ಮಂಡ್ಯ ಜಿಲ್ಲೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿ ತೆರವಾಗಲೇ ಬೇಕು. ಸಂಘ-ಸಂಸ್ಥೆಗಳು ಒತ್ತುವರಿ ಮಾಡಿಕೊಂಡಿರುವ ಜಾಗವನ್ನೂ ಜಿಲ್ಲಾಡಳಿತ ಸ್ವಾಧೀನಕ್ಕೆ ಪಡೆಯಬೇಕು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾಕೇರ್ ಸೆಂಟರ್ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕು. ಅಲ್ಲಿಯವರೆಗೆ ಅಮರಣಾಂತ ಉಪವಾಸ ಕೈಬಿಡುವುದಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿ ತೆರವಾಗಲೇ ಬೇಕು. ಸಂಘ-ಸಂಸ್ಥೆಗಳು ಒತ್ತುವರಿ ಮಾಡಿಕೊಂಡಿರುವ ಜಾಗವನ್ನೂ ಜಿಲ್ಲಾಡಳಿತ ಸ್ವಾಧೀನಕ್ಕೆ ಪಡೆಯಬೇಕು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾಕೇರ್ ಸೆಂಟರ್ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕು. ಅಲ್ಲಿಯವರೆಗೆ ಆಮರಣಾಂತ ಉಪವಾಸ ಕೈಬಿಡುವುದಿಲ್ಲ ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಸ್ಪಷ್ಟ ನಿಲುವು ಪ್ರಕಟಿಸಿದರು.

ತಮಿಳು ಕಾಲೋನಿ ತೆರವಿಗೆ ಆಗ್ರಹಿಸಿ ಸೋಮವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ ಅವರು, ತಾವು ಜಿಲ್ಲಾಡಳಿತದ ಮುಂದಿಟ್ಟಿರುವ ಆರು ಬೇಡಿಕೆಗಳು ಈಡೇರುವವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ. ನನ್ನ ಪ್ರಾಣಕ್ಕೇ ಆಪತ್ತು ಬಂದರೂ ಉಪವಾಸ ನಿಲ್ಲಿಸುವುದಿಲ್ಲ ಎಂದು ಜಿಲ್ಲಾಡಳಿತಕ್ಕೆ ನೇರವಾಗಿ ಹೇಳಿದರು.

ನ್ಯಾಯಾಲಯದಲ್ಲಿರುವ ಒಂದು ಸಣ್ಣ ತಡೆಯಾಜ್ಞೆಯನ್ನು ಹದಿನೈದು ವರ್ಷಗಳಿಂದ ತೆರವುಗೊಳಿಸದಿದ್ದ ಮೇಲೆ ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದಾರೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಟ್ರಾಮಾಕೇರ್ ಸೆಂಟರ್ ಸ್ಥಾಪನೆಗೆ ಹಣವಿದ್ದರೂ ಜಾಗದ ಕೊರತೆಯಿಂದ ಸ್ಥಾಪಿಸಲಾಗುತ್ತಿಲ್ಲ. ಒತ್ತುವರಿ ಜಾಗವನ್ನೂ ಅಧಿಕಾರಿಗಳು ತೆರವುಗೊಳಿಸುತ್ತಿಲ್ಲ. ೩೬ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಮನೆಗಳಿಗೂ ತಮಿಳು ಕಾಲೋನಿ ನಿವಾಸಿಗಳು ಹೋಗುತ್ತಿಲ್ಲ. ಪ್ರಭಾವಿಗಳಿರುವ ಜಾಗವನ್ನೂ ಅಧಿಕಾರಿಗಳು ಸ್ವಾಧೀನಕ್ಕೆ ಪಡೆಯದಿದ್ದ ಮೇಲೆ ಆಡಳಿತ ಯಂತ್ರ ಸಂಪೂರ್ಣ ಕುಸಿದಿರುವುದಕ್ಕೆ ಇದಕ್ಕಿಂತಲೂ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದರು.

ಹೃದಯಾಘಾತಗಳು, ಅಪಘಾತಗಳು ದಿನೇದಿನೇ ಹೆಚ್ಚುತ್ತಲೇ ಇವೆ. ಆ ಸಮಯದಲ್ಲಿ ತುರ್ತು ಚಿಕಿತ್ಸೆ ಸಿಗದೆ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಆ ಬಗ್ಗೆ ಕನಿಷ್ಠ ಪ್ರಜ್ಞೆ ಇಲ್ಲ. ೨೦ ಲಕ್ಷ ಜನರ ಆರೋಗ್ಯಕ್ಕಿಂತ ಒಂದು ಸಾವಿರ ಜನರ ಓಟಿನ ರಾಜಕಾರಣವೇ ಮೇಲುಗೈ ಸಾಧಿಸುತ್ತಿದೆ ಎಂದು ಕಿಡಿಕಾರಿದರು.

ತಮಿಳು ಕಾಲೋನಿ ನಿವಾಸಿಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ಮಾಡಿ ಹತ್ತು ವರ್ಷಗಳಾಗಿದೆ. ನಿವಾಸಿಗಳಿಗೆ ನ್ಯಾಯಾಲಯದ ನಿರ್ದೇಶನದಂತೆ ಪುನರ್ವಸತಿಯನ್ನೂ ಕಲ್ಪಿಸಲಾಗಿದೆ. ಇಲ್ಲಿ ರಾಜಕೀಯ, ಒತ್ತುವರಿದಾರರ ಪ್ರಭಾವ ಹೆಚ್ಚು ಕೆಲಸ ಮಾಡುತ್ತಿದೆ. ಅದಕ್ಕಾಗಿ ಕಾನೂನು, ಆಡಳಿತಾತ್ಮಕ ಸಮಸ್ಯೆಯನ್ನು ಮುಂದಿಟ್ಟು ಜನರನ್ನು ಬಲಿಕೊಡಲಾಗುತ್ತಿದೆ ಎಂದು ಕಿಡಿಕಾರಿದರು.

ಮಿಮ್ಸ್ ಆಸ್ಪತ್ರೆ, ಸರ್ಕಾರಿ ಪ್ರೌಢಶಾಲೆಗೆ ಭೂ ಸ್ವಾಧೀನವಾಗಿರುವ ೭೮ ಎಕರೆ ೧೫ ಗುಂಟೆ ಜಮೀನನ್ನು ತೆರವುಗೊಳಿಸಬೇಕು. ನ್ಯಾಯಾಲಯದಲ್ಲಿ ವಾದ ಮಂಡಿಸಲ ಸಮರ್ಥ ಅನುಭವಿ ವಕೀಲರನ್ನು ನೇಮಿಸುವುದು. ಅಡ್ವೋಕೇಟ್ ಜನರಲ್ ಜೊತೆ ತಕ್ಷಣವೇ ಸಭೆ ನಡೆಸಿ ತಡೆಯಾಜ್ಞೆ ತೆರವಿಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ತಮಿಳು ಕಾಲೋನಿಯ ೨೦೦ಕ್ಕೂ ಹೆಚ್ಚು ಮನೆಗಳಿಗೆ ಕಲ್ಪಿಸಿರುವ ಅನಧಿಕೃತ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಒತ್ತಾಯಿಸಿದರು.

ಉಪವಾಸ ಸತ್ಯಾಗ್ರಹ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾ ರೈತಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಅಣ್ಣಯ್ಯ, ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ, ಎಚ್.ಡಿ.ಜಯರಾಂ, ಆಟೋ ಚಾಲಕರ ಸಂಘದ ಕೃಷ್ಣ, ಹಲಗೂರು ಗ್ರಾಪಂ ಸದಸ್ಯ ಸುರೇಂದ್ರ, ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸಾತನೂರು ವೇಣುಗೋಪಾಲ್, ಮಧುಸೂಧನ್, ಆನಂದ್‌ಕುಮಾರ್, ಕಿರಣ್‌ಕುಮಾರ್ ಇತರರಿದ್ದರು.ಜಿಲ್ಲಾಧಿಕಾರಿ ಮನವೊಲಿಕೆಗೆ ಬಗ್ಗಲಿಲ್ಲ

ಆಮರಣಾಂತ ಉಪವಾಸ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಉಪವಾಸ ನಿರತ ಕೆ.ಆರ್. ರವೀಂದ್ರರವರ ಮನವೊಲಿಕೆಗೆ ಮುಂದಾದರು. ತಮಿಳು ಕಾಲೋನಿ ಹಾಗೂ ಸಂಘ-ಸಂಸ್ಥೆಗಳ ಕಟ್ಟಡ ತೆರವಿಗೆ ಆಡಳಿತಾತ್ಮಕ- ಕಾನೂನಾತ್ಮಕ ಸಮಸ್ಯೆಗಳಿವೆ. ಹಂತ ಹಂತವಾಗಿ ಎಲ್ಲವನ್ನೂ ತೆರವುಗೊಳಿಸಲಾಗುವುದು. ಅದಕ್ಕೆಲ್ಲಾ ಸಮಯಾವಕಾಶ ಬೇಕಿದೆ. ಒಮ್ಮೆಲೆ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದಿಲ್ಲ. ನಾವೂ ಸಹ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದೇವೆ. ನಮ್ಮೊಂದಿಗೆ ಸಹಕರಿಸಿ. ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಉಪವಾಸ ಕೈಬಿಡುವಂತೆ ಕೋರಿದರು. ಆಸ್ಪತ್ರೆ ಜಾಗ ಒತ್ತುವರಿ ತೆರವಿನ ಬಗ್ಗೆ ನಿಮ್ಮ ಮಾತಿನಲ್ಲಿ ನಂಬಿಕೆ ಬರುತ್ತಿಲ್ಲ. ತಮಿಳು ಕಾಲೋನಿ ಜಾಗ ಮೊದಲು ತೆರವುಗೊಳಿಸುವ ಪ್ರಕ್ರಿಯೆ ನಡೆಸುತ್ತಿಲ್ಲ. ಯಾವುದೇ ಕಾನೂನಾತ್ಮಕ ಸಮಸ್ಯೆಗಳಿಲ್ಲದ ಒತ್ತುವರಿ ಜಾಗವನ್ನೂ ಸ್ವಾಧೀನಪಡಿಸಿಕೊಳ್ಳುವುದಕ್ಕೂ ನೀವು ಮುಂದಾಗುತ್ತಿಲ್ಲ. ಹಾಗಾಗಿ ಉಪವಾಸ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪುಟ್ಟಣ್ಣಯ್ಯನವರು ಸಾಯುತ್ತಿರಲಿಲ್ಲ

ಪುಟ್ಟಣ್ಣಯ್ಯನವರಿಗೆ ಹೃದಯಾಘಾತವಾದ ವೇಳೆ ತಕ್ಷಣವೇ ಚಿಕಿತ್ಸೆ ದೊರಕಿದ್ದರೆ ನಮ್ಮ ನಾಯಕರು ಸಾಯುತ್ತಿರಲಿಲ್ಲ. ತುರ್ತು ಚಿಕಿತ್ಸೆಗೆ ಬೆಂಗಳೂರು, ಮೈಸೂರಿಗೆ ಹೋಗಬೇಕಿರುವುದರಿಂದಲೇ ಹೆಚ್ಚಿನ ಸಾವುಗಳಾಗುತ್ತಿವೆ. ತಮಿಳು ಕಾಲೋನಿ ನಿವಾಸಿಗಳನ್ನು ಬೀದಿಪಾಲು ಮಾಡುತ್ತಿಲ್ಲ. ಅವರಿಗೆ ಪುನರ್ವಸತಿ ಕಲ್ಪಿಸಿದೆ. ಅಲ್ಲಿಗೆ ಹೋಗಲಿ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಆಸ್ಪತ್ರೆಗೆ ಹಣವಿದ್ದರೂ ನಿರ್ಮಿಸಲಾಗುತ್ತಿಲ್ಲ. ಈ ಉಪವಾಸದ ಹಿಂದೆ ಲಕ್ಷಾಂತರ ಜನರ ಹಿತಾಸಕ್ತಿ ಇದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

- ಎ.ಎಲ್.ಕೆಂಪೂಗೌಡ, ಜಿಲ್ಲಾಧ್ಯಕ್ಷರು, ರೈತಸಂಘ

ಜನರಿಗೆ ಹೆಚ್ಚಿನ ಅನುಕೂಲ

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾಕೇರ್ ಆಸ್ಪತ್ರೆಯಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ಜಿಲ್ಲಾಡಳಿತ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದೆ. ನ್ಯಾಯಾಲಯದಲ್ಲಿ ಅಗತ್ಯ ದಾಖಲೆಗಳೊಂದಿಗೆ ಸಮರ್ಥ ವಾದ ಮಂಡಿಸಿದರೆ ತಡೆಯಾಜ್ಞೆ ತೆರವಾಗಲಿದೆ. ವಕೀಲರ ವೈಫಲ್ಯ ಇಲ್ಲಿ ಎದ್ದು ಕಾಣುತ್ತಿದೆ. ಜಿಲ್ಲಾಸ್ಪತ್ರೆಗೆ ಈಗಿರುವ ಜಾಗ ಸಾಲುತ್ತಿಲ್ಲ. ಜನರಿಗೆ ಅತ್ಯುತ್ತಮ ಚಿಕಿತ್ಸೆ ಸಿಗಬೇಕಾದರೆ ಒತ್ತುವರಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲೇಬೇಕು. ಹತ್ತು ವರ್ಷಗಳಿಂದ ತಡೆಯಾಜ್ಞೆ ತೆರವುಗೊಳಿಸಲಾಗುತ್ತಿಲ್ಲವೆಂದರೆ ಇದು ಜನಪ್ರತಿನಿಧಿಗಳು, ಅಧಿಕಾರಿಗಳ ವೈಫಲ್ಯವಲ್ಲದೆ ಮತ್ತೇನು?

- ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕರು, ವಿಧಾನಪರಿಷತ್ತು