ಸಾರಾಂಶ
ಸಕ್ಕರೆ ನಗರಿಯಲ್ಲಿ ಮೂವತ್ತು ವರ್ಷದ ಬಳಿಕ ನಡೆದ ಸಾಹಿತ್ಯ ಜಾತ್ರೆ ಊಟದ ವಿಚಾರದಲ್ಲಿ ದಾಖಲೆ ಬರೆದಿದೆ. ಸಾಹಿತ್ಯ ಸಮ್ಮೇಳನದ ಮೂರು ದಿನ 4.69 ಲಕ್ಷಕ್ಕೂ ಹೆಚ್ಚು ಮಂದಿ ಭೋಜನ ಸವಿದಿದ್ದಾರೆ.
ಮಂಡ್ಯ ಮಂಜುನಾಥ
ಮಂಡ್ಯ : ಸಕ್ಕರೆ ನಗರಿಯಲ್ಲಿ ಮೂವತ್ತು ವರ್ಷದ ಬಳಿಕ ನಡೆದ ಸಾಹಿತ್ಯ ಜಾತ್ರೆ ಊಟದ ವಿಚಾರದಲ್ಲಿ ದಾಖಲೆ ಬರೆದಿದೆ. ಸಾಹಿತ್ಯ ಸಮ್ಮೇಳನದ ಮೂರು ದಿನ 4.69 ಲಕ್ಷಕ್ಕೂ ಹೆಚ್ಚು ಮಂದಿ ಭೋಜನ ಸವಿದಿದ್ದಾರೆ.
ಈ ಬಾರಿ ಸಾಹಿತ್ಯ ಸಮ್ಮೇಳನದ ಊಟದ ಹೊಣೆಗಾರಿಯನ್ನು ಎಂಸಿಎ ಅಂಗಸಂಸ್ಥೆ ಪ್ಯಾನಲ್ ಎಂಪ್ಯಾನ್‌ಮೆಂಟ್‌ನಡಿ ನೋಂದಣಿಯಾದ ಸಂಸ್ಥೆ ಹಾಗೂ ಮಂಡ್ಯದ ಅಪೂರ್ವ ವೆಜ್ ಅವರಿಗೆ ನೀಡಲಾಗಿತ್ತು. ಮೂರು ದಿನಗಳಿಂದ ಗಣ್ಯ, ಅತಿಗಣ್ಯ, ನೋಂದಾಯಿತ ಪ್ರತಿನಿಧಿಗಳು ಸೇರಿ 4.60 ಲಕ್ಷಕ್ಕೂ ಹೆಚ್ಚು ಮಂದಿ ಊಟ ಮಾಡಿದ್ದಾರೆ. ಮೊದಲ ದಿನ 1.90 ಲಕ್ಷ, ಎರಡನೇ ದಿನ 1.70 ಲಕ್ಷ ಹಾಗೂ ಮೂರನೇ ದಿನ 2 ಲಕ್ಷ ಮಂದಿ ಸಮ್ಮೇಳನದ ಊಟ ಸವಿದಿದ್ದಾರೆ. ಊಟಕ್ಕೆ ಬಳಕೆಯಾದ ಅಡಕೆ ತಟ್ಟೆಗಳು, ಬಾಳೆಎಲೆಯ ಲೆಕ್ಕದ ಆಧಾರದ ಮೇಲೆ ಈ ಲೆಕ್ಕಾಚಾರ ಹಾಕಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಊಟಕ್ಕೆಂದೇ ಸುಮಾರು 4 ಕೋಟಿ ರು. ವೆಚ್ಚಮಾಡಲಾಗಿದೆ ಎಂದು ಹೇಳಲಾಗಿದೆ.
ಊಟಕ್ಕೆ 26 ಕೆ.ಜಿ.ಯ 2500 ಚೀಲ(625 ಕ್ವಿಂಟಲ್) ಅಕ್ಕಿ, ಬೆಲ್ಲ-53 ಟನ್, ಅಡುಗೆ ಎಣ್ಣೆ 15 ಸಾವಿರ ಲೀಟರ್, ರಾಗಿ 50 ಕ್ವಿಂಟಲ್, ಸಕ್ಕರೆ 75 ಟನ್, ತರಕಾರಿ-500 ಕ್ವಿಂಟಲ್, ತುಪ್ಪ-83 ಟನ್, ಟಮೆಟೋ-1200 ಕ್ರೇಟ್ (1 ಕ್ರೇಟ್‌ನಲ್ಲಿ 25 ಕೆಜಿ) ಬಳಸಿರುವುದಾಗಿ ಅಪೂರ್ವ ವೆಜ್‌ನ ಅನಿಲ್ ಮಾಹಿತಿ ನೀಡಿದರು.
10 ಮಾದರಿಯ ಸಿಹಿತಿನಿಸು: ಸಮ್ಮೇಳನದಲ್ಲಿ ಹತ್ತು ಮಾದರಿಯ ಸಿಹಿ ತಿನಿಸುಗಳನ್ನು ತಯಾರಿಸಲಾಗಿತ್ತು. 1.76 ಲಕ್ಷ ಹೋಳಿಗೆ, 1.60 ಲಕ್ಷ ಬಾದ್‌ಷಾ, 1.50 ಲಕ್ಷ ಮೈಸೂರು ಪಾಕ್, 1.80 ಲಕ್ಷ ಡ್ರೈ ಜಾಮೂನು, 1.20 ಲಕ್ಷ ಕೊಬ್ಬರಿ ಮಿಠಾಯಿ, 1.46 ಲಕ್ಷ ಲಾಡು, 1.30 ಲಕ್ಷ ಹಾರ್ಲಿಕ್ಸ್ ಬರ್ಫಿ, 60 ಸಾವಿರ ನಾಮದಲಗೆ, 26 ಕ್ವಿಂಟಲ್ ಕ್ಯಾರೆಟ್ ಬಳಸಿ ಕ್ಯಾರೆಟ್ ಹಲ್ವ, ಸ್ವೀಟ್ ಪೊಂಗಲ್ ಮಾಡಲಾಗಿತ್ತು. ಊಟದ ಜವಾಬ್ದಾರಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಕೃಷ್ಣಕುಮಾರ್ ವಹಿಸಿಕೊಂಡಿದ್ದರು. ಊಟದ ಗುಣಮಟ್ಟದಿಂದ ಹಿಡಿದು ಬಡಿಸುವವರೆಗೂ
ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಿದ್ದರು.
ಆರಂಭದಲ್ಲಿ 3 ಲಕ್ಷ ಜನ ಸಮ್ಮೇಳನಕ್ಕೆ ಆಗಮಿಸಬಹುದೆಂಬ ನಿರೀಕ್ಷೆಯೊಂದಿಗೆ ಅಷ್ಟು ಮಂದಿಗೆ ಸರಿಹೊಂದುವಂತೆ ಊಟದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿತ್ತು. ನಂತರದಲ್ಲಿ ಹೆಚ್ಚುವರಿಯಾಗಿ 1.50 ಲಕ್ಷಕ್ಕೂ ಹೆಚ್ಚು ಜನ ಊಟ ಮಾಡಿದ್ದಾರೆ. ಇದರ ನಡುವೆಯೂ ಊಟಕ್ಕೆ ಯಾವುದೇ ಅನಾನುಕೂಲವಾಗದಂತೆ ವ್ಯವಸ್ಥೆಗಳನ್ನು ಮಾಡಿಕೊಂಡು ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ.
- ಕೃಷ್ಣಕುಮಾರ್, ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಸಮ್ಮೇಳನದಲ್ಲಿ ಭಾಗವಹಿಸಿದವರಿಗೆ ಗುಣಮಟ್ಟದ ಆಹಾರ ನೀಡಿದ ಖುಷಿ ಇದೆ. ಊಟದ ಬಗ್ಗೆ ಎಲ್ಲರಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ನಾವು ತಯಾರಿಸಿದ ಆಹಾರವನ್ನು ತಜ್ಞರು ಪರೀಕ್ಷಿಸಿ ನೀಡಿದ್ದಾರೆ. ಎಲ್ಲೂ ಲೋಪವಾಗದಂತೆ ಸಾಕಷ್ಟು ಮುಂಜಾಗ್ರತೆ ವಹಿಸಿ ಊಟ ತಯಾರು ಮಾಡಿ ಉಣಬಡಿಸಿದ್ದೇವೆ. ಅಡಕೆ ತಟ್ಟೆ, ಬಾಳೆಎಲೆ ಲೆಕ್ಕದ ಮೇಲೆ ಜನರನ್ನು ದಾಖಲಿಸಲಾಗಿದೆ.
- ಅನಿಲ್, ಅಪೂರ್ವ ವೆಜ್