ಮಂಡ್ಯ: ಹೈಟೆಕ್ ಶೌಚಾಲಯ ದಿಢೀರ್ ಓಪನ್..!

| Published : May 17 2025, 01:55 AM IST

ಸಾರಾಂಶ

ಒಂದು ವರ್ಷದ ಹಿಂದೆ ನಿರ್ಮಾಣಗೊಂಡಿದ್ದ ಸಾರ್ವಜನಿಕ ಶೌಚಾಲಯ ಸುಣ್ಣ- ಬಣ್ಣ ಕಾಣದೆ ಬೀಗ ಹಾಕಿದ ಸ್ಥಿತಿಯಲ್ಲಿತ್ತು. ಇದೇ ವೇಳೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ವೇಳೆ ಈ ಶೌಚಾಲಯಕ್ಕೂ ಸುಣ್ಣ-ಬಣ್ಣ ಬಳಿಯಲಾಯಿತು. ಸಮ್ಮೇಳನದ ವೇಳೆಗೂ ಶೌಚಾಲಯ ಸಾರ್ವಜನಿಕರಿಗೆ ಮುಕ್ತವಾಗಲೇ ಇಲ್ಲ. ಅದಕ್ಕೆ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳೂ ಸಮರ್ಪಕ ಉತ್ತರ ನೀಡಲಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಪ್ರವಾಸಿಮಂದಿರದ ಪಕ್ಕ ನಿರ್ಮಾಣಗೊಂಡಿರುವ ಹೈ-ಟೆಕ್ ಶೌಚಾಲಯವನ್ನು ಶುಕ್ರವಾರ ದಿಢೀರನೆ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ.

ನಗರಸಭೆ ವತಿಯಿಂದ ನಿರ್ಮಾಣಗೊಂಡಿರುವ ಶೌಚಾಲಯವನ್ನು ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳಿಲ್ಲದೆ ಬೀಗವನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಬಳಕೆಗೆ ನೀಡಲಾಗಿದೆ. ಸುಮಾರು 8 ರಿಂದ 10 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಈ ಶೌಚಾಲಯದಲ್ಲಿ ಪುರುಷ- ಮಹಿಳೆಯರಿಗೆ ಪ್ರತ್ಯೇಕ ವಿಭಾಗವಿದೆ. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ತಲಾ ಐದು ಶೌಚ ಗೃಹಗಳಿವೆ. ಮೂತ್ರ ವಿಸರ್ಜನೆಗೆ ಪ್ರತ್ಯೇಕ ವ್ಯವಸ್ಥೆ, ಒಂದು ಸ್ನಾನಗೃಹವನ್ನೂ ನಿರ್ಮಿಸಲಾಗಿದೆ. ಎಕ್ಸಾಸ್ಟ್ ಫ್ಯಾನ್ ಅಳವಡಿಸಲಾಗಿದೆ.

ಒಂದು ವರ್ಷದ ಹಿಂದೆ ನಿರ್ಮಾಣಗೊಂಡಿದ್ದ ಸಾರ್ವಜನಿಕ ಶೌಚಾಲಯ ಸುಣ್ಣ- ಬಣ್ಣ ಕಾಣದೆ ಬೀಗ ಹಾಕಿದ ಸ್ಥಿತಿಯಲ್ಲಿತ್ತು. ಇದೇ ವೇಳೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ವೇಳೆ ಈ ಶೌಚಾಲಯಕ್ಕೂ ಸುಣ್ಣ-ಬಣ್ಣ ಬಳಿಯಲಾಯಿತು. ಸಮ್ಮೇಳನದ ವೇಳೆಗೂ ಶೌಚಾಲಯ ಸಾರ್ವಜನಿಕರಿಗೆ ಮುಕ್ತವಾಗಲೇ ಇಲ್ಲ. ಅದಕ್ಕೆ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳೂ ಸಮರ್ಪಕ ಉತ್ತರ ನೀಡಲಿಲ್ಲ.

ಸಾರ್ವಜನಿಕ ಬಳಕೆಗೆ ಸಿಗದೆ ಬೀಗ ಜಡಿದ ಸ್ಥಿತಿಯಲ್ಲೇ ಇದ್ದ ಶೌಚಾಲಯಕ್ಕೆ ಈಗ ಬಂಧನದಿಂದ ಏಕಾಏಕಿ ಮುಕ್ತಿ ದೊರಕಿಸಲಾಗಿದೆ. ಈ ಹೈ- ಟೆಕ್ ಶೌಚಾಲಯದ ಒಳಗೆ ಅಳವಡಿಸಿರುವ ಬಾಗಿಲುಗಳು ಗುಣಮಟ್ಟದಿಂದ ಕೂಡಿಲ್ಲದಿರುವುದು. ಮಹಿಳೆಯರ ವಿಭಾಗದ ಶೌಚಾಲಯದ ಗೋಡೆಗಳು ಇನ್ನೂ ಎತ್ತರದಲ್ಲಿ ನಿರ್ಮಾಣಗೊಳ್ಳಬೇಕಿತ್ತು ಎಂಬ ದೂರುಗಳು ಆರಂಭದ ದಿನವೇ ಸಾರ್ವಜನಿಕರಿಂದ ಕೇಳಿಬಂದವು.

ಶೌಚಾಲಯಕ್ಕೆ ಬೀದಿ ದೀಪದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಹಾಲಿ ಹಗಲು ವೇಳೆ ವಿದ್ಯುತ್ ಸಂಪರ್ಕ ವ್ಯವಸ್ಥೆ ಇರುವುದಿಲ್ಲ. ಸಂಜೆ ೬ ರಿಂದ ಬೆಳಗ್ಗೆ ೬ರವರೆಗೆ ವಿದ್ಯುತ್ ವ್ಯವಸ್ಥೆ ಇರಲಿದೆ. ಶೌಚಾಲಯಕ್ಕೆ ಇನ್ನೂ ದರ ನಿಗದಿಪಡಿಸಿಲ್ಲ. ಮೂತ್ರವಿಸರ್ಜನೆಗೆ ೫ ರು., ಶೌಚಕ್ಕೆ ೧೦ ರು. ವಿಧಿಸಬಹುದೆಂದು ಹೇಳಲಾಗುತ್ತಿದೆ. ಮೈಸೂರಿನ ಮಣಿ ಎಂಬುವರು ಶೌಚಾಲಯದ ಗುತ್ತಿಗೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.