ಮಂಡ್ಯ ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರ ಬಳಕೆ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್

| Published : Sep 27 2025, 12:00 AM IST

ಮಂಡ್ಯ ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರ ಬಳಕೆ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್
Share this Article
  • FB
  • TW
  • Linkdin
  • Email

ಸಾರಾಂಶ

ಹಸು ಹಾಲು ಉತ್ಪಾದನೆ, ಶಕ್ತಿ ಹೆಚ್ಚಿಸಲು ಸಾರಜನಕ, ಕೊಬ್ಬು, ನಾರು ಮತ್ತು ಲವಣಾಂಶ ಪೋಷಕಾಂಶಗಳು ಅತ್ಯಗತ್ಯ. ಪಶು ಆಸ್ಪತ್ರೆಗಳಲ್ಲಿ ಕೊಕು ಮಾತ್ರೆ ದೊರೆಯುತ್ತದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಜಿಲ್ಲೆಯಲ್ಲಿ 5 ಲಕ್ಷ ಹೆಕ್ಟೇರ್ ಪ್ರದೇಶಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ 1.70 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬಳಕೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಹೇಳಿದರು.

ಶ್ರೀರಂಗಪಟ್ಟಣ ದಸರಾ ಅಂಗವಾಗಿ ಶ್ರೀರಂಗ ವೇದಿಕೆಯಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿ ರೈತ ದಸರಾ ಕುರಿತು ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ಯೂರಿಯಾ ಬಳಸುವ ಜಿಲ್ಲೆಗಳಲ್ಲಿ ಮಂಡ್ಯ ಸಹ ಒಂದು. ಅತಿಯಾದ ಯೂರಿಯಾ ಬಳಕೆಯಿಂದ ಭೂಮಿ ಫಲವತ್ತತೆ ಹಾಗೂ ಬೆಳೆಯ ಗುಣಮಟ್ಟ ಕುಂದುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ನೈಸರ್ಗಿಕ ಕೃಷಿ ಪದ್ಧತಿಯನ್ನು ಸದರಿ ವರ್ಷ ಜಾರಿಗೊಳಿಸಲಾಗಿದೆ. ರೈತರು ಸಾವಯವ ಗೊಬ್ಬರ ಉಪಯೋಗಿಸಿ ಅಧಿಕ ಇಳುವರಿ ಪಡೆಯಬಹುದು. ಗುಣಮಟ್ಟದ ಬೆಳೆ ಹಾಗೂ ಬೆಲೆಯನ್ನು ಪಡೆಯಬಹುದು ಎಂದು ತಿಳಿಸಿದರು.

ಬೆಲ್ಲದ ನಾಡು ರೈತ ಉತ್ಪಾದಕ ಸಂಸ್ಥೆ ಅಧ್ಯಕ್ಷ ಕಾರಸವಾಡಿ ಮಹಾದೇವು ಮಾತನಾಡಿ, ರೈತರು ಸಾವಯವ ಕೃಷಿ ಪದ್ಧತಿ ಅನುಸರಿಸಿ ಬೆಳೆ ಬೆಳೆಯುವ ಮೂಲಕ ರಾಸಾಯನಿಕ ಮುಕ್ತ ಬೆಳೆಗಳಿಗೆ ದೇಶ, ವಿದೇಶಗಳಲ್ಲಿ ಉತ್ತಮ ಬೆಲೆ ಇದೆ. ರೈತರು ಬೆಳೆದ ಬೆಳೆಯನ್ನು ಬ್ರ್ಯಾಂಡಿಂಗ್ ಮತ್ತು ಪ್ಯಾಕಿಂಗ್ ಮಾಡಲು ಕೃಷಿ ಇಲಾಖೆ ಸಹಾಯಧನ ನೀಡುತ್ತದೆ ಎಂದು ತಿಳಿಸಿದರು.

ನೇಸರ ಅಗ್ರಿ ಸಂಸ್ಥೆ ಸಂಸ್ಧಾಪಕಿ ರೇಷ್ಮಾ ರಾಣಿ ಮಾತನಾಡಿ, ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ನಮ್ಮ ಪರಿಸರ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಬಹುದು ಎಂದರು.

ಪಶು ವೈದ್ಯಕೀಯ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ. ಎಚ್.ಎಸ್.ಮಧುಸೂದನ್ ಮಾತನಾಡಿ, ಹಸು ಹಾಲು ಉತ್ಪಾದನೆ, ಶಕ್ತಿ ಹೆಚ್ಚಿಸಲು ಸಾರಜನಕ, ಕೊಬ್ಬು, ನಾರು ಮತ್ತು ಲವಣಾಂಶ ಪೋಷಕಾಂಶಗಳು ಅತ್ಯಗತ್ಯ. ಪಶು ಆಸ್ಪತ್ರೆಗಳಲ್ಲಿ ಕೊಕು ಮಾತ್ರೆ ದೊರೆಯುತ್ತದೆ. ಕೊಕು ಮಾತ್ರೆ ಜಿಂಕ್ ಅಂಶವನ್ನು ಹೊಂದಿದೆ. ಜಿಂಕ್ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರ ಜೊತೆ ಹಸಿ ಹುಲ್ಲು, ಜೋಳದಂತಹ ಆಹಾರವನ್ನು ನೀಡುವುದರಿಂದ ಹಾಲಿನ ಗುಣಮಟ್ಟ ಹೆಚ್ಚುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚೇತನ ಯಾದವ್, ಕೃಷಿ ತಜ್ಞರು ಹಾಗೂ ಜಿಲ್ಲೆಯ ವಿವಿಧ ರೈತ ಉತ್ಪಾದಕ ಕಂಪನಿಗಳ ಮಾಲೀಕ ಸೇರಿದಂತೆ ಇತರರು ಇದ್ದರು.