ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
೨೦೨೪-೨೫ನೇ ಶೈಕ್ಷಣಿಕ ಸಾಲಿನ ಅತಿಥಿ ಉಪನ್ಯಾಸಕರ ನೇಮಕ ಅತಂತ್ರ ಸ್ಥಿತಿ ತಲುಪಿರುವುದರಿಂದ ಹಲವು ವಿಶ್ವ ವಿದ್ಯಾಲಯಗಳಡಿ ಬರುವ ಕಾಲೇಜು ವಿದ್ಯಾರ್ಥಿಗಳ ಭವಿಷ್ಯವೂ ಡೋಲಾಯಮಾನ ಸ್ಥಿತಿ ತಲುಪಿದೆ.ಅತಿಥಿ ಉಪನ್ಯಾಸಕರ ನೇಮಕಾತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಅಧ್ಯಾಪಕರ ಕೊರತೆಯಿಂದ ವೇಳಾ ಪಟ್ಟಿಯಂತೆ ದೈನಂದಿನ ತರಗತಿಗಳು ನಡೆಯುತ್ತಿಲ್ಲ. ಸೆಮಿಸ್ಟರ್ ಪರೀಕ್ಷೆಗಳು ಸಮೀಪಿಸುತ್ತಿದೆ. ಆ ಹಿನ್ನೆಲೆಯಲ್ಲಿ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಆಯ್ಕೆಗೊಂಡು ಇಎಂಐಎಸ್‌ನಲ್ಲಿ ಅಪ್‌ಲೋಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನೇ ತಾತ್ಕಾಲಿಕವಾಗಿ ಕಾಲೇಜಿನಲ್ಲಿ ಮುಂದುವರೆಸುವಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ಕಾಲೇಜಿನಲ್ಲಿ ಗ್ರಂಥಪಾಲಕರು, ದೈಹಿಕ ಶಿಕ್ಷಕರು ಲಭ್ಯವಿಲ್ಲದಿದ್ದಲ್ಲಿ ಹಿಂದಿನ ಶೈಕ್ಷಣಿಕ ಸಾಲಿನವರನ್ನೇ ತಾತ್ಕಾಲಿಕವಾಗಿ ಬಳಸಿಕೊಳ್ಳುವಂತೆಯೂ ತಿಳಿಸಲಾಗಿದೆ. ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸಿದ ಅವಧಿಗೆ ಪ್ರಸ್ತುತ ಜಾರಿಯಲ್ಲಿರುವ ನಿಯಮಗಳಂತೆ ಗೌರವಧನವನ್ನು ಪಾವತಿಸಲು ಕ್ರಮ ವಹಿಸುವುದು. ೨೦೨೪-೨೫ನೇ ಸಾಲಿಗೆ ಮರು ಆಯ್ಕೆಯಾದಲ್ಲಿ ಮುಂದುವರಿಕೆಯ ಅವಧಿ ಸೇರಿದಂತೆ ೧೦ ತಿಂಗಳ ಗೌರವಧನಕ್ಕೆ ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ.ಪ್ರಸಕ್ತ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದ ಸಮಯದಲ್ಲೇ ರಾಜ್ಯ ಉಚ್ಛ ನ್ಯಾಯಾಲಯ ಅತಿಥಿ ಉಪನ್ಯಾಸಕರ ಹುದ್ದೆಗೆ ಯಾವುದೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕೂ ಮುನ್ನ ವಿಶ್ವ ವಿದ್ಯಾಲಯ ಧನಸಹಾಯ ಆಯೋಗ (ಯುಜಿಪಿ) ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆ ನಿಯಮಾವಳಿ ಅನುಸರಿಸುವಂತೆ ಉನ್ನತ ಶಿಕ್ಷಣ ಇಲಾಖೆ ಮತ್ತು ಕಾಲೇಜು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದ್ದು, ನೇಮಕಾತಿಗೆ ಸ್ನಾತಕೋತ್ತರ ಪದವೀಧರರನ್ನು ಮಾತ್ರ ಪರಿಗಣಿಸುವಂತೆ ಸೂಚಿಸಿ ನೇಮಕಾತಿಗೆ ತಡೆಯಾಜ್ಞೆ ನೀಡಿದೆ.
ಈಗಾಗಲೇ ಕಾಲೇಜು ಆರಂಭವಾಗಿ ಎರಡು ತಿಂಗಳಿಗೂ ಹೆಚ್ಚು ಸಮಯವಾಗಿದೆ. ಕೆಲವು ವಿಶ್ವವಿದ್ಯಾಲಯಗಳು ಸುಮಾರು ಒಂದು ತಿಂಗಳ ಅವಧಿಯಲ್ಲಿ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವುದಕ್ಕೆ ತಯಾರಿ ಆರಂಭಿಸಿವೆ. ಉಪನ್ಯಾಸಕರ ಕೊರತೆಯಿಂದ ತರಗತಿಗಳು ನಡೆಯದಿರುವುದರಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳ ಪ್ರಾಯೋಗಿಕ ಪರೀಕ್ಷೆಗಳು ನವೆಂಬರ್ ತಿಂಗಳಲ್ಲೇ ಆರಂಭವಾಗುತ್ತವೆ. ಡಿಸೆಂಬರ್ ಅಂತ್ಯದೊಳಗೆ ಎಲ್ಲ ಪರೀಕ್ಷೆಗಳು ಮುಗಿಯುತ್ತವೆ. ಅತಿಥಿ ಉಪನ್ಯಾಸಕರ ನೇಮಕ ವಿಳಂಬದಿಂದ ಎಲ್ಲೂ ಸರಿಯಾಗಿ ಪಠ್ಯ ವಿಷಯಗಳ ಬೋಧನೆ ಮುಗಿದಿರುವುದಿಲ್ಲ. ಪ್ರಾಯೋಗಿಕ ಪರೀಕ್ಷೆಗಳನ್ನೂ ನಾಮಕಾವಸ್ತೆಗೆ ಎಂಬಂತೆ ನಡೆಸಿ ವಿದ್ಯಾರ್ಥಿಗಳನ್ನು ‘ಪಾಸ್’ ಮಾಡಿ ಕಾಲೇಜುಗಳು, ವಿಶ್ವ ವಿದ್ಯಾಲಯಗಳು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವುದಕ್ಕೆ ಸಿದ್ಧರಾದಂತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಾಯಂ ಅಧ್ಯಾಪಕರಿಗೆ ಸ್ಥಳ ನಿಯುಕ್ತಿ ಆದೇಶಪ್ರಸ್ತುತ ಕಾಯಂ ಅಧ್ಯಾಪಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ವರ್ಗಾವಣೆಗೊಂಡಿರುವ ಅಧ್ಯಾಪಕರು ಸಂಬಂಧಪಟ್ಟ ಕಾಲೇಜುಗಳಲ್ಲಿ ಕಾರ್ಯವರದಿ ಮಾಡಿಕೊಳ್ಳಲಿದ್ದಾರೆ. ಹೊಸದಾಗಿ ನೇಮಕಕಗೊಂಡ ಅಧ್ಯಾಪಕರಿಗೆ ಸ್ಥಳ ನಿಯುಕ್ತಿ ಆದೇಶ ಹೊರಡಿಸುವ ಸಂಬಂಧ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರಿಗೆ ವಿಶೇಷ ವರ್ಗಾವಣೆ ಪ್ರಕ್ರಿಯೆ ನಡೆಸಲು ಮುಂದಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಹೊಸದಾಗಿ ನೇಮಕಾತಿ ಹೊಂದಿದ ಅಧ್ಯಾಪಕರು ಸಂಬಂಧಪಟ್ಟ ಕಾಲೇಜುಗಳಲ್ಲಿ ಕಾರ್ಯವರದಿ ಮಾಡಿಕೊಳ್ಳುವರು. ಈ ಎಲ್ಲಾ ಪ್ರಕ್ರಿಯೆಗಳಿಂದ ಬಹಳಷ್ಟು ಮಟ್ಟಿಗೆ ಬೋಧನಾ ಕಾರ್ಯಭಾರದ ಹೆಚ್ಚಳ, ಕೊರತೆ ಉಂಟಾಗುವ ಸಾಧ್ಯತೆಗಳಿವೆ. ಆ ಹಿನ್ನೆಲೆಯಲ್ಲಿ ಬೋಧನಾ ಕಾರ್ಯಭಾರದ ಲಭ್ಯತೆಯನ್ನು ಆಆಧರಿಸಿ ೨೦೨೪-೨೫ನೇ ಸಾಲಿಗೆ ಅತಿಥಿ ಉಪನ್ಯಾಸಕರ ಆನ್‌ಲೈನ್ ಕೌನ್ಸಿಲಿಂಗ್ ನಡೆಸಲು ನಿರ್ಧರಿಸಿರುವುದಾಗಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಮಸ್ಯೆ ಕೇಳೋರೇ ಇಲ್ಲ...!ಪ್ರಸಕ್ತ ವರ್ಷದ ಶೈಕ್ಷಣಿಕ ಸಾಲು ಆರಂಭಗೊಂಡು ಎರಡು ತಿಂಗಳಾದರೂ ಉಪನ್ಯಾಸಕರನ್ನು ನೇಮಕ ಮಾಡದಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ತ್ರಿಶಂಕು ಸ್ಥಿತಿ ತಲುಪಿದೆ. ಸುಭದ್ರ ಭವಿಷ್ಯ ಕಟ್ಟಿಕೊಳ್ಳುವ ಕನಸಿನೊಂದಿಗೆ ಪದವಿ ತರಗತಿಗಳಿಗೆ ಸೇರಿರುವ ವಿದ್ಯಾರ್ಥಿಗಳು ಪಾಠ-ಪ್ರವಚನಗಳಿಲ್ಲದೆ ಪರಿತಪಿಸುತ್ತಿದ್ದಾರೆ. ಅತಿಥಿ ಉಪನ್ಯಾಸಕರ ನೇಮಕಾತಿ ವಿಷಯದಲ್ಲಿ ಸರ್ಕಾರದ ಗೊಂದಲದ ನಡೆ, ನ್ಯಾಯಾಲಯದ ತಡೆಯಾಜ್ಞೆ ಇವೆಲ್ಲವೂ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಬರೆ ಎಳೆದಂತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುರಿತಂತೆ ಯಾರೊಬ್ಬರಿಗೂ ಚಿಂತೆಯೇ ಇಲ್ಲವಾಗಿದೆ. ಕಾಟಾಚಾರಕ್ಕೆ ಕಾಲೇಜುಗಳನ್ನು ನಡೆಸುತ್ತಿರುವಂತೆ ಕಂಡುಬರುತ್ತಿವೆ. ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರ ಶಿಸ್ತುಬದ್ಧ ನೇಮಕಾತಿ, ನಿಗದಿತ ಸಮಯದಲ್ಲಿ ಪಠ್ಯವಿಷಯಗಳ ಬೋಧನೆ, ಪರೀಕ್ಷೆಗಳು ನಡೆಯದೆ ಅಶಿಸ್ತು, ಅವ್ಯವಸ್ಥೆ, ಗೊಂದಲ ಎಲ್ಲೆಡೆ ಮನೆಮಾಡಿದೆ. ಶಿಕ್ಷಣ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ಸೂಚಿಸುವ ಪ್ರಬುದ್ಧ ರಾಜಕಾರಣಿಗಳೂ ಇಲ್ಲದಿರುವುದರಿಂದ ಕವಲುದಾರಿಯಲ್ಲಿ ಪದವಿ ಶಿಕ್ಷಣ ಸಾಗುವಂತಾಗಿದೆ.