ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಅವೈಜ್ಞಾನಿಕ ಆಸ್ತಿ ತೆರಿಗೆಯನ್ನು ರದ್ದುಗೊಳಿಸುವಂತೆ ನಗರಸಭಾ ಸದಸ್ಯರು ಒತ್ತಾಯಿಸಿದರಲ್ಲದೇ, ಕುಡಿಯುವ ನೀರಿನ ದರ ಕಡಿತಕ್ಕೆ ತೋರಿದ ಆಸಕ್ತಿಯನ್ನೇ ಆಸ್ತಿ ತೆರಿಗೆ ವಿಚಾರಕ್ಕೂ ತೋರಿಸುವಂತೆ ನಗರಸಭಾ ಸದಸ್ಯರು ಶಾಸಕ ಪಿ.ರವಿಕುಮಾರ್ ಅವರಲ್ಲಿ ಮನವಿ ಮಾಡಿದರು.
ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಗುರುವಾರ ನಡೆದ ನಗರಸಭೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯರಾದ ಭಾರತೀಶ್, ಎಂ.ಪಿ.ಅರುಣ್‌ಕುಮಾರ್ ಮಾತನಾಡಿ, ನಿಯಮಾನುಸಾರ ಕಟ್ಟಡದ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆದು ಕಟ್ಟಡ ನಿರ್ಮಿಸಿರುತ್ತಾರೆ. ಆ ನಂತರದಲ್ಲಿ ಹೆಚ್ಚುವರಿಯಾಗಿ ಒಂದು ಚದರಡಿ ಕಟ್ಟಿಕೊಂಡರೂ ಇಡೀ ಕಟ್ಟಡವನ್ನೇ ಅನಧಿಕೃತ ಎಂದು ಘೋಷಿಸುವುದು ಅವೈಜ್ಞಾನಿಕ ಎಂದು ದೂರಿದರು.ಕಟ್ಟಡ ವಿನ್ಯಾಸ ನಕ್ಷೆಯಲ್ಲಿರುವುದಕ್ಕಿಂತ ಹೆಚ್ಚುವರಿಯಾಗಿ ಕಟ್ಟಿರುವ ಚದರಡಿಗಳಿಗೆ ಸೀಮಿತವಾಗಿ ತೆರಿಗೆ ವಿಧಿಸುವಂತೆ, ಪ್ರಸ್ತುತ ಇರುವ ಅವೈಜ್ಞಾನಿಕ ತೆರಿಗೆ ಪದ್ಧತಿ ರದ್ದುಪಡಿಸುವಂತೆ ಸರ್ಕಾರದ ಗಮನಸೆಳೆಯಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಶಾಸಕ ಪಿ.ರವಿಕುಮಾರ್ ಉತ್ತರಿಸಿ, ಕಟ್ಟಡಗಳಿಗೆ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತಿದೆ ಎನ್ನುವುದು ಜನರ ಆಕ್ರೋಶವಾಗಿದೆ. ಇಡೀ ರಾಜ್ಯದಲ್ಲೇ ಈ ಮಾದರಿಯ ತೆರಿಗೆ ಪದ್ಧತಿ ಇದೆ. ಈ ವಿಷಯವಾಗಿಯೂ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಹೊನ್ನಯ್ಯ ಬಡಾವಣೆಯನ್ನು ನಗರಸಭೆಗೆ ಹಸ್ತಾಂತರಕ್ಕೆ ಕೆಲವು ತೊಂದರೆಗಳಿವೆ. ಬಡಾವಣೆಯ ಒಳಚರಂಡಿ ನಿರ್ಮಾಣಕ್ಕೆ ೩೫ ರಿಂದ ೪೦ ಲಕ್ಷ ರು. ಖರ್ಚಾಗಲಿದೆ. ಇಷ್ಟು ಅನುದಾನ ಕೊಳಚೆ ನಿರ್ಮೂಲನಾ ಮಂಡಳಿಯವರ ಬಳಿ ಇಲ್ಲ. ಅನುದಾನ ಕೊರತೆ ಇರುವುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿ ಪೂರ್ಣಗೊಂಡ ಕೂಡಲೇ ಹಸ್ತಾಂತರ ಪ್ರಕ್ರಿಯೆ ನಡೆಸಲಾಗುವುದು ಎಂದರು.
ಈಗಲೇ ಹಸ್ತಾಂತರಿಸಿಕೊಂಡರೆ ಕೊಳಚೆ ನಿರ್ಮೂಲನಾ ಮಂಡಳಿಯವರು ಕಾಮಗಾರಿ ನಿರ್ವಹಿಸದೇ ಹೋಗಬಹುದು.ಆಗ ಕಾಮಗಾರಿಯನ್ನು ನಗರಸಭೆಯವರೇ ನಿರ್ವಹಿಸಬೇಕಾಗುತ್ತದೆ. ನಾವೂ ಕೂಡ ಅದರ ಬಗ್ಗೆ ಹೆಚ್ಚು ಗಮನಹರಿಸಲಾಗುವುದಿಲ್ಲ. ಮಂಡಳಿಯವರು ಈಗಾಗಲೇ ಅಂದಾಜುವೆಚ್ಚ ತಯಾರಿಸಿ ಸರ್ಕಾರಕ್ಕೆ ಕಳುಹಿಸಿದ್ದಾರೆ. ಅಲ್ಲಿಂದ ಹಣ ಬಿಡುಗಡೆಯಾದ ಬಳಿಕ ಬಾಕಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ನಗರಸಭೆಗೆ ಹಸ್ತಾಂತರ ಮಾಡಿಕೊಳ್ಳಲಾಗುವುದು ಎಂದರು.