ಸಾರಾಂಶ
ತಾಲೂಕಿನ ಹನಕೆರೆ ಗ್ರಾಮದಲ್ಲಿ ಎರಡು ವರ್ಷಗಳ ಹಿಂದಷ್ಟೇ ನೂತನವಾಗಿ ಜೀರ್ಣೋದ್ಧಾರಗೊಂಡಿದ್ದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇಗುಲಕ್ಕೆ ಸವರ್ಣೀಯರ ವಿರೋಧದ ನಡುವೆಯೂ ಅಧಿಕಾರಿಗಳು, ಪೊಲೀಸರ ರಕ್ಷಣೆಯಲ್ಲಿ ದಲಿತರು ಪ್ರವೇಶಿಸಿ ಪೂಜೆ ಸಲ್ಲಿಸಿದರು.
ಮಂಡ್ಯ : ತಾಲೂಕಿನ ಹನಕೆರೆ ಗ್ರಾಮದಲ್ಲಿ ಎರಡು ವರ್ಷಗಳ ಹಿಂದಷ್ಟೇ ನೂತನವಾಗಿ ಜೀರ್ಣೋದ್ಧಾರಗೊಂಡಿದ್ದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇಗುಲಕ್ಕೆ ಸವರ್ಣೀಯರ ವಿರೋಧದ ನಡುವೆಯೂ ಅಧಿಕಾರಿಗಳು, ಪೊಲೀಸರ ರಕ್ಷಣೆಯಲ್ಲಿ ದಲಿತರು ಪ್ರವೇಶಿಸಿ ಪೂಜೆ ಸಲ್ಲಿಸಿದರು.
ದಲಿತರ ದೇವಾಲಯ ಪ್ರವೇಶಕ್ಕೆ ಗ್ರಾಮದ ಸವರ್ಣೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ದೇವಾಲಯದ ಒಳನುಗ್ಗಿ ದೇವಾಲಯ ಉದ್ಘಾಟನಾ ಸಮಾರಂಭದ ನಾಮಫಲಕದ ಕಲ್ಲನ್ನು ದೇಗುಲದ ಮುಂದೆ ಒಡೆದುಹಾಕಿ ಆಕ್ರೋಶ ವ್ಯಕ್ತಪಡಿಸಿದರು. ದೇವಾಲಯವನ್ನು ಅವರೇ ಇಟ್ಟುಕೊಳ್ಳಲಿ, ದೇವರನ್ನು ನಾವು ತೆಗೆದುಕೊಂಡು ಹೋಗುವುದಾಗಿ ಹೇಳಿ ಉತ್ಸವ ಮೂರ್ತಿಯನ್ನು ಹೊರತಂದರು.
ಎಲ್ಲರೂ ಕೂಲಿ ಮಾಡಿ ಸಂಪಾದಿಸಿದ ಹಣ ಕೊಟ್ಟು ದೇವಾಲಯ ನಿರ್ಮಾಣ ಮಾಡಿದ್ದೇವೆ. ಹಿಂದಿನಿಂದಲೂ ಅವರು ದೇಗುಲ ಪ್ರವೇಶ ಮಾಡಿಲ್ಲ. ಗ್ರಾಮದಲ್ಲಿರುವ ಎರಡು ಗುಂಪಿನ ದಲಿತರ ಪೂಜೆಗೆ ಅನುಕೂಲವಾಗುವಂತೆ ಶ್ರೀ ಚಿಕ್ಕಮ್ಮ ಮತ್ತು ಶ್ರೀ ಮಂಚಮ್ಮ ದೇವರ ದೇಗುಲವನ್ನು ಕಟ್ಟಿಸಿಕೊಡಲಾಗಿದೆ. ಈಗ ಏಕಾಏಕಿ ಶ್ರೀ ಕಾಲಭೈರವೇಶ್ವರಸ್ವಾಮಿ ದೇಗುಲ ಪ್ರವೇಶಿಸಿ ನಮ್ಮ ಸಂಪ್ರದಾಯ ಮುರಿದರೆ ಹೇಗೆ ಎಂದು ತಹಸೀಲ್ದಾರ್, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರು.
ಅದಕ್ಕೆ ತಹಸೀಲ್ದಾರ್ ಶಿವಕುಮಾರ ಬಿರಾದಾರ್ ಅವರು, ಇದು ಮುಜರಾಯಿ ಇಲಾಖೆಗೆ ಸೇರಿದ ದೇಗುಲ. ಈ ದೇಗುಲಕ್ಕೆ ಎಲ್ಲಾ ಜಾತಿ, ಧರ್ಮ, ಜನಾಂಗದವರ ಪ್ರವೇಶಕ್ಕೆ ಮುಕ್ತ ಅವಕಾಶವಿದೆ. ಅದಕ್ಕೆ ಯಾರೂ ಅಡ್ಡಿಪಡಿಸುವಂತಿಲ್ಲ. ಅಡ್ಡಿಪಡಿಸಿದರೆ ಕಾನೂನಾತ್ಮಕವಾಗಿ ಅವರ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಂತಿಮವಾಗಿ ಸವರ್ಣೀಯರ ವಿರೋಧದ ನಡುವೆಯೂ ದೇವರಿಗೆ ಪೂಜೆ ಸಲ್ಲಿಸಲು ಬಂದಿದ್ದ ದಲಿತರನ್ನು ಪೊಲೀಸರ ರಕ್ಷಣೆಯಲ್ಲಿ ದೇಗುಲದ ಒಳಗೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಟ್ಟರು.
ಒಂದು ತಿಂಗಳಿಂದಲೂ ದೇಗುಲ ಪ್ರವೇಶಕ್ಕೆ ಯತ್ನ:
ಕಳೆದ ಒಂದು ತಿಂಗಳಿಂದಲೂ ಹನಕೆರೆಯಲ್ಲಿರುವ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯ ಪ್ರವೇಶಕ್ಕೆ ದಲಿತರು ಪ್ರಯತ್ನ ನಡೆಸಿದ್ದರು. ಆದರೆ ಸವರ್ಣೀಯರು ಅದಕ್ಕೆ ಅವಕಾಶ ನೀಡಿರಲಿಲ್ಲ. ಹಿಂದಿನಿಂದಲೂ ದಲಿತರ ದೇಗುಲ ಪ್ರವೇಶಕ್ಕೆ ನಿರ್ಬಂಧವಿದೆ. ಅದನ್ನು ಮುರಿಯಬೇಡಿ. ನಿಮಗೆ ಕಟ್ಟಿಸಿಕೊಟ್ಟಿರುವ ದೇಗುಲದಲ್ಲೇ ದೇವರಿಗೆ ಪೂಜೆ ಸಲ್ಲಿಸುವಂತೆ ತಿಳಿಸಿದ್ದರು.
ಆದರೂ ಸವರ್ಣೀಯರ ಆಶಯಕ್ಕೆ ವಿರುದ್ಧವಾಗಿ ಶ್ರೀ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸುವುದಕ್ಕೆ ದಲಿತರು ಟೊಂಕಕಟ್ಟಿ ನಿಂತಿದ್ದರು. ಮಾಜಿ ಶಾಸಕ ಎಂ.ಶ್ರೀನಿವಾಸ್ ಸಮ್ಮುಖದಲ್ಲಿ ಎರಡು- ಮೂರು ಬಾರಿ ಶಾಂತಿಸಭೆ ನಡೆದರೂ ದಲಿತರ ಪ್ರವೇಶಕ್ಕೆ ಸವರ್ಣೀಯರು ಒಪ್ಪಿರಲಿಲ್ಲವೆಂದು ತಿಳಿದುಬಂದಿದೆ.
ಶನಿವಾರದಿಂದ ಬಿಗುವಿನ ವಾತಾವರಣ:
ಶನಿವಾರ ಸಂಜೆಯೂ ದೇಗುಲ ಪ್ರವೇಶಕ್ಕೆ ಮುಂದಾದ ದಲಿತರನ್ನು ಸವರ್ಣೀಯರು ತಡೆಹಿಡಿದಿದ್ದರು. ಇದು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಾಲಯ. ಯಾರು ಬೇಕಾದರೂ ದೇವಾಲಯ ಪ್ರವೇಶಿಸಬಹುದು. ಅದರಂತೆ ದಲಿತರ ಪ್ರವೇಶಕ್ಕೆ ಅವಕಾಶ ಕೊಡುವಂತೆ ಪಟ್ಟು ಹಿಡಿದರು. ಆದರೂ ಸವರ್ಣೀಯರು ಒಪ್ಪದಿದ್ದರಿಂದ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನೆಲೆಸಿತ್ತು. ಮುಂಜಾಗ್ರತೆಯಾಗಿ ಶನಿವಾರ ರಾತ್ರಿಯಿಂದಲೇ ಊರಿನಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕಡಿಯೊಂದಿಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಭಾನುವಾರ ಮತ್ತೆ ದಲಿತರ ಒಂದು ಗುಂಪು ದೇವಾಲಯ ಪ್ರವೇಶಿಸುವುದಕ್ಕೆ ಮುಂದಾಯಿತು. ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರು ದೇವಾಲಯ ಸಮಿತಿ ಸದಸ್ಯರೊಟ್ಟಿಗೆ ಮಾತುಕತೆಗೆ ಕರೆದರೂ ಯಾರೂ ಬರಲಿಲ್ಲ. ದಲಿತರ ಪ್ರವೇಶವನ್ನು ನಾವು ಒಪ್ಪುವುದಿಲ್ಲ. ನೀವೇ ಅವರ ಮನವೊಲಿಸಿ ಅಲ್ಲಿಂದ ಕಳುಹಿಸುವಂತೆ ದೇವಾಲಯ ಸಮಿತಿಯವರು ಶಾಸಕರಿಗೆ ತಿಳಿಸಿದರು. ಒಮ್ಮೆ ಅವರಿಗೆ ಪ್ರವೇಶ ನೀಡುವುದಾದರೆ ದೇಗುಲದ ಕೀಯನ್ನು ನೀವೇ ಇಟ್ಟುಕೊಳ್ಳಿ. ನಾವೇ ದೇವಾಲಯ ಪ್ರವೇಶ ಮಾಡುವುದಿಲ್ಲವೆಂದು ಸವರ್ಣೀಯರು ನೇರವಾಗಿಯೇ ಹೇಳಿದರು.
ಮೊದಲ ಬಾರಿಗೆ ಪೂಜೆ:
ಸವರ್ಣೀಯರ ವಿರೋಧವನ್ನು ಲೆಕ್ಕಿಸದ ಮಾಜಿ ಶಾಸಕ ಎಂ.ಶ್ರೀನಿವಾಸ್, ತಹಸೀಲ್ದಾರ್, ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ದೇವಾಲಯ ಪ್ರವೇಶಿಸಲು ದಲಿತರನ್ನು ಕರೆದೊಯ್ದರು. ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ದಲಿತರು ಮೊದಲ ಬಾರಿಗೆ ಪೂಜೆ ಸಲ್ಲಿಸಿ ಹೊರಬಂದರು.
ದಲಿತರು ದೇವಾಲಯ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಸವರ್ಣೀಯರು ಇನ್ನು ಮುಂದೆ ನಾವು ದೇವಾಲಯ ಪ್ರವೇಶ ಮಾಡುವುದಿಲ್ಲ ಎಂದು ಸಂಕಲ್ಪ ಮಾಡಿದರು. ದೇವಾಲಯ ಹೊರ ಭಾಗದಲ್ಲಿ ಸವರ್ಣೀಯ ಪುರುಷರು- ಮಹಿಳೆಯರು ಗುಂಪುಗೊಂಡು ಅಸಮಾಧಾನ ಹೊರಹಾಕುತ್ತಿದ್ದರು.
ಪೊಲೀಸ್ ಬಂದೋಬಸ್ತ್:
ಗ್ರಾಮದಲ್ಲಿ ಮುಂಜಾಗ್ರತೆಯಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಧ್ಯಾಹ್ನದ ಬಳಿಕ ದೇವಾಲಯದ ಪ್ರವೇಶದ್ವಾರವನ್ನು ಮುಚ್ಚಿದ್ದು ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದ್ದರೂ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.
ಶ್ರೀ ಕಾಲಭೈರವೇಶ್ವರ ಸ್ವಾಮಿ ದೇಗುಲ ಮುಜರಾಯಿ ಇಲಾಖೆಗೆ ಸೇರಿದ್ದು, ಎಲ್ಲಾ ಜಾತಿ, ಜನಾಂಗ, ಧರ್ಮದವರೂ ದೇವಾಲಯ ಪ್ರವೇಶಿಸಬಹುದು. ಅದಕ್ಕೆ ಯಾರೂ ಅಡ್ಡಿಪಡಿಸುವಂತಿಲ್ಲ. ಹಾಗಾಗಿ ದೇವರ ಪೂಜೆಗೆ ಬಂದಿದ್ದ ದಲಿತರ ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಸವರ್ಣೀಯರಲ್ಲಿ ಕೆಲವರಷ್ಟೇ ವಿರೋಧಿಸುತ್ತಿದ್ದು, ದಲಿತರ ಪ್ರವೇಶಕ್ಕೆ ಬಹುತೇಕರು ಒಪ್ಪಿದ್ದಾರೆ. ಸಮಸ್ಯೆ ಶಾಂತಿಯುತವಾಗಿ ಬಗೆಹರಿದಿದೆ.
- ಶಿವಕುಮಾರ್ ಬಿರಾದಾರ್, ತಹಸೀಲ್ದಾರ್, ಮಂಡ್ಯ
ದೇವಾಲಯ ಪ್ರವೇಶಕ್ಕೆ ಸಮಿತಿಯವರು ದಲಿತರ ಪ್ರವೇಶಕ್ಕೆ ಅಡ್ಡಿಪಡಿಸಿಲ್ಲ. ಗ್ರಾಮದ ಕೆಲವರು ವಿರೋಧಿಸುತ್ತಿದ್ದಾರಷ್ಟೇ. ದಲಿತರಿಗಾಗಿ ಶ್ರೀ ಚಿಕ್ಕಮ್ಮ ಮತ್ತು ಶ್ರೀ ಮಂಚಮ್ಮ ದೇವರ ದೇವಸ್ಥಾನ ಕಟ್ಟಿಸಿಕೊಟ್ಟಿದ್ದೇವೆ. ಶ್ರೀ ಕಾಲಭೈರವೇಶ್ವರನನ್ನೂ ಪೂಜೆ ಮಾಡುವುದಾದರೆ ಮೂರ್ತಿಯನ್ನು ಮಾಡಿಸಿಕೊಡೋಣ. ಅಲ್ಲೇ ಪೂಜೆ ಮಾಡಲಿ ಎನ್ನುವುದು ಅವರ ವಾದ. ನಾವು ಯಾರನ್ನೂ ದ್ವೇಷ ಮಾಡಿಲ್ಲ. ಎಲ್ಲಾ ಜಾತಿಯವರು ಎಲ್ಲರ ಮನೆಯಲ್ಲೂ ಊಟ ಮಾಡಿದ್ದಾರೆ. ಇದೊಂದು ಕೆಟ್ಟ ಘಳಿಗೆಯಷ್ಟೇ.
- ರಾಜಣ್ಣ, ಉಪಾಧ್ಯಕ್ಷರು, ಶ್ರೀ ಕಾಲಭೈರವೇಶ್ವರ ದೇವಾಲಯ ಸಮಿತಿ.
;Resize=(690,390))
)
)
;Resize=(128,128))
;Resize=(128,128))
;Resize=(128,128))
;Resize=(128,128))