ಮಂಡ್ಯ:
ಸ್ಮಶಾನ ಜಾಗಕ್ಕೆ ಆಗ್ರಹಿಸಿ ಗ್ರಾಪಂ ಕಚೇರಿ ಎದುರು ಶವವಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ತಾಲೂಕಿನ ಹಾಡ್ಯ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಕುಪ್ಪಯ್ಯ(70) ಶುಕ್ರವಾರ ರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮೃತರ ಅಂತ್ಯಸಂಸ್ಕಾರಕ್ಕೆ ಸ್ಮಶಾನ ಜಾಗವಿಲ್ಲದೆ ಮೃತರ ಸಂಬಂಧಿಕರು, ಕೆಲ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಲವು ವರ್ಷಗಳಿಂದ ಸ್ಮಶಾನ ಜಾಗ ಗುರುತಿಸುವಂತೆ ಒತ್ತಾಯಿಸುತ್ತಿದ್ದರೂ ಕ್ರಮ ಕೈಗೊಳ್ಳದ ಗ್ರಾಪಂ ವಿರುದ್ಧ ಮೃತ ಕುಪ್ಪಯ್ಯರ ಶವವನ್ನು ಗ್ರಾಪಂ ಕಚೇರಿ ಎದುರು ಇಟ್ಟು ಧಿಕ್ಕಾರ ಕೂಗಿದರು.ಹಲವು ವರ್ಷಗಳಿಂದ ಖಾಸಗಿ ವ್ಯಕ್ತಿಯ ಜಾಗದಲ್ಲಿ ಮೃತರ ಅಂತ್ಯಸಂಸ್ಕಾರ ನಡೆಸಲಾಗುತ್ತಿತ್ತು. ಈಗ ಖಾಸಗಿ ಜಾಗದಲ್ಲಿ ಶವ ಸಂಸ್ಕಾರಕ್ಕೆ ತಡೆ ನೀಡಲಾಗಿದೆ. ಕೂಡಲೇ ಹೊಸದಾಗಿ ಸ್ಮಶಾನ ಜಾಗ ಗುರುತಿಸಬೇಕು ಆಗ್ರಹಿಸಿದರು.
ಅಲ್ಲದೇ, ಮೃತ ಕುಪ್ಪಯ್ಯ ಕುಟುಂಬಸ್ಥರು ಗುಡಿಸಲಲ್ಲಿ ವಾಸಿಸುತ್ತಿದ್ದಾರೆ. ಸರ್ಕಾರದಿಂದ ಮನೆ ನೀಡುವಂತೆ ಹಲವು ಬಾರಿ ಅರ್ಜಿ ನೀಡಲಾಗಿದೆ. ಕೂಡಲೇ ಕುಪ್ಪಯ್ಯ ಕುಟುಂಬಕ್ಕೆ ನಿವೇಶನ ನೀಡುವಂತೆ ಆಗ್ರಹಿಸಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದು ಕುಳಿತರು.
ಆದರೆ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಮೆರಿಕಾಕ್ಕೆ ತೆರಳಿರುವುದರಿಂದ ಪೊಲೀಸರು ಹಾಗೂ ತಾಲೂಕು ಆಡಳಿತ ಅಧಿಕಾರಿಗಳಿಂದ ಪ್ರತಿಭಟನಾಕಾರರ ಮನವೊಲಿಸಿ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಮೇ 30ರಂದು ಒಕ್ಕಲಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಮಂಡ್ಯ:ಜಿಲ್ಲಾ ಒಕ್ಕಲಿಗರ ಸಂಘದಿಂದ ಒಕ್ಕಲಿಗ ಗಣ್ಯ ಸಾಧಕರಿಗೆ ಅಭಿನಂದನೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಮೇ 30 ರಂದು ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ ಗೌಡಯ್ಯನದೊಡ್ಡಿ ತಿಳಿಸಿದ್ದಾರೆ.
ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ. ನಿಶ್ಚಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿರುವ ಸಮಾರಂಭವನ್ನು ಶಾಸಕ ಪಿ.ರವಿಕುಮಾರ್ ಉದ್ಘಾಟಿಸಲಿದ್ದು, ಶಾಸಕ ಕೆ.ಎಂ. ಉದಯ್ ಅಧ್ಯಕ್ಷತೆ ವಹಿಸುವರು.ವಿಧಾನ ಪರಿಷತ್ ಶಾಸಕ ಕೆ.ವಿವೇಕಾನಂದ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ಜಿಲ್ಲಾ ಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಆರ್.ಯೋಗಾನಂದ ಕೆರಗೋಡು, ಕರ್ನಾಟಕ ಬಾರ್ ಕೌನ್ಸಿಲ್ ಸದಸ್ಯ ವಿಶಾಲ್ ರಘು, ಕೆಎಸ್‌ಒಯು ಪ್ರಾದೇಶಿಕ ನಿರ್ದೇಶಕ ಡಾ.ಸುಧಾಕರ್ ಹೊಸಹಳ್ಳಿ, ಲಯನ್ಸ್ ಜಿಲ್ಲಾ ಉಪ ರಾಜ್ಯಪಾಲ ಎಂ.ಸಿದ್ದೇಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸಿ.ಚಲುವರಾಜು, ಅಲಯನ್ಸ್ ಅಧ್ಯಕ್ಷ ಕೆ.ಟಿ.ಹನುಮಂತು ಭಾಗವಹಿಸಲಿದ್ದಾರೆ.ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲ.ಹನುಮಂತಯ್ಯ, ಕನ್ನಿಕ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಎಚ್.ಆರ್.ಕನ್ನಿಕಾ, ಕೆ.ಆರ್.ಪೇಟೆ ಆಡಳಿತ ವೈದ್ಯಾಧಿಕಾರಿ ಡಾ. ಅಜಿತ್ ಅವರನ್ನು ಸನ್ಮಾನಿಸಲಾಗುವುದು. ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ತಿಮ್ಮೇಗೌಡ ತಿಳಿಸಿದ್ದಾರೆ.