ಮಾರಾಟಕ್ಕಿದೆ ಮಂಡ್ಯ ಜಿಲ್ಲಾ ಕನ್ನಡ ಭವನ..!

| Published : Dec 26 2024, 01:03 AM IST

ಸಾರಾಂಶ

ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದು ಮೂರು ದಿನ ಕಳೆದಿಲ್ಲ. ಸಮ್ಮೇಳನಕ್ಕೆ ಹಾಕಿದ್ದ ವಿದ್ಯುತ್ ದೀಪಗಳೂ ಇನ್ನೂ ಆರಿಲ್ಲ. ಸಮ್ಮೇಳನದ ಯಶಸ್ಸಿನ ಗುಂಗಿನಿಂದ ಇನ್ನೂ ಯಾರೂ ಹೊರಬಂದಿಲ್ಲ. ಇವರು ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡು ೨೪ ತಾಸು ಕಳೆಯುವುದರೊಳಗೆ ಕನ್ನಡ ಭವನ ಮಾರಾಟ ಕುರಿತು ಆಡಿರುವ ಮಾತುಗಳಿಗೆ ಎಲ್ಲೆಡೆಯಿಂದ ತೀವ್ರ ಕಟು ಟೀಕೆಗಳು ವ್ಯಕ್ತವಾಗಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅರವತ್ತ ಮೂರನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ನೆನಪಿಗಾಗಿ ಕಟ್ಟಿದ ಜಿಲ್ಲಾ ಕನ್ನಡ ಭವನವನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳುವ ಮೂಲಕ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡಿರುವ ಡಾ.ಎಚ್.ಎಸ್.ಮುದ್ದೇಗೌಡ ಬಾಂಬ್ ಸಿಡಿಸಿದ್ದಾರೆ.

ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದು ಮೂರು ದಿನ ಕಳೆದಿಲ್ಲ. ಸಮ್ಮೇಳನಕ್ಕೆ ಹಾಕಿದ್ದ ವಿದ್ಯುತ್ ದೀಪಗಳೂ ಇನ್ನೂ ಆರಿಲ್ಲ. ಸಮ್ಮೇಳನದ ಯಶಸ್ಸಿನ ಗುಂಗಿನಿಂದ ಇನ್ನೂ ಯಾರೂ ಹೊರಬಂದಿಲ್ಲ. ಇವರು ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡು ೨೪ ತಾಸು ಕಳೆಯುವುದರೊಳಗೆ ಕನ್ನಡ ಭವನ ಮಾರಾಟ ಕುರಿತು ಆಡಿರುವ ಮಾತುಗಳಿಗೆ ಎಲ್ಲೆಡೆಯಿಂದ ತೀವ್ರ ಕಟು ಟೀಕೆಗಳು ವ್ಯಕ್ತವಾಗಿವೆ.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಭವನ ಮಾರಾಟ ಮಾಡುವ ವಿಚಾರ ಮುದ್ದೇಗೌಡರ ವೈಯಕ್ತಿಕ ಅಭಿಪ್ರಾಯವೋ ಅಥವಾ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಅವರ ಮೌಖಿಕ ಸೂಚನೆಯಂತೆ ವಿಷಯವನ್ನು ಬಹಿರಂಗಪಡಿಸಿದರೋ ಎನ್ನುವುದು ಸಾಹಿತ್ಯ ಮತ್ತು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಮುದ್ದೇಗೌಡರು ತಮ್ಮ ವಿವಾದಾಸ್ಪದ ಹೇಳಿಕೆಯೊಳಕ್ಕೆ ಸಚಿವ ಶಿವರಾಜ್ ತಂಗಡಗಿ, ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್‌ ಜೋಶಿ ಹಾಗೂ ಜಿಲ್ಲಾಡಳಿತವನ್ನೂ ಎಳೆದುತಂದಿದ್ದಾರೆ.

ಗೋಷ್ಠಿಯಲ್ಲಿ ಹೇಳಿದ್ದೇನು?

ನಗರದ ಬಂದೀಗೌಡ ಬಡಾವಣೆಯಲ್ಲಿರುವ ಜಿಲ್ಲಾ ಕನ್ನಡ ಭವನ ಸಾಕಷ್ಟು ಕಿರಿದಾಗಿದೆ. ಯಾರೂ ಹೋಗದಂತಹ ಮೂಲೆಯಲ್ಲಿ ಪರಿಷತ್ತಿನ ಭವನವಿದೆ. ಕನ್ನಡ ಮತ್ತು ಪರಿಷತ್ತಿನ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಜಾಗ ಸಾಲದಂತಾಗಿದೆ. ಸರ್ಪಗಳು ಓಡಾಡುವ ಜಾಗದಲ್ಲಿರುವ ಭವನಕ್ಕೆ ಯಾರೂ ಬರದಂತಹ ಸ್ಥಿತಿಯಲ್ಲಿರುವುದರಿಂದ ಅದನ್ನು ಮಾರಾಟ ಮಾಡಿ ಹೊಸ ಜಾಗದಲ್ಲಿ ಜಿಲ್ಲಾ ಕನ್ನಡ ಭವನವನ್ನು ತಲೆಎತ್ತುವಂತೆ ಮಾಡಲಾಗುವುದು ಎಂದರು.

ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಹಾಗೂ ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಲಾಗಿದ್ದು, ೬೦*೪೦ರ ಅಳತೆಯಲ್ಲಿ ಬೇರೆಡೆ ಜಾಗ ಹುಡುಕಿಕೊಡುವಂತೆ ಮನವಿ ಮಾಡಿರುವುದಾಗಿ ಹೇಳಿದರು.

ಪ್ರಸ್ತುತ ಇರುವ ಪರಿಷತ್ ಭವನವನ್ನು ಮಾರಾಟ ಮಾಡದೆ ವಿಧಿಯಿಲ್ಲ. ಅಲ್ಲಿ ನಾನು ಸಂಗ್ರಹಿಸಿದ್ದ ೧೫ ಸಾವಿರ ಪುಸ್ತಕಗಳು, ೧೬ ಬೀರುಗಳು ಅಲ್ಲಿವೆ. ಅವೆಲ್ಲವೂ ಹಾಳಾಗುವ ಸ್ಥಿತಿಯಲ್ಲಿವೆ. ಈಗಿರುವ ಸ್ಥಳಕ್ಕಿಂತಲೂ ಒಳ್ಳೆಯ ಜಾಗವನ್ನು ನಗರದಲ್ಲೇ ಹುಡುಕಿದ್ದೇವೆ. ಅದನ್ನು ಈಗಲೇ ಹೇಳುವುದಿಲ್ಲ ಎಂದ ಮುದ್ದೇಗೌಡ ಅವರು, ಒಮ್ಮೆ ಸರ್ಕಾರ ಆ ಜಾಗ ನಮಗೆ ಬೇಡವೆಂದು ಹೇಳಿದರೆ ಖಾಸಗಿಯವರಿಗೆ ಮಾರಾಟ ಮಾಡುವುದಕ್ಕೂ ಸಿದ್ಧರಿದ್ದೇವೆ. ಹೊಸದಾಗಿ ಭವನ ಕಟ್ಟುವ ಸ್ಥಳದಲ್ಲಿ ನಿಂಟ್ಲ್‌ ( ಕಟ್ಟಡದ ಸಜ್ಜಾ) ವರೆಗೆ ಸರ್ಕಾರ ಹಣ ನೀಡುವುದಾಗಿ, ಪರಿಷತ್ತಿನ ರಾಜ್ಯ ಘಟಕವೂ ಹಣಕಾಸಿನ ನೆರವು ನೀಡಲು ಒಪ್ಪಿರುವುದಾಗಿ ತಿಳಿಸಿದರು.

ಈಗಿರುವ ಜಿಲ್ಲಾ ಕನ್ನಡ ಭವನವನ್ನು ಮಾರಾಟ ಮಾಡಿದ ಹಣವನ್ನು ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಕನ್ನಡ ಭವನ ನಿರ್ಮಿಸುವುದಕ್ಕೆ ಬಳಸುವುದಾಗಿ ಹೇಳುವ ಮೂಲಕ ಗೊಂದಲ ಸೃಷ್ಟಿಸಿದರು.

ಇನ್ನುಳಿದಂತೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡ ನಂತರ ನಗರದ ಹೊರ ವಲಯದಲ್ಲಿ ಮಾಡುವುದರಿಂದ ಸಮ್ಮೇಳನಕ್ಕೆ ಜನರು ಸೇರುವುದಿಲ್ಲ. ಐದು ಸಾವಿರ ಜನರು ಬಂದರೆ ಹೆಚ್ಚು ಎಂದು ಪ್ರೊ.ಬಿ. ಜಯಪ್ರಕಾಶಗೌಡ, ಪ್ರೊ.ಜಿ.ಟಿ.ವೀರಪ್ಪ, ಪ್ರೊ.ಎಸ್.ಬಿ. ಶಂಕರೇಗೌಡರಂತಹವರು ಕುಹಕವಾಡಿದ್ದರು. ಆದರೆ, ಸಮ್ಮೇಳನ ಅದ್ಧೂರಿಯಾಗಿ ನಡೆದು ಅವರೆಲ್ಲರ ಬಾಯಿ ಮುಚ್ಚಿಸಿದೆ ಎಂದರು.

ಗೋಷ್ಠಿಯಲ್ಲಿ ಹುಸ್ಕೂರು ಕೃಷ್ಣೇಗೌಡ, ಸುಜಾತ ಕೃಷ್ಣ, ಧನಂಜಯ, ಬಿ.ಎಂ.ಅಪ್ಪಾಜಪ್ಪ, ಕನ್ನಿಕಾ ಇದ್ದರು.

ಕನ್ನಡ ಭವನ ಮಾರಾಟ ಮಾಡುತ್ತೇವೆ ಎನ್ನುವವರಿಗೆ ನಾಚಿಕೆಯಾಗುವುದಿಲ್ಲವೇ. ತಾಕತ್ತಿದ್ದರೆ ಹೊಸ ಕನ್ನಡ ಭವನವೊಂದನ್ನು ಕಟ್ಟಿ ತೋರಿಸಲಿ. ಈಗಿರುವ ಕನ್ನಡ ಭವನ ಕಿರಿದಾಗಿದ್ದರೆ ಅದನ್ನು ತಾಲೂಕು ಪರಿಷತ್ ಕಚೇರಿಯನ್ನಾಗಿ ಮಾಡಿಕೊಳ್ಳಲಿ. ಅರವತ್ತ ಮೂರನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ಕಟ್ಟಿರುವುದನ್ನು ಮಾರಾಟ ಮಾಡುತ್ತೇವೆನ್ನುವ ಹುಚ್ಚರಿಗೆ ನಾವೇನು ಹೇಳೋದು.

- ಪ್ರೊ.ಜಿ.ಟಿ.ವೀರಪ್ಪ, ಮಾಜಿ ಅಧ್ಯಕ್ಷರು, ಜಿಲ್ಲಾ ಕಸಾಪ

ಕನ್ನಡ ಭವನ ಮಾರಾಟ ಮಾಡುವ ಆಲೋಚನೆಯೇ ಸರಿಯಲ್ಲ. ಅದನ್ನೊಂದು ಗ್ರಂಥಾಲಯವಾಗಿ ಪರಿವರ್ತಿಸಬಹುದು. ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಯೋಗ್ಯವಾಗಿದೆ. ಸಮರ್ಪಕ ನಿರ್ವಹಣೆ ಮಾಡಿದಲ್ಲಿ ಉತ್ತಮ ಭವನವಾಗಿ ಉಳಿಸಿಕೊಳ್ಳಬಹುದು. ೧೯೯೪ರಲ್ಲಿ ನಡೆದ ಸಮ್ಮೇಳನದ ಸವಿ ನೆನಪಿನಲ್ಲಿ ಮೂರೇ ತಿಂಗಳಲ್ಲಿ ತಲೆ ಎತ್ತಿದ ಭವನ. ಕಟ್ಟಡ ನಿರ್ಮಾಣ ದ ಹಿಂದೆ ಹಲವಾರು ಹಿರಿಯರ ಶ್ರಮವಿದೆ.

- ಡಾ.ಮೀರಾ ಶಿವಲಿಂಗಯ್ಯ, ಸಮ್ಮೇಳನ ಮಾಜಿ ಸಂಚಾಲಕಿ

ಮಾರಾಟ ಮಾಡಲಿಕ್ಕೇನು ಅವರ ಆಸ್ತಿಯೇ. ಕನ್ನಡ ಭವನ ಮಾರಾಟ ಮಾಡುವುದು ಅಷ್ಟು ಸುಲಭವೇ. ಭವನದಿಂದ ಆಗಿರುವ ತೊಂದರೆಯಾದರೂ ಏನು?, ನೂತನ ಅಧ್ಯಕ್ಷರಿಗೆ ತುಂಬಾ ಶಕ್ತಿ ಇದೆ. ಸರ್ಕಾರ, ಸಚಿವರು, ರಾಜ್ಯಾಧ್ಯಕ್ಷರು ಅವರೆಲ್ಲರೂ ಅಧ್ಯಕ್ಷರ ಬೆನ್ನಿಗಿದ್ದಾರೆ. ಅಂದ ಮೇಲೆ ಹೊಸ ಭವನವನ್ನೇ ಕಟ್ಟಲಿ. ಓದಿದವರೆಲ್ಲಾ ಜ್ಞಾನವಂತರಲ್ಲ. ಒಮ್ಮೊಮ್ಮೆ ತಿಳಿವಳಿಕೆ ಜಾಸ್ತಿಯಾದರೆ ಬುದ್ಧಿಯೂ ಕೆಟ್ಟುಹೋಗುತ್ತದೆ.

- ಪ್ರೊ.ಬಿ.ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ

ಕನ್ನಡ ಭವನ ಮಾರಾಟ ಮಾಡುತ್ತೇವೆ ಎಂದು ಹೇಳುವುದೇ ಅಕ್ಷಮ್ಯ ಅಪರಾಧ. ಭವನ ಮಾರಾಟ ಮಾಡುತ್ತೇವೆ ಎನ್ನುವುದು ದುಡ್ಡಿಗೋಸ್ಕರ ಮಾತ್ರ. ಹೊಸ ಭವನ ಕಟ್ಟಲಿ. ಅಂತಹ ನಾಲ್ಕೈದು ಭವನಗಳು ಕನ್ನಡದ ಪ್ರತೀಕವಾಗಿ ತಲೆಎತ್ತಲಿ. ಆದರೆ, ಅರವತ್ತ ಮೂರನೇ ಸಮ್ಮೇಳನವನ್ನು ನೆನಪಿಸುವ ಭವನವನ್ನು ಮಾರುವುದು ಬೇಡ. ಅದರ ನೆನಪನ್ನು ಸದಾ ಜೀವಂತವಾಗಿಡುವ ಕೆಲಸಗಳು ನಡೆಯಲಿ.

- ಡಾ.ಪ್ರದೀಪ್‌ಕುಮಾರ್ ಹೆಬ್ರಿ, ಸಾಹಿತಿ

ಕನ್ನಡ ಭವನ ಮಾರಾಟ ಮಾಡುವ ಅಗತ್ಯವೇನು. ಈ ಭವನವನ್ನು ಉಳಿಸಿಕೊಂಡು ಹೊಸ ಭವನವನ್ನು ಕಟ್ಟುವ ಕಡೆ ನಮ್ಮ ಆಲೋಚನೆಗಳಿರಬೇಕು. ಅರವತ್ತ ಮೂರರ ಸಮ್ಮೇಳನದ ಸವಿನೆನಪಿಗೊಂದು, ಎಂಬತ್ತೇಳರ ಸಮ್ಮೇಳನ ನೆನಪಿಸುವುದಕ್ಕೊಂದು ಭವನ ಈ ನೆಲದ ಹಿರಿಮೆಯನ್ನು ಸಾರುತ್ತವೆ. ಭವನ ಮೂಲೆಯಲ್ಲಿದ್ದರೆ ಮಕ್ಕಳ ಕನ್ನಡ ಕಲಿಕಾ ಕೇಂದ್ರವೋ ಅಥವಾ ಕನ್ನಡ ಚಟುವಟಿಕೆ ಕೇಂದ್ರವಾಗಿ ಮಾರ್ಪಡಿಸಲಿ.

-ಎಚ್.ಸಿ.ಮಂಜುನಾಥ್, ಅಧ್ಯಕ್ಷರು, ಕನ್ನಡಸೇನೆ

೧೯೯೪ರ ಸಮ್ಮೇಳನದ ಸವಿನೆನಪಿಗಾಗಿ ಕಟ್ಟಿರುವ ಭವನ ಅದು. ಮಾರಾಟ ಮಾಡುವುದು ಸರಿಯಲ್ಲ. ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಕಾಲದಲ್ಲಿ ಕಷ್ಟಪಟ್ಟು ಸಮ್ಮೇಳನ ನಡೆಸಿ ಅದರಿಂದ ಉಳಿಸಲಾದ ಹಣದಲ್ಲಿ ಕಟ್ಟಿದ ಭವನ. ಅದು ಜನರ ಆಸ್ತಿ. ಅದನ್ನು ಮಾರಾಟ ಮಾಡುವುದಕ್ಕೆ ನಾವೆಂದಿಗೂ ಅವಕಾಶ ನೀಡುವುದಿಲ್ಲ. ಹೊಸ ಭವನ ಕಟ್ಟಲಿ. ಅದಕ್ಕೆ ಬೆಂಬಲಿಸೋಣ. ಹಳೇ ಭವನ ಮಾರಾಟ ವಿಚಾರ ಇಲ್ಲಿಗೇ ಕೈಬಿಡಬೇಕು.

- ಸುನಂದಾ ಜಯರಾಂ, ರೈತನಾಯಕಿ

ಜಿ.ಮಾದೇಗೌಡ, ಪ್ರೊ.ಜಿ.ಟಿ.ವೀರಪ್ಪ ಅವರ ಶ್ರಮದಿಂದ ಸಮ್ಮೇಳನದ ಹಣ ಉಳಿಸಿ ಕಟ್ಟಿದ ಭವನ. ಅದನ್ನು ಮಾರಾಟ ಮಾಡುವುದೆಂದರೆ ತಮಾಷೆ ಮಾತೇ. ಇದು ಅರವತ್ತ ಮೂರನೇ ಸಮ್ಮೇಳನಕ್ಕೆ ಮಾಡುವ ದೊಡ್ಡ ಅವಮಾನ. ಹಳೇ ಭವನವನ್ನು ಉಳಿಸಿಕೊಂಡು ಹೊಸ ಭವನ ಕಟ್ಟುವುದಕ್ಕೆ ನಮ್ಮ ತಕರಾರಿಲ್ಲ. ಇದನ್ನು ಮಾರಾಟ ಮಾಡುವ ನಿರ್ಧಾರ ಮಾಡಿದರೆ ಒಗ್ಗೂಡಿ ಹೋರಾಟ ನಡೆಸಬೇಕಾಗುತ್ತದೆ.

-ಬೇಕ್ರಿ ರಮೇಶ್‌, ರಾಜ್ಯಾಧ್ಯಕ್ಷರು, ಕದಂಬ ಸೇನೆ