ನಗರ ಪ್ರದೇಶದಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿದೆ

| Published : Sep 25 2024, 12:52 AM IST

ಸಾರಾಂಶ

ಗ್ರಾಮೀಣ ಪ್ರದೇಶದಲ್ಲಿ ಎಲ್ಲರೂ ಕನ್ನಡ ಭಾಷೆ ಬಳಸುತ್ತಿದ್ದಾರೆ. ಆದರೆ, ನಗರ ಪ್ರದೇಶದಲ್ಲಿ ಮಾತೃ ಕನ್ನಡ ಭಾಷೆಯ ಬಳಕೆ ಕಡಿಮೆಯಾಗಿದೆ. ನಗರದ ಜನ ಇಂಗ್ಲೀಷ್‌ ಭಾಷೆಯ ವ್ಯಾಮೋಹ ಬೆಳೆಸಿಕೊಂಡಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪೂರ್ಣೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಗ್ರಾಮೀಣ ಪ್ರದೇಶದಲ್ಲಿ ಎಲ್ಲರೂ ಕನ್ನಡ ಭಾಷೆ ಬಳಸುತ್ತಿದ್ದಾರೆ. ಆದರೆ, ನಗರ ಪ್ರದೇಶದಲ್ಲಿ ಮಾತೃ ಕನ್ನಡ ಭಾಷೆಯ ಬಳಕೆ ಕಡಿಮೆಯಾಗಿದೆ. ನಗರದ ಜನ ಇಂಗ್ಲೀಷ್‌ ಭಾಷೆಯ ವ್ಯಾಮೋಹ ಬೆಳೆಸಿಕೊಂಡಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪೂರ್ಣೇಶ್‌ ಹೇಳಿದರು.

ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಪಟ್ಟಣದ ಅಂಬೇಡ್ಕರ್‌ ವೃತ್ತಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಕ್ಕೆ ಸ್ವಾಗತಿಸಿದ ಅವರು ಮಾತನಾಡಿದರು.

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ಮುಗಿದಿದೆ. ಹಲವು ದೊಡ್ಡ ನಗರದಲ್ಲಿ ಇನ್ನೂ ಕನ್ನಡ ಬಳಸುತ್ತಿಲ್ಲ. ಅನ್ನ ಕೊಡುವ ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದು ಸರಿಯಲ್ಲ. ಪ್ರತಿಯೊಬ್ಬರೂ ಕನ್ನಡ ಭಾಷೆಗೆ ಗೌರವ ನೀಡಬೇಕು ಎಂದು ಕರೆ ನೀಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ. ನವೀನ್‌ ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಜ್ಯೋತಿ ರಥ ಯಾತ್ರೆಯು ಬೀದರ್‌ ನಿಂದ ಹೊರಟು ರಾಜ್ಯಾದ್ಯಂತ ಸಂಚರಿಸಿ ಸೆಪ್ಟಂಬರ್‌ 20 ರಂದು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದೆ. ಸೋಮವಾರ ಮುತ್ತಿನಕೊಪ್ಪಕ್ಕೆ ಆಗಮಿಸಿದ್ದ ಕನ್ನಡ ಜ್ಯೋತಿ ರಥಕ್ಕೆ ಸ್ವಾಗತಿಸಿದ್ದೇವೆ. ಕನ್ನಡದ ಅಸ್ಮಿತೆಯನ್ನು ಉಳಿಸಿ, ಬೆಳೆಸುವುದೇ ಈ ಕನ್ನಡ ಜ್ಯೋತಿ ರಥದ ಉದ್ದೇಶವಾಗಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎನ್.ಎಂ. ಕಾಂತರಾಜ್‌ ಮಾತನಾಡಿ, ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ಸಂದ ಹಿನ್ನೆಲೆಯಲ್ಲಿ ಸಂಭ್ರಮಾಚಾರಣೆ ಮಾಡಲಾಗುತ್ತಿದ್ದು ಕನ್ನಡ ಜ್ಯೋತಿ ರಥಯಾತ್ರೆ ಬಂದಾಗ ಎಲ್ಲಾ ಕನ್ನಡಿಗರು ಒಟ್ಟಾಗಿ ಸಂಭ್ರಮ ಆಚರಣೆ ಮಾಡಬೇಕು. ಎಲ್ಲಾ ಕನ್ನಡ ಮನಸ್ಸುಗಳು ಒಂದಾಗಬೇಕು. ಈ ಕನ್ನಡ ಜ್ಯೋತಿ ರಥ ಯಾತ್ರೆಯು ನವಂಬರ್‌ 1 ರಂದು ಬೆಂಗಳೂರು ತಲುಪಲಿದೆ ಎಂದು ತಿಳಿಸಿದರು.

ತಹಸೀಲ್ದಾರ್‌ ತನುಜ ಟಿ. ಸವದತ್ತಿ ಮಾತನಾಡಿ, ಕರ್ನಾಟದಲ್ಲಿರುವ ಎಲ್ಲರೂ ಕನ್ನಡ ಭಾಷೆ ಉಳಿಯುವಿಗಾಗಿ ಕಂಕಣ ಬದ್ಧರಾಗಬೇಕು. ಪ್ರತಿಯೊಬ್ಬರೂ ಕನ್ನಡವನ್ನು ಬಳಸಿರಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕ.ಸಾ.ಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ, ಕಸಬಾ ಹೋಬಳಿ ಘಟಕದ ಅಧ್ಯಕ್ಷೆ ಜುಬೇದ, ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್, ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ ಮನು, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಪಟ್ಟಣ ಪಂಚಾಯಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ವಿವಿಧ ಸರ್ಕಾರಿ ಇಲಾಖೆಯ ಅಧಿಕಾರಿಗಳು ಇದ್ದರು.

ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಕ್ಕೆ ಪುಷ್ಪಾರ್ಚನೆ ಮಾಡಿ, ಚಂಡೆ, ಮಂಗಳವಾದ್ಯದೊಂದಿಗೆ ಸ್ವಾಗತಿಸಲಾಯಿತು. ಬೆಳಿಗ್ಗೆ ಮುತ್ತಿನಕೊಪ್ಪ, ಶೆಟ್ಟಿಕೊಪ್ಪದ ಮಾರ್ಗವಾಗಿ ನರಸಿಂಹರಾಜಪುರ ಪಟ್ಟಣಕ್ಕೆ ಕನ್ನಡ ಜ್ಯೋತಿ ರಥ ಯಾತ್ರೆ ಆಗಮಿಸಿತು. ನಂತರ ಪಟ್ಟಣದಲ್ಲಿ ಮೆರ‍ವಣಿಗೆ ನಡೆಸಲಾಯಿತು. ನಂತರ ಬಿ.ಎಚ್‌.ಕೈಮರ, ಗುಬ್ಬಿಗಾ ಮಾರ್ಗವಾಗಿ ತಾಲೂಕಿನ ಗಡಿ ಭಾಗವಾದ ಕುದುರೆಗುಂಡಿಗೆ ತಲುಪಿತು.