ಅಂಕಪಟ್ಟಿ ಮರುಮುದ್ರಣಕ್ಕೆ ಮಂಡ್ಯ ವಿವಿ ಹರಸಾಹಸ..!

| Published : Sep 07 2024, 01:34 AM IST

ಅಂಕಪಟ್ಟಿ ಮರುಮುದ್ರಣಕ್ಕೆ ಮಂಡ್ಯ ವಿವಿ ಹರಸಾಹಸ..!
Share this Article
  • FB
  • TW
  • Linkdin
  • Email

ಸಾರಾಂಶ

ಪದವಿ ಅಂಕಪಟ್ಟಿ ಮುದ್ರಣ ಸಮಯದಲ್ಲೇ ಆಗಿರುವ ಲೋಪಗಳನ್ನು ಗುರುತಿಸಿ ಸರಿಪಡಿಸುವಂತಹ ಪ್ರಕ್ರಿಯೆ ನಡೆದಿದ್ದರೆ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಘಟಿಕೋತ್ಸವ ಸಮಯದಲ್ಲಿ ಇಕ್ಕಟ್ಟಿಗೆ ಸಿಲುಕುವ ಪ್ರಮೇಯವೇ ಇರುತ್ತಿರಲಿಲ್ಲ. ಆಗ ತೋರಿದ ನಿರ್ಲಕ್ಷ್ಯ, ಬೇಜವಾಬ್ದಾರಿತನದಿಂದ ಈಗ ಅಂಕ ಪಟ್ಟಿಯಲ್ಲಾಗಿರುವ ಲೋಪಗಳನ್ನು ಸರಿಪಡಿಸುವುದಕ್ಕೆ ತಿಣುಕಾಡುತ್ತಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಶ್ವವಿದ್ಯಾಲಯ ಪದವಿ ತರಗತಿಗಳ ದೋಷಪೂರಿತ ಅಂಕಪಟ್ಟಿ ವಿವಾದ ಮಂಡ್ಯ ಘಟಿಕೋತ್ಸವ ನಿಗದಿಯಾಗಿರುವ ಸಮಯದಲ್ಲಿ ಕೋಲಾಹಲ ಸೃಷ್ಟಿಸಿದೆ.

ಪದವಿ ಅಂಕಪಟ್ಟಿ ಮುದ್ರಣ ಸಮಯದಲ್ಲೇ ಆಗಿರುವ ಲೋಪಗಳನ್ನು ಗುರುತಿಸಿ ಸರಿಪಡಿಸುವಂತಹ ಪ್ರಕ್ರಿಯೆ ನಡೆದಿದ್ದರೆ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಘಟಿಕೋತ್ಸವ ಸಮಯದಲ್ಲಿ ಇಕ್ಕಟ್ಟಿಗೆ ಸಿಲುಕುವ ಪ್ರಮೇಯವೇ ಇರುತ್ತಿರಲಿಲ್ಲ. ಆಗ ತೋರಿದ ನಿರ್ಲಕ್ಷ್ಯ, ಬೇಜವಾಬ್ದಾರಿತನದಿಂದ ಈಗ ಅಂಕ ಪಟ್ಟಿಯಲ್ಲಾಗಿರುವ ಲೋಪಗಳನ್ನು ಸರಿಪಡಿಸುವುದಕ್ಕೆ ತಿಣುಕಾಡುತ್ತಿದೆ.

ದಿಕ್ಕೆಟ್ಟ ಸಮಿತಿ ಸದಸ್ಯರು:

ಅಂಕಪಟ್ಟಿಗಳು ದೋಷಪೂರಿತವಾಗಿರುವುದು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿಗಳು, ಮೌಲ್ಯಮಾಪನ ಕುಲಸಚಿವರ ಗಮನಕ್ಕೂ ಬಂದಿದೆ. ಅದನ್ನು ಮುಚ್ಚಿಡುವ ಪ್ರಯತ್ನವೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ಮಧ್ಯೆ ಕುಲಸಚಿವ (ಮೌಲ್ಯಮಾಪನ) ಯೋಗಾನರಸಿಂಹಾಚಾರಿ ಅವರು ತಮ್ಮ ಅಧ್ಯಕ್ಷತೆಯಲ್ಲಿ ೯ ಮಂದಿಯನ್ನೊಳಗೊಂಡ ಅಂಕಪಟ್ಟಿ ಪರಿಶೀಲನಾ ಸಮಿತಿ ರಚಿಸಿದ್ದಾರೆ. ಸೆ.೧೩ರಂದು ಮಂಡ್ಯ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪದವಿ ಪ್ರಮಾಣಪತ್ರ ವಿತರಿಸಬೇಕಿರುವುದರಿಂದ ಅಷ್ಟರೊಳಗೆ ಅಂಕಪಟ್ಟಿಯನ್ನು ಸರಿಪಡಿಸಿ ನೀಡುವ ದೊಡ್ಡ ಸವಾಲನ್ನು ಸಮಿತಿಯ ಮುಂದಿಡಲಾಗಿದೆ. ಈ ಸವಾಲನ್ನು ಸ್ವೀಕರಿಸಿರುವ ಸಮಿತಿ ಸದಸ್ಯರು ದಿಕ್ಕೆಟ್ಟಿದ್ದಾರೆ.

ಅಂಕಪಟ್ಟಿ ನೀಡಿದ ಮೇಲೆ ಮರುಮುದ್ರಣ..!

ಪದವಿ ಅಂಕಪಟ್ಟಿಯಲ್ಲಿರುವ ಲೋಪಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಅವೆಲ್ಲವನ್ನೂ ಸರಿಪಡಿಸಿ ಪುನರ್‌ ಮುದ್ರಣ ಮಾಡುವ ಪ್ರಕ್ರಿಯೆ ನಡೆಸುವುದಕ್ಕೆ ಮಂಡ್ಯ ವಿವಿಯಿಂದ ತರಾತುರಿಯ ಪ್ರಯತ್ನಗಳು ನಡೆದಿವೆ. ಆದರೆ, ಈಗಾಗಲೇ ಪದವಿ ವಿದ್ಯಾರ್ಥಿಗಳಿಗೆ ದೋಷಪೂರಿತ ಅಂಕಪಟ್ಟಿ ನೀಡಲಾಗಿದ್ದು, ಪದವಿ ಪ್ರಮಾಣಪತ್ರ ನೀಡುವುದೊಂದೇ ಬಾಕಿ ಇದೆ. ಈಗ ಅಂಕಪಟ್ಟಿಗಳನ್ನು ಮರುಮುದ್ರಣ ಮಾಡಿ ವಿದ್ಯಾರ್ಥಿಗಳಿಗೆ ನೀಡುವುದಾದರೂ ಹೇಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಅಂಕಪಟ್ಟಿ ದೋಷಗಳಿಂದ ಕೂಡಿರುವ ವಿಷಯವನ್ನು ವಿಶ್ವವಿದ್ಯಾನಿಲಯದ ಅಧಿಕಾರಿಗಳು ವಿದ್ಯಾರ್ಥಿಗಳ ಗಮನಕ್ಕೆ ತಂದಿದ್ದಾರೋ ಇಲ್ಲವೋ ಗೊತ್ತಿಲ್ಲ. ಅಂಕಪಟ್ಟಿ ಪಡೆದುಕೊಂಡು ಹೋದ ವಿದ್ಯಾರ್ಥಿಗಳು ಈಗ ಎಲ್ಲಿದ್ದಾರೋ, ಏನು ಮಾಡುತ್ತಿದ್ದಾರೋ ಎನ್ನುವುದೂ ಗೊತ್ತಿಲ್ಲ. ದೋಷಪೂರಿತ ಅಂಕಪಟ್ಟಿ ಪಡೆದ ವಿದ್ಯಾರ್ಥಿಗಳ ಭವಿಷ್ಯ ಏನಾಗಿದೆ ಎಂಬ ಬಗ್ಗೆ ಯಾರಿಗೂ ತಿಳಿದಿಲ್ಲ. ಈ ಎಲ್ಲಾ ಗೊಂದಲಗಳ ನಡುವೆ ಮಂಡ್ಯ ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆಸಲೇಬೇಕೆಂಬ ಹಠಕ್ಕೆ ಬಿದ್ದಿರುವ ಕುಲಪತಿಗಳು ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದ್ದಾರೆ.

ಅಂಕಪಟ್ಟಿಯಲ್ಲಾಗಿರುವ ದೋಷಗಳನ್ನು ಏನಾದರೂ ಮಾಡಿ ಸರಿಪಡಿಸಿ ಕಳಂಕದಿಂದ ಪಾರಾಗುವುದಕ್ಕೆ ಮಂಡ್ಯ ವಿವಿ ಆಡಳಿತ ಮಂಡಳಿ ಶತಾಯಗತಾಯ ಪ್ರಯತ್ನಗಳನ್ನು ನಡೆಸಿದ್ದರೂ ಪರಿಹಾರ ಕಂಡುಕೊಳ್ಳಲಾಗದೆ ಗೊಂದಲಕ್ಕೆ ಸಿಲುಕಿದೆ. ಮಂಡ್ಯ ವಿಶ್ವವಿದ್ಯಾಲಯ ಆರಂಭವಾದ ನಂತರದಲ್ಲಿ ನಡೆಯುತ್ತಿರುವ ಮೊದಲ ಘಟಿಕೋತ್ಸವದ ವೇಳೆಯೇ ಅಂಕಪಟ್ಟಿ ವಿವಾದ ಸುತ್ತುಕೊಂಡಿರುವುದು ಸಂಕಷ್ಟವನ್ನು ತಂದೊಡ್ಡಿದೆ.

ಸ್ನಾತಕೋತ್ತರ ಪದವಿ ಅಂಕಪಟ್ಟಿ ನೀಡಿಲ್ಲ:

ಪದವಿ ಅಂಕಪಟ್ಟಿಗಳಲ್ಲಿ ದೋಷಗಳು ಕಂಡುಬಂದಿರುವುದು ಒಂದೆಡೆಯಾದರೆ, ಇನ್ನೊಂದೆಡೆ ೨೦೧೯-೨೦ನೇ ಸಾಲಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಇದುವರೆಗೂ ಅಂಕಪಟ್ಟಿ ನೀಡದಿರುವುದು ಮತ್ತೊಂದಡೆಯಾಗಿದೆ. ಅದನ್ನೂ ಘಟಿಕೋತ್ಸವ ನಡೆಯುವ ಸಮಯದಲ್ಲೇ ಪದವಿ ಪ್ರಮಾಣಪತ್ರದ ಜೊತೆಯಲ್ಲೇ ಅಂಕಪಟ್ಟಿಗಳನ್ನು ನೀಡುವುದಕ್ಕೆ ಮಂಡ್ಯ ವಿಶ್ವವಿದ್ಯಾಲಯ ಮುಂದಾಗಿದೆ.

ಪದವಿ ತರಗತಿಗಳ ಅಂಕಪಟ್ಟಿಯಲ್ಲಿ ದೋಷಗಳು ಕಂಡುಬಂದಿರುವ ಹೊತ್ತಿನಲ್ಲೇ ೨೦೧೯-೨೦ನೇ ಸಾಲಿನ ಸ್ನಾತಕೋತ್ತರ ಪದವಿ ಅಂಕಪಟ್ಟಿಗಳ ಬಗ್ಗೆಯೂ ನಿಗಾ ವಹಿಸಿರುವ ಮಂಡ್ಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸ್ನಾತಕೋತ್ತರ ಪದವಿ ಅಂಕಪಟ್ಟಿಗಳಲ್ಲಿ ಯಾವುದೇ ದೋಷಗಳು ಕಂಡುಬರದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಂಕಪಟ್ಟಿ ಸಮಿತಿ ರಚಿಸಿ ಸೂಚನೆ ನೀಡಲಾಗಿದೆ.

ಐಚ್ಛಿಕ ಕನ್ನಡದ ಪರಿವಿಡಿ ಪ್ರಕಟ:

ಪದವಿ ತರಗತಿಗಳು ಆರಂಭವಾಗಿ ಒಂದು ತಿಂಗಳಾಗಿದ್ದರೂ ಪ್ರಥಮ ಪದವಿ ತರಗತಿಯ ಐಚ್ಛಿಕ ಕನ್ನಡ ವಿಷಯದ ಪರಿವಿಡಿ (ಸಿಲಬಸ್) ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿದ್ದ ಮಂಡ್ಯ ವಿಶ್ವವಿದ್ಯಾಲಯ ಕಡೆಗೂ ಎಚ್ಚೆತ್ತು ಸಿಲಬಸ್‌ನ್ನು ಅಧಿಕೃತವಾಗಿ ಪ್ರಕಟಿಸಿದೆ.

ಮಂಡ್ಯ ವಿಶ್ವವಿದ್ಯಾಲಯ ಪದವಿ ಅಂಕಪಟ್ಟಿ ದೋಷಪೂರಿತವಾಗಿರುವ ಹಾಗೂ ಐಚ್ಛಿಕ ಕನ್ನಡ ವಿಷಯದ ಸಿಲಬಸ್ ಬಿಡುಗಡೆ ಮಾಡದಿರುವ ಬಗ್ಗೆ ಕನ್ನಡಪ್ರಭ ಪತ್ರಿಕೆ ಸೆ..೪ರಂದು ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಮಂಡ್ಯ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮಂಡಳಿ ಸೆ..೫ರಂದು ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ೨೦೨೪-೨೫ನೇ ಶೈಕ್ಷಣಿಕ ಸಾಲಿನ ಐಚ್ಛಿಕ ಕನ್ನಡ ಪಠ್ಯಕ್ರಮವನ್ನು ಇದೀಗ ಪ್ರಕಟಿಸಿದೆ.