ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆ ಸ್ಥಾಪಿಸಿರುವ ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಶೈಕ್ಷಣಿಕವಾಗಿ ವಿಶ್ವದಾಖಲೆ ಮಾಡಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್,ಡಿ,ಕುಮಾರಸ್ವಾಮಿ ಹೇಳಿದರು.ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ 45ನೇ ಜಾನಪದ ಕಲಾಮೇಳದ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಮಾಜ ಮತ್ತು ನಾಡಿಗೆ ಸೇವೆ ಸಲ್ಲಿಸಿರುವವರನ್ನು ಮರೆಯುವುದೇ ಹೆಚ್ಚಾಗಿರುವ ಇಂತಹ ಸಮಯದಲ್ಲಿ ಆದಿಚುಂಚನಗಿರಿ ಶ್ರೀಮಠ ಶಿಕ್ಷಣ, ಆರೋಗ್ಯ, ಪರಿಸರ, ಆಧ್ಯಾತ್ಮ, ಸಂಸ್ಕೃತಿ, ಕಲೆ ಇವೆಲ್ಲದರ ಸಮ್ಮಿಳಿತವಾದ ಒಂದು ಸಾಮಾಜಿಕ ಆಧ್ಯಾತ್ಮಿಕ ಕ್ರಾಂತಿಯನ್ನೇ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಜಗತ್ತಿನ ಕಲಾ ಪರಂಪರೆಗೆ ಜಾನಪದವೇ ಮೂಲ. ಸಮಾಜದ ಆತ್ಮವಾಗಿರುವ ಈ ಸಂಸ್ಕೃತಿ ಕಲೆ ಜೀವಂತವಾಗಿ ಉಳಿಯಬೇಕು. ಶ್ರಮಿಕ ವರ್ಗದ ಜನರಿಂದ ಹುಟ್ಟಿಕೊಂಡಿರುವ ಇಂತಹ ಕಲೆಯನ್ನು ಕಳೆದ ನಾಲ್ಕು ದಶಕಗಳಿಂದ ಪೋಷಣೆ ಮಾಡುತ್ತಿರುವ ಶ್ರೀಮಠವು ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರನ್ನು ಕರೆಸಿ ಜನಪದ ಕಲೆಗಳ ಉಳಿವಿಗೆ ಶ್ರಮಿಸುತ್ತಿದೆ. ಇದಕ್ಕೆ ಭೈರವೈಕ್ಯಶ್ರೀಗಳ ಪರಿಶ್ರಮ ಅಪಾರ ಎಂದರು.
ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ಜಾನಪದ ಕಲಾವಿದರನ್ನು ನೋಡಿದರೆ ನಮ್ಮ ಶ್ರೇಷ್ಠ ಭಾರತೀಯ ಸಂಸ್ಕೃತಿಯ ಹಿರಿಮೆ ಹೆಮ್ಮರವಾಗಿ ಅನಾವರಣಗೊಂಡಿದೆ ಎಂದು ಭಾವಿಸುತ್ತೇನೆ. ಶ್ರೀಕ್ಷೇತ್ರದಿಂದ ವಿಶ್ವ ಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನಾಡಿನ ಮಕ್ಕಳಿಗೆ ಜ್ಞಾನ ದೀಕ್ಷೆ ನೀಡಿ, ಸಾಮಾನ್ಯ ಮಕ್ಕಳೂ ಕೂಡ ಜಾಗತಿಕ ಮಟ್ಟದಲ್ಲಿ ವಿಜ್ಞಾನ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಪಡೆಯುವಲ್ಲಿ ಸಫಲರಾಗುತ್ತಿದ್ದಾರೆ ಎಂದರು.ನಾಲ್ವರು ಮಹನೀಯರು ಬದುಕಿನ ಯಶಸ್ಸಿಗೆ ಕಾರಣವಾದ ಸಾಧನೆಯ ದ್ಯೋತಕವಾಗಿ ಇಂದು ಚುಂಚಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ. ಜಾನಪದ ಕಲಾವಿದರು ಹಾಗೂ ಚುಂಚಶ್ರೀ ಪ್ರಶಸ್ತಿ ಪಡೆದಿರುವ ಸಾಧಕರಂತೆ ಇಂದಿನ ಯುವಕರೂ ಕೂಡ ಮಹತ್ವವನ್ನು ಸಾಧಿಸಿ ನಾಡಿನ ಹಿರಿಮೆಯನ್ನು ಬೆಳಗಿಸುವ ಬೆಳಕಾಗಬೇಕು ಎಂದರು.
ಹಿಂದಿನ ಹಳ್ಳಿಯ ಜೀವನಶೈಲಿ ಬಹಳ ಚೆನ್ನಾಗಿತ್ತು. ನಮ್ಮ ಮೂಲ ಸಂಸ್ಕ್ರತಿಯನ್ನು ಮರೆತು ನಾವೀಗ ಮೇಂದಿ ಕಾರ್ಯಕ್ರಮದ ನೆಪದಲ್ಲಿ ಡ್ಯಾನ್ಸ್ ಇತ್ಯಾದಿಗಳಿಗೆ ಮುಂದಾಗಿದ್ದೇವೆ. ಈ ಹಿಂದೆ ಇದ್ದ ಸಹೋದರ ಸಂಬಂಧಗಳು ಮರೆಯಾಗುತ್ತಿವೆ, ತಂದೆ ತಾಯಂದಿರಿಗೆ ಗೌರವ ನೀಡುವ ಮೂಲಕ ಹಿಂದಿನ ಕಾಲದಂತೆ ಕೂಡಿ ಬಾಳುವ ಜೊತೆಗೆ ಜನಪದ ಕಲೆಗೆ ಒತ್ತು ನೀಡಬೇಕಿದೆ ಎಂದರು.ಹಿರಿಯ ಪತ್ರಕರ್ತ ಎಚ್.ಆರ್.ರಂಗನಾಥ್ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ನೀಡಿದ ಚುಂಚಶ್ರೀ ಪ್ರಶಸ್ತಿಯು ಈ ನಾಲ್ವರಿಗೆ ಮಾತ್ರ ನೀಡಿದ ಪುರಸ್ಕಾರವಲ್ಲ. ಅದು ನಮ್ಮ ಸಮಾಜಕ್ಕೆ ಹೆಗ್ಗಳಿಕೆಯಾಗಿ ನಮ್ಮನ್ನು ನಾವು ಗೌರವಿಸಿಕೊಂಡಂತಿದೆ ಎಂದರು.ಈ ಸಾಧಕರ ಅನೌಪಚಾರಿಕ ಮಾರ್ಗದರ್ಶನ ನಮ್ಮೆಲ್ಲರಿಗೂ ಪ್ರೇರಕ ಶಕ್ತಿಯಾಗಿದೆ. ಶ್ರೀಮಠದಿಂದ ಇಂತಹ ನೂರಾರು ಸಾರ್ಥಕ ಕಾರ್ಯಗಳು ಸದಾ ಮುಂದುವರಿಯಲಿ. ಭೈರವೈಕ್ಯ ಶ್ರೀಗಳೊಂದಿಗಿನ ತಮ್ಮ ಒಡನಾಟ ಬಾಂಧವ್ಯಗಳು ವಯಸ್ಸನ್ನು ಮೀರಿದ್ದು, ಭಾವನೆ ಮತ್ತು ಮಾತೃತ್ವಕ್ಕೆ ಸಂಬಂಧಿಸಿದ್ದು ಎಂದರು.
ಸಮಾರಂಭಕ್ಕೂ ಮುನ್ನ ಕ್ಷೇತ್ರದ ರಥದ ಬೀದಿಯಿಂದ ಶ್ರೀಮಠದ ಕಾಲಭೈರವೇಶ್ವರಸ್ವಾಮಿ ದೇವಸ್ಥಾನದ ವರೆಗೆ ವಿವಿಧ ಜಾನಪದ ಕಲಾತಂಡಗಳು ಮತ್ತು ಮಂಗಳವಾದ್ಯದೊಂದಿಗೆ ನಿರ್ಮಲಾನಂದನಾಥ ಶ್ರೀಗಳು, ಗಣ್ಯರು ಮತ್ತು ಚುಂಚಶ್ರೀ ಪ್ರಶಸ್ತಿ ಪುರಸ್ಕೃತರನ್ನು ಬೆಳ್ಳಿಮಾದರಿಯ ಎರಡು ಸಾರೋಟಿನಲ್ಲಿ ಕೂರಿಸಿ ಮೆರವಣಿಗೆ ನಡೆಸಿ ಸಮಾರಂಭದ ವೇದಿಕೆಗೆ ಕರೆತರಲಾಯಿತು.ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಪ್ರಾಸ್ತಾವಿಕ ನುಡಿಯೊಂದಿಗೆ ಶ್ರೀಗಳು ಮತ್ತು ಗಣ್ಯರನ್ನು ಸ್ವಾಗತಿಸಿದರು. ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ಸುರೇಶ್‌ಗೌಡ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಧರ್ಮಪಾಲನಾಥ ಸ್ವಾಮೀಜಿ, ಸೌಮ್ಯನಾಥಸ್ವಾಮೀಜಿ, ಮಂಗಳನಾಥಸ್ವಾಮೀಜಿ, ಗುಣನಾಥಸ್ವಾಮೀಜಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ.ಎ.ಶೇಖರ್ ಸೇರಿದಂತೆ ಹಲವು ಗಣ್ಯರು ಮತ್ತು ಸಹಸ್ರಾರು ಮಂದಿ ಭಕ್ತರು ಇದ್ದರು.