯಗೊಂಡಿತು. ಮಂಡ್ಯ ಯೂತ್ ಗ್ರೂಪ್ ಪದಾಧಿಕಾರಿಗಳು ಶ್ವೇತ ವಸ್ತ್ರದಲ್ಲಿ ಕಾಣಿಸಿಕೊಂಡಿದ್ದರು. ಮೆರವಣಿಗೆಯುದ್ದಕ್ಕೂ ಜೊತೆಯಾಗಿ ನಿಂತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಮುನ್ನಡೆಸಿದರು.ಪೊಲೀಸ್ ಇಲಾಖೆ ಸಹಕಾರ:
ಮಂಡ್ಯ ದಸರಾ ಮೆರವಣಿಗೆ ಆರಂಭದಿಂದ ಅಂತ್ಯದವರೆಗೂ ಪೊಲೀಸರು ಉತ್ತಮ ಸಹಕಾರ ನೀಡಿದರು. ಅಗತ್ಯ ಭದ್ರತೆಯನ್ನು ಒದಗಿಸುವುದರೊಂದಿಗೆ ಎಲ್ಲಿಯೂ ಮೆರವಣಿಗೆಗೆ ಅಡ್ಡಿ- ಅಡಚಣೆಗಳು ಎದುರಾಗದಂತೆ ನೋಡಿಕೊಂಡರು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನೀಡಿದ ಸಹಕಾರಕ್ಕೆ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಕೃತಜ್ಞತೆ ಸಲ್ಲಿಸಿದ್ದಾರೆ.