ಮಂಡ್ಯ ವಿವಿ: ಗೌರವ ಧನದ ಆಧಾರದ ಮೇಲೆ ಉಪನ್ಯಾಸಕರ ಸೇವೆ

| Published : Sep 25 2024, 12:52 AM IST

ಸಾರಾಂಶ

ಮಂಡ್ಯ ವಿಶ್ವ ವಿದ್ಯಾಲಯದಿಂದ ೧೧ ಬೋಧಕರು ವರ್ಗಾವಣೆ ಎಂಬ ಶೀರ್ಷಿಕೆಯಡಿ ‘ಕನ್ನಡಪ್ರಭ’ ಸೆ.೨೩ರಂದು ಬೋಧಕರ ವರ್ಗಾವಣೆಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಪಠ್ಯ ಬೋಧನೆಗೆ ಹಿನ್ನಡೆಯಾಗಿರುವ ಕುರಿತಂತೆ ಸಮಗ್ರ ವರದಿಯನ್ನು ಪ್ರಕಟಿಸಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಶ್ವವಿದ್ಯಾಲಯದಿಂದ ಕಾಲೇಜು ಶಿಕ್ಷಣ ಇಲಾಖೆಗೆ ಸೇರಿದ ೧೧ ಮಂದಿ ಬೋಧಕರು ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ೨೦೨೪-೨೫ನೇ ಸಾಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಉಪನ್ಯಾಸಕರ ಸೇವೆಯನ್ನು ಗೌರವಧನದ ಆಧಾರದ ಮೇಲೆ ಬಳಸಿಕೊಳ್ಳಲು ವಿಶ್ವವಿದ್ಯಾಲಯ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ.

ಮಂಡ್ಯ ವಿಶ್ವ ವಿದ್ಯಾಲಯದಿಂದ ೧೧ ಬೋಧಕರು ವರ್ಗಾವಣೆ ಎಂಬ ಶೀರ್ಷಿಕೆಯಡಿ ‘ಕನ್ನಡಪ್ರಭ’ ಸೆ.೨೩ರಂದು ಬೋಧಕರ ವರ್ಗಾವಣೆಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಪಠ್ಯ ಬೋಧನೆಗೆ ಹಿನ್ನಡೆಯಾಗಿರುವ ಕುರಿತಂತೆ ಸಮಗ್ರ ವರದಿಯನ್ನು ಪ್ರಕಟಿಸಿತ್ತು.

ಈ ವರದಿಯಿಂದ ಎಚ್ಚೆತ್ತ ಮಂಡ್ಯ ವಿಶ್ವ ವಿದ್ಯಾಲಯದ ಕುಲಸಚಿವರು ಸೆ.೨೩ರಂದು ಮಧ್ಯಾಹ್ನ ೩.೩೦ ಗಂಟೆಗೆ ಸರ್ಕಾರಿ ಮಹಾ ವಿದ್ಯಾಲಯ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರ ಜೊತೆ ವಿಶೇಷ ಸಭೆ ನಡೆಸಿದರು. ಅದರಂತೆ ೨೦೨೪-೨೫ನೇ ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಕಾಲೇಜು ಶಿಕ್ಷಣ ಇಲಾಖೆಯಿಂದ ಅತಿಥಿ ಉಪನ್ಯಾಸಕರು ನೇಮಕವಾಗುವವರೆಗೆ ತಾತ್ಕಾಲಿಕ ವ್ಯವಸ್ಥೆಯಡಿ ಉಪನ್ಯಾಸಕರ ಸೇವೆಯನ್ನು ಗೌರವಧನದ ಆಧಾರದ ಮೇಲೆ ಬಳಸಿಕೊಳ್ಳುವುದಕ್ಕೆ ತೀರ್ಮಾನಿಸಿ ನಿರ್ಣಯ ಕೈಗೊಳ್ಳಲಾಯಿತು.

ಅದರಂತೆ ವಿಭಾಗವಾರು ಕಾರ್ಯಭಾರಕ್ಕೆ ಅನುಗುಣವಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಮುಖಾಂತರ ಅವಶ್ಯವಿರುವ ವಿಭಾಗಗಳ ಮುಖ್ಯಸ್ಥರು ಅವರ ಸೇವೆಯನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳ ಬೋಧನೆ ನಡೆಸುವಂತೆ ನಿಯಮಾನುಸಾರ ಕ್ರಮ ವಹಿಸಲು ಕುಲಸಚಿವರು ಸೂಚಿಸಿದ್ದಾರೆ.

ಮಂಡ್ಯ ವಿಶ್ವವಿದ್ಯಾಲಯದಲ್ಲಿ ಕಾಲೇಜು ಶಿಕ್ಷಣ ಇಲಾಖೆಗೆ ಸೇರಿದ ೨೩ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ೧೧ ಉಪನ್ಯಾಸಕರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿತ್ತು. ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದಿರುವುದರಿಂದ ವರ್ಗಾವಣೆಗೊಂಡಿರುವ ಉಪನ್ಯಾಸಕರ ಸೇವೆ ಬಳಸಿಕೊಂಡು ವಿದ್ಯಾರ್ಥಿಗಳ ಪಠ್ಯ ಬೋಧನೆಗೆ ತೊಂದರೆಯಾಗದಂತೆ ಕ್ರಮ ವಹಿಸುವುದಕ್ಕೆ ಮಂಡ್ಯ ವಿಶ್ವವಿದ್ಯಾಲಯ ಮುಂದಾಗಿದೆ.

ಪ್ರಸಕ್ತ ಶೈಕ್ಷಣಿಕ ಸಾಲು ಆರಂಭವಾಗಿ ಎರಡು ತಿಂಗಳಾಗಿದೆ. ಅತಿಥಿ ಉಪನ್ಯಾಸಕರ ನೇಮಕ ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳಾದರೂ ಬೇಕು. ಅಲ್ಲಿಯವರೆಗೆ ವಿಶ್ವವಿದ್ಯಾಲಯದಲ್ಲಿರುವ ನಾಲ್ಕು ಸಾವಿರ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಕ್ಲಿಷ್ಟಕರವಾಗಿತ್ತು. ವಿಶ್ವವಿದ್ಯಾಲಯದಲ್ಲಿ ಉಳಿದುಕೊಂಡಿರುವ ೧೨ ಉಪನ್ಯಾಸಕರಿಂದ ತರಗತಿಗಳನ್ನು ನಡೆಸುವುದು ಅಸಾಧ್ಯದ ಮಾತಾಗಿತ್ತು. ಹೀಗಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಬಂದರೂ ತರಗತಿಗಳನ್ನು ತೆಗೆದುಕೊಳ್ಳುವುದಕ್ಕೆ ಉಪನ್ಯಾಸಕರೇ ಇರದಂತಹ ಪರಿಸ್ಥಿತಿ ನೆಲೆಸಿದ್ದು, ಮಕ್ಕಳು ವೃಥಾ ಕಾಲಹರಣ ಮಾಡಿಕೊಂಡು ಮನೆಗಳಿಗೆ ಹಿಂತಿರುಗುತ್ತಿದ್ದರು.

ಮಂಡ್ಯ ವಿಶ್ವವಿದ್ಯಾಲಯ ಸ್ವತಂತ್ರ ವಿಶ್ವವಿದ್ಯಾಲಯವಾಗಿದ್ದರೂ ಆರ್ಥಿಕ ಶಕ್ತಿಯನ್ನು ಪಡೆದುಕೊಂಡಿಲ್ಲ. ಬೋಧಕ-ಬೋಧಕೇತರ ಸಿಬ್ಬಂದಿಯನ್ನು ನೇಮಿಸಿಕೊಂಡು ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯವನ್ನೂ ಹೊಂದಿಲ್ಲ. ಹಾಗಾಗಿ ಸರ್ಕಾರಕ್ಕೆ ಉಪನ್ಯಾಸಕರನ್ನು ನೇಮಕ ಮಾಡಿಕೊಡುವಂತೆ ಪ್ರತಿ ವರ್ಷ ಮೊರೆಹೋಗುತ್ತಿದೆ. ಅತಿಥಿ ಉಪನ್ಯಾಸಕರು ನೇಮಕವಾಗುವವರೆಗೆ ವಿಶ್ವವಿದ್ಯಾಲಯದಲ್ಲಿ ತರಗತಿ ಬೋಧನೆ ಕುಂಠಿತಗೊಳ್ಳುವುದು ಮುಂದುವರಿದೇ ಇದೆ.