ಮಂಡ್ಯ ವಿವಿಗೆ ಒಳಪಡುವ 47 ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 40 ಸಾವಿರ ಮಂದಿಯನ್ನು ಒಂದೆಡೆ ಸೇರಿಸಿ ಈ ಮೂಲಕ ಮಂಡ್ಯ ನಗರದಲ್ಲಿ ಸ್ವಾಭಿಮಾನಿ ವಿಶ್ವವಿದ್ಯಾಲಯವಿದೆ ಎಂದು ತೋರಿಸಲಾಗುವುದು. ವಿವಿ ಸ್ಥಾಪನೆಯಾದ ನಂತರ ದೊಡ್ಡ ಕಾರ್ಯಕ್ರಮ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಶ್ವವಿದ್ಯಾಲಯ ಸ್ಥಾಪನೆಯಾಗಿ 7 ವಸಂತ ಪೂರೈಸಿರುವ ಹಿನ್ನೆಲೆಯಲ್ಲಿ ಏ.30ರಂದು ನವ ವಸಂತ- ಯುವ ಸಂಭ್ರಮವನ್ನು ವಿವಿ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಶಾಸಕ ಪಿ.ರವಿಕುಮಾರ್‌ ತಿಳಿಸಿದರು.

ಮಂಡ್ಯ ವಿಶ್ವವಿದ್ಯಾಲಯದ ಕಚೇರಿಯಲ್ಲಿ ಯುವ ಸಂಭ್ರಮದ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಶಾಸಕರು, ಮಂಡ್ಯ ವಿವಿಗೆ ಒಳಪಡುವ 47 ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 40 ಸಾವಿರ ಮಂದಿಯನ್ನು ಒಂದೆಡೆ ಸೇರಿಸಿ ಈ ಮೂಲಕ ಮಂಡ್ಯ ನಗರದಲ್ಲಿ ಸ್ವಾಭಿಮಾನಿ ವಿಶ್ವವಿದ್ಯಾಲಯವಿದೆ ಎಂದು ತೋರಿಸಲಾಗುವುದು. ವಿವಿ ಸ್ಥಾಪನೆಯಾದ ನಂತರ ದೊಡ್ಡ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಬೃಹತ್ ಕೈಗಾರಿಕಾ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಉನ್ನತ ಶಿಕ್ಷಣ ಸಚಿವ ಸುಧಾಕರ್ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಇದೇ ವೇಳೆ 2 ಕೋಟಿ ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಮೌಲ್ಯಮಾಪನ ಕಟ್ಟಡ, ಸ್ವಾಗತ ಕಮಾನು ಉದ್ಘಾಟಿಸಲಾಗುವುದು ಎಂದ ಅವರು, ಕಾರ್ಯಕ್ರಮದ ಹಿನ್ನೆಲೆಯಲ್ಲಿ ಏ.21ರಿಂದ ಅಂತರ ಕಾಲೇಜು ನೃತ್ಯ ಪ್ರದರ್ಶನ ನಡೆಯಲಿದೆ. ಇದರಲ್ಲಿ ಆಯ್ಕೆಯಾದವರಿಗೆ ಯುವ ಸಂಭ್ರಮದಲ್ಲಿ ಅವಕಾಶ ನೀಡಲಾಗುವುದು ಎಂದರು.

ವಿದ್ಯಾರ್ಥಿಗಳು ಸ್ಟಾರ್ಟ್ ಅಪ್‌ನಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಲು ಬ್ಯಾಂಕಿಂಗ್ ಸೇರಿದಂತೆ ಕಂಪನಿಗಳ 10 ರಿಂದ 15 ಮಳಿಗೆಗಳನ್ನು ತೆರೆಯಲಾಗುವುದು. ವಿದ್ಯಾರ್ಥಿಗಳನ್ನು ಉದ್ಯಮಿಗಳನ್ನಾಗಿಸಲು ಪರಿಣಿತರನ್ನು ಕರೆಸಿ ಸಲಹೆ ಹಾಗೂ ಮಾಹಿತಿಗಳನ್ನು ನೀಡಲಾಗುವುದು ಎಂದರು.

ಕಾರ್ಯಕ್ರಮಕ್ಕೆ ಸುಮಾರು 50 ಲಕ್ಷ ರು. ವೆಚ್ಚವಾಗಲಿದ್ದು, ಮಂಡ್ಯ ವಿವಿಯಿಂದ 25 ಲಕ್ಷ ಭರಿಸಲಾಗುವುದು. ಉಳಿದ ಹಣವನ್ನು ಖಾಸಗಿಯಾಗಿ ವ್ಯಯಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾರ್ಯಕ್ರಮದ ವ್ಯವಸ್ಥಾಪಕ ಧ್ರುವ ಮಾತನಾಡಿ, ಯುವ ಸಂಭ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಚಂದನ್‌ಶೆಟ್ಟಿ ತಂಡ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಲಾಗುವುದು. ಯುವ ನಟ ಕಿಶನ್ ಸೇರಿದಂತೆ ಚಲನಚಿತ್ರ ನಟ-ನಟಿಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಈ ವೇಳೆ ಮಂಡ್ಯ ವಿವಿ ಕುಲಸಚಿವ ವೆಂಕಟರಮಣ, ರಿಜಿಸ್ಟ್ರರ್ ಕೃಷ್ಣಕುಮಾರ್, ಆರ್ಥಿಕ ಸಲಹೆಗಾರ ಖಾದರ್, ಸಹಾಯಕ ಪ್ರಾಧ್ಯಾಪಕ ಎಂ.ಜಶ್ವಂತ್, ಉಪಗ್ರಂಥಪಾಲಕ ಜಿ.ಎನ್.ಮಹದೇವಸ್ವಾಮಿ, ಪಿ.ನಿತೀಶ್ ಇದ್ದರು.