ಮಂಡ್ಯ ಜಿಲ್ಲಾ ಮಟ್ಟದ ಕನ್ನಡ ರಸಪ್ರಶ್ನೆ ಸ್ಪರ್ಧೆ: ವಿಜೇತರಿಗೆ ನಗದು ಬಹುಮಾನ

| Published : Nov 23 2025, 02:15 AM IST

ಮಂಡ್ಯ ಜಿಲ್ಲಾ ಮಟ್ಟದ ಕನ್ನಡ ರಸಪ್ರಶ್ನೆ ಸ್ಪರ್ಧೆ: ವಿಜೇತರಿಗೆ ನಗದು ಬಹುಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಮ್ಮ ಗ್ರಾಮ್ಯಭಾಷೆಯನ್ನು ಮಾತನಾಡಲು ಯಾವುದೇ ಹಿಂಜರಿಕೆ ಪಡಬಾರದು. ಅದು ನಮ್ಮ ಅಸ್ಮಿತೆ. ಕನ್ನಡದ ಭಾವುಟ ಹುಟ್ಟಿದ ಕಥೆ, ಭಾರತಕ್ಕೆ ಸ್ವಾತಂತ್ರ್ಯ ದೊರಕುವಲ್ಲಿ ಕನ್ನಡಿಗರಾದ ಮೈಸೂರು ಮಹಾರಾಜರ ಕೊಡುಗೆಗಳ ಬಗ್ಗೆ ಅರಿಯುವಂತೆ ಮಾಡಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು.

ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜು ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ಪಾಂಡವಪುರ ಸೇರಿದಂತೆ ಜಿಲ್ಲಾ ಮಟ್ಟದಲ್ಲಿ 50ಕ್ಕೂ ಹೆಚ್ಚು ಪದವಿ ಪೂರ್ವ ಕಾಲೇಜುಗಳಲ್ಲಿ 8 ಸಾವಿರ ವಿದ್ಯಾರ್ಥಿಗಳು ಮೊದಲ ಹಂತದ ಕನ್ನಡ ನಾಡು, ನುಡಿ, ಸಂಸ್ಕೃತಿ, ಇತಿಹಾಸವನ್ನು ಒಳಗೊಂಡ ಕನ್ನಡ ನುಡಿಹಬ್ಬ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿ ಕಾಲೇಜಿನಿಂದಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿ ವಿಜೇತರಾಗಿ ಆಯ್ಕೆಯಾದ 120 ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ಹಾಗೂ ಫಲಕ ವಿತರಿಸಲಾಯಿತು. ಎಲ್ಲ ವಿಜೇತರಿಗೂ ಅಂತಿಮ ಸುತ್ತಿನ ರಸಪ್ರಶ್ನೆಯನ್ನು ಎಸ್‌ಟಿಜಿ ಪದವಿ ಕಾಲೇಜಿನ ಆವರಣದಲ್ಲಿ ಆನ್‌ಲೈನ್ ಮೂಲಕ ನಡೆಸಲಾಯಿತು.

ಅದರಲ್ಲಿ ವಿಜೇತರಾದ ಸಿಂಚನ ಸರ್ಕಾರಿ ಪದವಿ ಪೂರ್ವ ಕಾಲೇಜು ಚಿನಕುರಳಿ ಪ್ರಥಮ 5 ಸಾವಿರ ರು., ನಗದು, ಬಸವರಾಜಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಬನ್ನಂಗಾಡಿ ದ್ವಿತೀಯ 3 ಸಾವಿರ ರು.ನಗದು ಹಾಗೂ ಅಮೃತ ಎಂ ವಿ ಕ್ರೈಸ್ತ ದಿ ಕಿಂಗ್ ಪದವಿ ಪೂರ್ವ ಕಾಲೇಜು ಕೆ ಆರ್ ಪೇಟೆ 3ನೇ ಸ್ಥಾನ 2 ಸಾವಿರ ರು.ಗೆ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ವಿತರಿಸಿದರು.

ಕನ್ನಡ ವಿಭಾಗವು ಐಕ್ಯುಎಸಿ ಸಹಯೋಗದೊಂದಿಗೆ ನಡೆಸಿದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿದ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಮ್ಮ ಗ್ರಾಮ್ಯಭಾಷೆಯನ್ನು ಮಾತನಾಡಲು ಯಾವುದೇ ಹಿಂಜರಿಕೆ ಪಡಬಾರದು. ಅದು ನಮ್ಮ ಅಸ್ಮಿತೆ. ಕನ್ನಡದ ಭಾವುಟ ಹುಟ್ಟಿದ ಕಥೆ, ಭಾರತಕ್ಕೆ ಸ್ವಾತಂತ್ರ್ಯ ದೊರಕುವಲ್ಲಿ ಕನ್ನಡಿಗರಾದ ಮೈಸೂರು ಮಹಾರಾಜರ ಕೊಡುಗೆಗಳ ಬಗ್ಗೆ ಅರಿಯುವಂತೆ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಪಿ.ಶಿವರಾಜು ಅವರ ಕಾರ್ಯವನ್ನು ಶ್ಲಾಘಿಸಿದರು.

ಕಾಲೇಜು ಸಹಾಯಕ ಪ್ರಾಧ್ಯಾಪಕ ಬಿ.ಎಸ್.ಕುಮಾರ, ಕನ್ನಡ ವಿಭಾಗದ ಮುಖ್ಯಸ್ಥ ವಿ.ಶ್ರೀಧರ ಉಪಸ್ಥಿತರಿದ್ದರು. ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.