ಜಿಟಿ ಜಿಟಿ ಮಳೆಗೆ ಮಂಡ್ಯ ಫುಲ್‌ ಕೂಲ್‌ ಕೂಲ್‌..!

| Published : Jul 20 2024, 01:02 AM IST

ಸಾರಾಂಶ

ಮೋಡ ಕವಿದ ವಾತಾವರಣ, ತುಂತುರು ಹನಿಗಳ ಸಿಂಚನ, ಆಗಾಗ ಸುರಿಯುವ ಜಿಟಿ ಜಿಟಿ ಮಳೆಯಿಂದ ಸಕ್ಕರೆ ಸೀಮೆ ಮಲೆನಾಡಾಗಿ ಪರಿವರ್ತನೆಗೊಂಡಿದೆ. ಎಲ್ಲೆಡೆ ತಂಪಾದ ವಾತಾವರಣ ನೆಲೆಸಿದ್ದು, ಇಡೀ ಮಂಡ್ಯ ಕೂಲ್‌ ಕೂಲ್‌ ಆಗಿದೆ. ಕಳೆದ ವರ್ಷ ಬರದಿಂದ ನಲುಗಿಹೋಗಿದ್ದ ಮಂಡ್ಯ ಜಿಲ್ಲೆ ಜನರಿಗೆ ಈ ವರ್ಷದ ವರುಣಾಗಮನ ಹಿತಕರವಾದ ಅನುಭವ ನೀಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೋಡ ಕವಿದ ವಾತಾವರಣ, ತುಂತುರು ಹನಿಗಳ ಸಿಂಚನ, ಆಗಾಗ ಸುರಿಯುವ ಜಿಟಿ ಜಿಟಿ ಮಳೆಯಿಂದ ಸಕ್ಕರೆ ಸೀಮೆ ಮಲೆನಾಡಾಗಿ ಪರಿವರ್ತನೆಗೊಂಡಿದೆ. ಎಲ್ಲೆಡೆ ತಂಪಾದ ವಾತಾವರಣ ನೆಲೆಸಿದ್ದು, ಇಡೀ ಮಂಡ್ಯ ಕೂಲ್‌ ಕೂಲ್‌ ಆಗಿದೆ.

ಕಳೆದ ವರ್ಷ ಬರದಿಂದ ನಲುಗಿಹೋಗಿದ್ದ ಮಂಡ್ಯ ಜಿಲ್ಲೆ ಜನರಿಗೆ ಈ ವರ್ಷದ ವರುಣಾಗಮನ ಹಿತಕರವಾದ ಅನುಭವ ನೀಡಿದೆ. ಮಳೆಯ ನಡುವೆಯೇ ಜನರ ಜೀವನ ಸಾಗಿದೆ.

ವಿದ್ಯಾರ್ಥಿಗಳು ಛತ್ರಿಗಳನ್ನು ಹಿಡಿದು ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದಾರೆ. ವ್ಯಾಪಾರ-ವಹಿವಾಟು ಜಿಟಿ ಮಳೆಯ ನಡುವೆಯೇ ಮುಂದುವರೆದಿದೆ. ತುಂತುರು ಹನಿಗಳ ನಡುವೆಯೇ ಜನರ ವಾಯುವಿಹಾರವೂ ಮುನ್ನಡೆದಿದೆ. ರಸ್ತೆಗಳು ಕೆಸರುಗದ್ದೆಯ ಸ್ವರೂಪ ಪಡೆದುಕೊಂಡು ಮಲೆನಾಡಿನ ರಸ್ತೆಗಳನ್ನು ನೆನಪಿಸುತ್ತಿವೆ.

ದಿನವಿಡೀ ಮೋಡಗಳ ಮರೆಯಲ್ಲೇ ಸಾಗಿಹೋಗುತ್ತಿರುವ ಸೂರ್ಯ ಕಳೆದೆರಡು ದಿನಗಳಿಂದ ಒಮ್ಮೆಯೂ ಇಣುಕಿ ನೋಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಕೆಲ ಸಮಯದಲ್ಲೇ ಸೂರ್ಯನ ಕಿರಣಗಳು ಭೂಮಿ ಸ್ಪರ್ಶಿಸಬಹುದೆಂಬ ದೃಶ್ಯ ಕಂಡುಬಂದರೂ ಅದರ ಹಿಂದೆಯೇ ಮೋಡಗಳು ಆವರಿಸಿಕೊಳ್ಳುತ್ತಿವೆ. ಕೆಲಸ ಸಮಯದಲ್ಲೇ ಮಳೆಯೂ ಆರಂಭಗೊಳ್ಳುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ.

ಆಷಾಢಮಾಸದ ತಣ್ಣನೆಯ ಗಾಳಿ ಜನರಿಗೆ ಚಳಿಯ ಅನುಭವವಾಗುತ್ತಿದೆ. ಚಳಿಯ ನಡುವೆ ಬಿಸಿಯಾದ ತಿಂಡಿ-ತಿನಿಸುಗಳಿಗೆ ಜನರು ಆಕರ್ಷಿತರಾಗುತ್ತಿದ್ದಾರೆ. ಆಗಾಗ ಕಾಫೀ-ಟೀ ಹೀರುತ್ತಾ ದೇಹವನ್ನು ಬೆಚ್ಚಗೆ ಮಾಡಿಕೊಳ್ಳುತ್ತಿದ್ದಾರೆ. ಆಷಾಢ ಶುಕ್ರವಾರದ ದೇವರ ಪೂಜೆಗೂ ಜನರು ಮಳೆಯ ನಡುವೆಯೇ ದೇವಸ್ಥಾನಗಳಿಗೆ ಹೋಗುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಮಳೆ ನಡುವೆಯೂ ದೇಗುಲಗಳಲ್ಲಿ ಜನದಟ್ಟಣೆ ಹೆಚ್ಚಿದೆ.

ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಡೆ ಹಸಿರು ನೆಲೆಸಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಬಿತ್ತನೆಯ ಕಾಲವಾಗಿರುವುದರಿಂದ ಭೂಮಿಯನ್ನು ಹದಗೊಳಿಸಿಕೊಂಡಿರುವ ಅನ್ನದಾತರು ಭತ್ತದ ಒಟ್ಲುಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಒಂದೇ ರೀತಿಯ ವಾತಾವರಣ ನೆಲೆಸಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವರುಣನ ಅಬ್ಬರದಿಂದ ನದಿಗಳು ಉಕ್ಕಿ ಹರಿಯುತ್ತಿವೆ. ಕೆಆರ್‌ಎಸ್‌ ಜಲಾಶಯ ಭರ್ತಿಯ ಹಂತ ತಲುಪಿದೆ. ಜಲಪಾತಗಳಲ್ಲಿ ನೀರು ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದ್ದರೆ, ನದಿಗಳೆಲ್ಲವೂ ಮೈದುಂಬಿ ಹರಿಯುತ್ತಿರುವುದರಿಂದ ಪ್ರವಾಸಿ ತಾಣಗಳಲ್ಲಿ ಜಲವೈಭವ ಕಂಡುಬರುತ್ತಿದೆ.