ಸಾರಾಂಶ
ಕೊಟ್ಟ ಹೆಣ್ಣು ಹೋದ ಮನೆಯಲ್ಲಿ ಇನ್ನೊಂದು ತವರು ಕಟ್ಟುತ್ತಾಳೆ. ವಿದೇಶಿ ಕನ್ನಡಿಗರೂ ಹಾಗೆಯೇ, ಬದುಕಿಗೋಸ್ಕರ ವಿದೇಶಕ್ಕೆ ಹೋದರೂ ತಮ್ಮ ಜೊತೆ ಕನ್ನಡವನ್ನೂ ಹೊತ್ತೊಯ್ದು ಅಲ್ಲಿ ಕಟ್ಟಿ ಬೆಳೆಸುತ್ತಾರೆ ಎಂದು ಬಹರೇನ್ ನ ಅನಿವಾಸಿ ಕನ್ನಡಿಗ ಕಿರಣ್ ಉಪಾಧ್ಯಾಯ ಅಭಿಪ್ರಾಯಪಟ್ಟಿದ್ದಾರೆ.
ಮಂಡ್ಯ : ಕೊಟ್ಟ ಹೆಣ್ಣು ಹೋದ ಮನೆಯಲ್ಲಿ ಇನ್ನೊಂದು ತವರು ಕಟ್ಟುತ್ತಾಳೆ. ವಿದೇಶಿ ಕನ್ನಡಿಗರೂ ಹಾಗೆಯೇ, ಬದುಕಿಗೋಸ್ಕರ ವಿದೇಶಕ್ಕೆ ಹೋದರೂ ತಮ್ಮ ಜೊತೆ ಕನ್ನಡವನ್ನೂ ಹೊತ್ತೊಯ್ದು ಅಲ್ಲಿ ಕಟ್ಟಿ ಬೆಳೆಸುತ್ತಾರೆ ಎಂದು ಬಹರೇನ್ ನ ಅನಿವಾಸಿ ಕನ್ನಡಿಗ ಕಿರಣ್ ಉಪಾಧ್ಯಾಯ ಅಭಿಪ್ರಾಯಪಟ್ಟಿದ್ದಾರೆ.
ಸಮ್ಮೇಳನದ ಕೊನೆಯ ದಿನ ಭಾನುವಾರ ಪೂರ್ವಾಹ್ನ ಪ್ರಧಾನ ವೇದಿಕೆಯಲ್ಲಿ ‘ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ’ ಕುರಿತು ನಡೆದ ಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದರು.
ತವರಿನಿಂದ ಆರಂಭದಲ್ಲಿ ವಿದೇಶಕ್ಕೆ ಹೋಗುವಾಗ ಹಪ್ಪಳ, ತುಪ್ಪ ಕೊಂಡು ಹೋಗುವ ಅನಿವಾಸಿಗಳು ಬಳಿಕ ಕನ್ನಡ ಬಾವುಟ, ಕನ್ನಡ ಪುಸ್ತಕವನ್ನೂ ಹೊತ್ತೊಯ್ಯುತ್ತಾರೆ. ಇದರ ಫಲವಾಗಿ ಇಂದು ಜಗತ್ತಿನ 175 ದೇಶಗಳಲ್ಲಿ ಕನ್ನಡ ಸಂಘಟನೆಗಳು ಹುಟ್ಟಿ ಸಕ್ರಿಯವಾಗಿವೆ ಎಂದರು. ಸಾಹಿತ್ಯ ಸಮ್ಮೇಳನ ನೆಪದಲ್ಲಿ ಮೊದಲ ಬಾರಿಗೆ ಅನಿವಾಸಿಗಳು ಒಟ್ಟಾಗಿದ್ದೇವೆ. ಮುಂದೆ ಪರಿಷತ್ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಸಾಹಿತ್ಯ ಸಮ್ಮೇಳನ ಆಗಬೇಕು ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಮೆರಿಕದ ಅಮರನಾಥ ಗೌಡ ಮಾತನಾಡಿ, ಜಗತ್ತಿನಲ್ಲಿ ಅಂದಾಜು 40 ಲಕ್ಷ ಅನಿವಾಸಿ ಕನ್ನಡಿಗರಿದ್ದು, ಅಮೆರಿಕವೊಂದರಲ್ಲೇ ಐದು ಲಕ್ಷ ಮಂದಿ ಇದ್ದಾರೆ. ಅಮೆರಿಕದ ಅಕ್ಕ ಸಂಘಟನೆ ಪರಿಶ್ರಮದಿಂದ ಅಲ್ಲಿನ ಮಕ್ಕಳು ಕನ್ನಡ ಕಲಿತು ಕಾರ್ಯಕ್ರಮ ನೀಡುತ್ತಿದ್ದಾರೆ ಎಂದರು.
‘ವಿದೇಶದಲ್ಲಿರುವ ಕನ್ನಡಿಗರ ಸಮಸ್ಯೆಗಳು, ಪರಿಹಾರಗಳು’ ಕುರಿತು ಮಾತನಾಡಿದ ಕತಾರ್ ನ ಎಚ್.ಕೆ.ಮಧು, ಅನಿವಾಸಿ ಶ್ರಮಿಕ ಕನ್ನಡಿಗ ಕಾರ್ಮಿಕರ ನೋಂದಣಿಗೆ ವ್ಯವಸ್ಥೆ, ಅಂಚೆ, ವಿಮೆ ಖಾತೆ ತೆರೆಯಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
‘ಜಗತ್ತಿನ ರಾಷ್ಟ್ರಗಳಲ್ಲಿ ಮಾತೃಭಾಷೆಯನ್ನು ನೋಡುವ ಕ್ರಮ’ದ ಬಗ್ಗೆ ಮಾಹಿತಿ ನೀಡಿದ ಬ್ರಿಟನ್‌ನ ಅಶ್ವಿನ್ ಶೇಷಾದ್ರಿ, ಹಲವು ಭಾಷೆಗಳನ್ನು ಗಮನಿಸಿದಾಗ ಅತಿ ವೈಜ್ಞಾನಿಕ ಭಾಷೆ ಕನ್ನಡ ಎಂದು ಅಭಿಪ್ರಾಯಪಟ್ಟರು. ‘ವಿದೇಶದಲ್ಲಿರುವ ಕನ್ನಡ ಶಾಲೆಗಳ ಸ್ಥಿತಿಗಳ’ ಕುರಿತು ಅಂಕಿ-ಅಂಶ ಸಹಿತ ಬೆಳಕು ಚೆಲ್ಲಿದವರು ಯುಎಇಯ ಶಶಿಧರ ನಾಗರಾಜಪ್ಪ. ಹೊರನಾಡುಗಳಲ್ಲಿ ಕನ್ನಡ ಮಕ್ಕಳ ಕಲಿಕೆಗೆ ಒಟ್ಟು 5866 ಶಾಲೆಗಳಿದ್ದು, 704 ಶಿಕ್ಷಕರು ಸಂಬಳ ರಹಿತರಾಗಿ ಬೋಧನೆ ನೀಡುತ್ತಿದ್ದಾರೆ. ಯುಎಇಯಲ್ಲಿ ಅತಿ ಹೆಚ್ಚು, 1258 ಕನ್ನಡ ಶಾಲೆಗಳಿವೆ ಎಂದರು.
ಗೋಷ್ಠಿಯಲ್ಲಿ 18 ದೇಶಗಳ ಅನಿವಾಸಿ ಕನ್ನಡಿಗರು ಪಾಲ್ಗೊಂಡಿದ್ದರು. ಕ.ಸಾ.ಪ. ಅಂತಾರಾಷ್ಟ್ರೀಯ ಸಮನ್ವಯಾಧಿಕಾರಿ ನಿವೇದಿತಾ ಹಾವನೂರ ಹೊನ್ನತ್ತಿ ಉಪಸ್ಥಿತರಿದ್ದರು.
ಪೋಲಂಡಿನ ಪಂಚಾಕ್ಷರಿ ಎಲ್. ನಿರ್ವಹಿಸಿದರು. ಹಾಲೆಂಡಿನ ಲೀಲಾಧರ ಕೆ.ಆರ್. ನಿರೂಪಿಸಿದರು. ಕತಾರಿನ ಮಹೇಶ್ ಗೌಡ ಸ್ವಾಗತಿಸಿದರು. ಆಸ್ಟ್ರೇಲಿಯದ ಸುನಯನಾ ಗಾಡಗೋಳಿ ವಂದಿಸಿದರು.
ಕೃತಿ ಲೋಕಾರ್ಪಣೆ: ವಿದೇಶಿ ಕನ್ನಡಿಗರ ಮಾಹಿತಿ ನೀಡುವ ಬೆಂಕಿ ಬಸಣ್ಣ ಪ್ರಧಾನ ಸಂಪಾದಕತ್ವದ ‘ವಿಶ್ವ ಕನ್ನಡ ಕೂಟಗಳ ಕೈಪಿಡಿ’ ಪುಸ್ತಕ ಲೋಕಾರ್ಪಣೆ ಇದೇ ವೇಳೆ ಲೋಕಾರ್ಪಣೆ ಮಾಡಲಾಯಿತು.
ಜರ್ಮನಿಯಲ್ಲಿ ಮಕ್ಳಿಗೂ ಇದೆ ‘ನಲಿ-ಕಲಿ’!
ಜರ್ಮನಿಯ ಅನಿವಾಸಿ ಕನ್ನಡಿಗ ಮಕ್ಕಳೂ ‘ನಮ್ಮ ಕನ್ನಡ ಶಾಲೆ ಜರ್ಮನಿ’ಯಲ್ಲಿ ಕನ್ನಡ ಕಲಿಯುತ್ತಾರೆ. ಕರ್ನಾಟಕ ಶಿಕ್ಷಣ ಇಲಾಖೆಯ ‘ನಲಿ-ಕಲಿ’ ಸಿಲಬಸ್ ಆಧರಿಸಿ ಅಲ್ಲೂ ಪಾಠ ಮಾಡುತ್ತಾರೆ. ಈ ಕುತೂಹಲಕಾರಿ ಮಾಹಿತಿ ನೀಡಿದ್ದು, ಜರ್ಮನಿಯ ರಶ್ಮಿ ನಾಗರಾಜ್. ‘ವಿದೇಶದಲ್ಲಿರುವ ಕನ್ನಡ ಶಾಲೆಗಳ ಸ್ಥಿತಿಗತಿಗಳು’ ಕುರಿತು ಮಾಹಿತಿ ನೀಡಿದ ಅವರು, 2022ರಿಂದ ಜರ್ಮನಿಯ ಉದ್ಯೋಗಸ್ಥ ಅನಿವಾಸಿಗಳು ವಾರಾಂತ್ಯದಲ್ಲಿ ಆನ್‌ಲೈನ್ ಹಾಗೂ ಉಪಸ್ಥಿತ ಕನ್ನಡ ಶಾಲೆ ನಡೆಸುತ್ತಿದ್ದಾರೆ. ಕರ್ನಾಟಕದ ನಲಿ-ಕಲಿ ಮಾದರಿಗೆ ಮತ್ತಷ್ಟು ವಿಚಾರ ಸೇರಿಸಿ ಸಿಲಬಸ್ ರೂಪಿಸಲಾಗಿದೆ. ಈ ಶಾಲೆಗಳಿಗೆ ದುಡ್ಡು, ಸವಲತ್ತು ಬೇಡ. ಜರ್ಮನಿಯಲ್ಲಿ ಕನ್ನಡ ಕಲಿತು ಬರುವ ಮಕ್ಕಳಿಗೆ ಭಾರತದಲ್ಲಿ ಮಾನ್ಯತೆ ನೀಡಿ ಎಂದು ಮನವಿ ಮಾಡಿದರು. ಜರ್ಮನಿಯಲ್ಲೇ ಹುಟ್ಟಿ, ಈಗ ಪದವಿ ವಿದ್ಯಾರ್ಥಿನಿಯಾಗಿದ್ದು, ಕನ್ನಡ ಶಾಲೆಯಲ್ಲಿ ಪಾಠ ಮಾಡುವ ಸಂಹಿತಾ ಕನ್ನಡದಲ್ಲೇ ಮಾತನಾಡಿದರು.