ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಮಂಡ್ಯಗ್ರಾಮೀಣ ಜನರಿಗೆ ಹವಾಮಾನದ ಮುನ್ಸೂಚನೆ ನೀಡುತ್ತಿದ್ದ ತಾಲೂಕಿನ ವಿ.ಸಿ.ಫಾರಂನಲ್ಲಿದ್ದ ಜಿಲ್ಲಾ ಕೃಷಿ ಹವಾಮಾನ ಘಟಕದ ಕಾರ್ಯನಿರ್ವಹಣೆ ಬಂದ್ ಆಗಿದೆ. ಇದರಿಂದ ನಾಲ್ಕು ಜಿಲ್ಲೆಯ ರೈತರಿಗೆ ದೊರಕುತ್ತಿದ್ದ ಹವಾಮಾನ ಮಾಹಿತಿ ಈಗ ದೂರವಾಗಿದೆ.
ಹವಾಮಾನ ಮುನ್ಸೂಚನೆಯನ್ನು ಖಚಿತವಾಗಿ ನೀಡಬೇಕೆಂಬ ಉದ್ದೇಶದಿಂದ ೨೦೧೯ರ ಜೂನ್ ತಿಂಗಳಲ್ಲಿ ಮಂಡ್ಯ ತಾಲೂಕಿನ ವಿ.ಸಿ.ಫಾರಂನಲ್ಲಿ ಜಿಲ್ಲಾ ಕೃಷಿ ಹವಾಮಾನ ಘಟಕ ಆರಂಭಗೊಂಡಿತ್ತು. ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು ಜಿಲ್ಲೆಯ ರೈತರಿಗೆ ಹವಾಮಾನ ಮಾಹಿತಿ ತಿಳಿಸಲಾಗುತ್ತಿತ್ತು. ಪ್ರತಿ ಜಿಲ್ಲೆ, ತಾಲೂಕು ಹಾಗೂ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ರೈತರಿಗೂ ಖಚಿತ ಹವಾಮಾನ ಮಾಹಿತಿ ಸಿಗಬೇಕೆಂಬ ಕಾರಣದಿಂದ ಈ ಘಟಕಗಳನ್ನು ಸ್ಥಾಪಿಸಲಾಗಿತ್ತು.ಈ ಕೇಂದ್ರದಲ್ಲಿ ವಿಷಯ ತಜ್ಞರು ಹಾಗೂ ಹವಾಮಾನ ಪರೀಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಹವಾಮಾನ ಮುನ್ಸೂಚನೆ ಹಾಗೂ ತಾಲೂಕು ಮಟ್ಟದಲ್ಲಿ ಕೃಷಿ ಸಂಬಂಧಿತ ಸಲಹೆಗಳನ್ನು ರೈತರಿಗೆ ನೀಡಲಾಗುತ್ತಿತ್ತು. ಅದರ ಆಧಾರದ ಮೇಲೆ ಕೃಷಿ ಚಟುವಟಿಕೆ ಕೈಗೊಳ್ಳಲು ಹಾಗೂ ರಸಗೊಬ್ಬರ ಬಳಕೆಗೆ ರೈತರಿಗೆ ಅನುಕೂಲವಾಗುತ್ತಿತ್ತು.
ರೈತರು ನಿತ್ಯವೂ ಘಟಕದ ವಿಷಯ ತಜ್ಞರು, ಹವಾಮಾನ ಪರಿವೀಕ್ಷಕರಿಗೆ ದೂರವಾಣಿ ಕರೆ ಮಾಡಿ ಯಾವಾಗ ಮಳೆಯಾಗಬಹುದು, ಯಾವ ಹವಾಮಾನದಲ್ಲಿ ಯಾವ ಬೆಳೆ ಬೆಳೆಯುವುದು ಸೂಕ್ತ ಎಂಬೆಲ್ಲಾ ಮಾಹಿತಿ ಪಡೆದುಕೊಂಡು ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಜಿಲ್ಲೆಯ ರೈತರಷ್ಟೇ ಅಲ್ಲದೇ, ತುಮಕೂರು, ರಾಮನಗರ, ಮೈಸೂರು ಜಿಲ್ಲೆಯ ರೈತರೂ ಘಟಕದಿಂದ ಹವಾಮಾನ ಆಧಾರಿತ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರು.ಈಗ ಘಟಕದ ಕಾರ್ಯನಿರ್ವಹಣೆ ಬಂದ್ ಆಗಿರುವುದರಿಂದ ಹವಾಮಾನಕ್ಕೆ ಸಂಬಂಧಿಸಿದ ಯಾವೊಂದು ಮಾಹಿತಿಯೂ ಸ್ಥಳೀಯ ರೈತರು ಸೇರಿದಂತೆ ನಾಲ್ಕೂ ಜಿಲ್ಲೆಯ ರೈತರಿಗೆ ದೊರೆಯದಂತಾಗಿದೆ. ಕೇಂದ್ರಸರ್ಕಾರದ ಸೂಚನೆಯಂತೆ ಫೆ.೨೯ರಿಂದಲೇ ಕಾರ್ಯನಿರ್ವಹಣೆ ಬಂದ್ ಮಾಡಲಾಗಿದೆ. ಹಣಕಾಸಿನ ಕೊರತೆಯಿಂದ ಘಟಕಗಳನ್ನು ಮುನ್ನಡೆಸಲಾಗದೆ ಮುಚ್ಚಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಳೆದ ಐದು ವರ್ಷಗಳಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದ ಜಿಲ್ಲಾ ಕೃಷಿ ಹವಾಮಾನ ಘಟಕಗಳು ರೈತಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದವು. ಇವುಗಳನ್ನು ತಾಲೂಕು, ಗ್ರಾಮ ಮಟ್ಟಕ್ಕೆ ವಿಸ್ತರಣೆ ಮಾಡುವ ಆಶಯವನ್ನೂ ಹೊಂದಲಾಗಿತ್ತು. ಆದರೆ, ಕೇಂದ್ರಸರ್ಕಾರ ಯಾವುದೇ ಸಕಾರಣ ನೀಡದೆ ಏಕಾಏಕಿ ಘಟಕಗಳ ಕಾರ್ಯನಿರ್ವಹಣೆಯನ್ನು ಬಂದ್ ಮಾಡುವಂತೆ ಸೂಚಿಸಿ ಆದೇಶ ಹೊರಡಿಸಿದೆ.ಜಿಲ್ಲಾ ಕೃಷಿ ಹವಾಮಾನ ಘಟಕಗಳು ಬಾಗಿಲು ಮುಚ್ಚಿರುವುದರಿಂದ ಹವಾಮಾನ ಮುನ್ಸೂಚನೆ ನೀಡುವ ಜವಾಬ್ದಾರಿ ಆಟೊಮ್ಯಾಟಿಕ್ ಫೀಲ್ಡ್ಸ್ ಯೂನಿಟ್‌ಗಳ ಮೇಲೆ ಬಿದ್ದಿದೆ. ಇವುಗಳಿಂದ ತಾಲೂಕು ಮಟ್ಟದ ರೈತರಿಗೆ ಮುನ್ಸೂಚನೆ ನೀಡುವುದು ಕಷ್ಟವಾಗಲಿದೆ. ಜಿಲ್ಲೆಗೆ ಒಂದೇ ರೀತಿಯ ಮುನ್ಸೂಚನೆಗಳನ್ನನು ನೀಡಲಿವೆ. ಜಿಲ್ಲಾ ಕೇಂದ್ರಿತ ಮುನ್ಸೂಚನೆಗಳು ಎಲ್ಲ ತಾಲೂಕುಗಳಿಗೆ ಏಕಪ್ರಕಾರವಾಗಿ ಅನ್ವಯವಾಗುವುದಿಲ್ಲ. ಈ ಹಿಂದೆ ದೊರಕುತ್ತಿದ್ದಂತೆ ತಾಲೂಕು ಮಟ್ಟ, ಗ್ರಾಮಮಟ್ಟದ ಹವಾಮಾನ ಕುರಿತ ಮಾಹಿತಿಯನ್ನು ಪಡೆಯುವುದು ಕಷ್ಟವಾಗಲಿದೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))