ಬಡಾವಣೆಯಲ್ಲಿ ನೂರಕ್ಕೂ ಹೆಚ್ಚು ಬೀದಿ ದೀಪಗಳು ಹಾಳಾಗಿವೆ. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನೀರು ಶೇಖರಣೆಯಾಗಿ ಸೊಳ್ಳೆಗಳ ಸಂತತಿ ಹೆಚ್ಚಿದೆ. ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ದುರ್ವಾಸನೆ ಬೀರುತ್ತಿದೆ. ರಸ್ತೆಗಳು ಡಾಂಬರೀಕರಣವಿಲ್ಲದೆ ಮಳೆಗಾಲದಲ್ಲಿ ಕೆಸರುಗದ್ದೆ ರೂಪ ಪಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಇಲ್ಲಿನ ವಿವೇಕಾನಂದ ನಗರ ಬಡಾವಣೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಬಡಾವಣೆಯ ನಿವಾಸಿಗಳು ಮಂಡ್ಯ ನಗರಾಭಿವೃದ್ಧಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬಡಾವಣೆಯ ನೂರಾರು ನಿವಾಸಿಗಳು ಒಗ್ಗೂಡಿ ಮುಡಾ ಕಚೇರಿಗೆ ಮುತ್ತಿಗೆ ಹಾಕಿದರು. ಈ ಸಮಯದಲ್ಲಿ ಅಧಿಕಾರಿಗಳ ಕಾರ್ಯವೈಖರಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ೩೦ ವರ್ಷಗಳಿಂದ ಕನಿಷ್ಠ ಸೌಲಭ್ಯ ಕಲ್ಪಿಸಿದೆ ನಿವಾಸಿಗಳು ನರಕಯಾತನೆ ಅನುಭವಿಸುವಂತೆ ಮಾಡಿರುವುದಕ್ಕೆ ಛೀಮಾರಿ ಹಾಕಿದರು.

ಬಡಾವಣೆಯಲ್ಲಿ ನೂರಕ್ಕೂ ಹೆಚ್ಚು ಬೀದಿ ದೀಪಗಳು ಹಾಳಾಗಿವೆ. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನೀರು ಶೇಖರಣೆಯಾಗಿ ಸೊಳ್ಳೆಗಳ ಸಂತತಿ ಹೆಚ್ಚಿದೆ. ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ದುರ್ವಾಸನೆ ಬೀರುತ್ತಿದೆ. ರಸ್ತೆಗಳು ಡಾಂಬರೀಕರಣವಿಲ್ಲದೆ ಮಳೆಗಾಲದಲ್ಲಿ ಕೆಸರುಗದ್ದೆ ರೂಪ ಪಡೆಯುತ್ತಿದೆ ಎಂದರು.

ಕುಡಿಯುವ ನೀರಿನ ಪೈಪ್‌ಗಳು ಒಡೆದುಹೋಗಿ ಮನೆಗಳಿಗೆ ಕಲ್ಮಶ ನೀರು ಬರುತ್ತಿದೆ. ಇದುವರೆಗೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಕಾಮಗಾರಿ ಅಪೂರ್ಣವಾಗಿದೆ. ಬಡಾವಣೆಗೆ ಪ್ರತ್ಯೇಕ ವಾಟರ್‌ ಟ್ಯಾಂಕ್ ನಿರ್ಮಾಣಕ್ಕೆ ಮಂಜೂರಾಗಿದ್ದರೂ ಯಾರೂ ಕ್ರಮವಹಿಸುತ್ತಿಲ್ಲ ಎಂದು ದೂರಿದರು.

ಬಡಾವಣೆಯ ಖಾಲಿ ನಿವೇಶನಗಳಲ್ಲಿ ಗಿಡ-ಗಂಟೆಗಳು ಅತಿ ಎತ್ತರಕ್ಕೆ ಬೆಳೆದುನಿಂತಿವೆ. ಶಾಲಾ ಮಕ್ಕಳು, ನಾಗರಿಕರು ದಿನನಿತ್ಯದ ಕೆಲಸಗಳಿಗೆ ಹೋಗಿಬರಲು ತೊಂದರೆಯಾಗುತ್ತಿದೆ. ನಿವೇಶನಗಳನ್ನು ಹಂಚಿ ೨೩ ವರ್ಷ ಕಳೆದರೂ ಮನೆ ಕಟ್ಟಲು ಲೈಸೆನ್ಸ್‌ಗಳನ್ನು ಕೊಟ್ಟಿರುವುದಿಲ್ಲ. ಇದರಿಂದ ಬಡಾವಣೆಯ ಅಭಿವೃದ್ಧಿ ಕುಂಠಿತಗೊಂಡಿದೆ. ನಿವೇಶನ ಹಂಚಿಕೆಯಾದ ಎರಡು ವರ್ಷದಲ್ಲಿ ಮನೆ ಕಟ್ಟಿಕೊಳ್ಳುವುದೆಂದು ಪ್ರಾಧಿಕಾರ ತಿಳಿಸಿದ್ದರೂ ಇದುವರೆಗೂ ಅನುಮತಿ ನೀಡಿಲ್ಲವೆಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ವಿವೇಕಾನಂದ ನಗರ ನಿವಾಸಿಗಳ ಹಿತರಕ್ಷಣಾ ಸಮಿತಿಯ ಎಚ್.ಸಿ.ಶ್ಯಾಮ್‌ಪ್ರಸಾದ್, ಟಿ.ರಾಜು, ಎಂ.ಪುಟ್ಟೇಗೌಡ, ಟಿ.ಎಲ್.ರಘು, ಕೆ.ವಿ.ಮಂಜುನಾಥ್, ವಸಂತೇಗೌಡ, ಟಿ.ಎಸ್.ಶಶಿಕುಮಾರ್, ಸಿದ್ದರಾಜು, ಕೆ.ಆತ್ಮಾನಂದ, ಜಿ.ಸಿ.ಪಾಪಣ್ಣ, ಚಂದ್ರಕಲಾ, ಲೀಲಾವತಿ, ಸುಮತಿ, ಜಯಂತಿ, ಸುಷ್ಮಾ, ರಶ್ಮಿ, ಸೀಮಾ, ಮಾನಸ, ಶಾಂತಲಾ, ಹೇಮಾವತಿ, ದೇವೀರಮ್ಮ, ಸೌಮ್ಯ, ಧನಲಕ್ಷ್ಮೀ ಮಾಲತಿ ಇತರರು ಭಾಗವಹಿಸಿದ್ದರು.

ಮುಸ್ಲಿಂ ಕಾಲೋನಿಗಿರುವ ಸೌಲಭ್ಯ ನಮಗೇಕಿಲ್ಲ?

ವಿವೇಕಾನಂದ ನಗರ ಬಡಾವಣೆಯಲ್ಲಿರುವ ಬೀಡಿ ಕಾರ್ಮಿಕರ ಕಾಲೋನಿಯ ಎಲ್ಲ ರಸ್ತೆಗಳನ್ನು ಸಿಮೆಂಟ್ ರಸ್ತೆಗಳನ್ನಾಗಿ ಪರಿವರ್ತಿಸಿ, ಚರಂಡಿ, ಬೀದಿದೀಪ, ಸ್ವಚ್ಛತೆ, ಕಸ ಸಂಗ್ರಹ ವಾಹನಗಳಿಗೆ ವ್ಯವಸ್ಥೆ ಮಾಡಲಾಗಿದೆ. ಅದೇ ವಿವೇಕಾನಂದನಗರ ಬಡಾವಣೆಗೆ ಅಂತಹ ಯಾವುದೇ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಈ ತಾರತಮ್ಯವೇಕೆ. ಸಾಮಾನ್ಯ ಕಾಲೋನಿಗಿರುವ ಸೌಲಭ್ಯಗಳನ್ನು ನಮಗೆ ಕಲ್ಪಿಸಿಕೊಡದಿರುವುದಕ್ಕೆ ಕಾರಣವೇನು ಎಂದು ನಿವಾಸಿಗಳು ಪ್ರಶ್ನಿಸಿದರು.

ಅಧಿಕಾರಿಗಳ ಕುಟುಂಬದವರಿಗೆ ಕೆಲವು ದಿನಗಳವರೆಗೆ ಉಚಿತವಾಗಿ ಮನೆಗಳಲ್ಲಿರುವುದಕ್ಕೆ ಅವಕಾಶ ಮಾಡಿಕೊಡುತ್ತೇವೆ. ನೀವೇ ಅಲ್ಲಿ ವಾಸ ಮಾಡಿ ಅನುಭವ ಪಡೆದುಕೊಳ್ಳಿ. ಆಗ ನಾವು ಎದುರಿಸುತ್ತಿರುವ ಸಮಸ್ಯೆಗಳೇನೆಂಬುದು ನಿಮಗೆ ಅರ್ಥವಾಗುತ್ತದೆ. ಮಹಿಳೆಯರು, ಮಕ್ಕಳು ನಿರ್ಭೀತಿಯಿಂದ ಓಡಾಡಲಾಗುತ್ತಿಲ್ಲ. ಹಲವು ಸ್ಥಳಗಳು ಅನೈತಿಕ ಚಟುವಟಿಕೆಯ ಕೇಂದ್ರವಾಗಿವೆ. ಕಳ್ಳರ ಕಾಟ ಹೆಚ್ಚಾಗಿದೆ. ಸದಾ ಭಯದ ನೆರಳಿನಲ್ಲಿ ಬದುಕುವಂತಾಗಿದೆ. ರಾತ್ರಿಯಾದ ಬಳಿಕ ಯಾರೂ ನಿರ್ಭೀತಿಯಿಂದ ಓಡಾಡಲಾಗದಂತಹ ವಾತಾವರಣದಲ್ಲಿ ನಾವಿದ್ದೇವೆ ಎಂದು ಮಹಿಳೆಯರು ಅಳಲು ವ್ಯಕ್ತಪಡಿಸಿದರು.

ಸಮಸ್ಯೆಗಳಿಗೆ ಹಂತ ಹಂತವಾಗಿ ಸ್ಪಂದನೆ: ಬಿ.ಪಿ.ಪ್ರಕಾಶ್

ವಿವೇಕಾನಂದ ನಗರ ಬಡಾವಣೆಯ ಸಮಸ್ಯೆಗಳು ನಮ್ಮ ಗಮನದಲ್ಲೂ ಇವೆ. ಹಂತ ಹಂತವಾಗಿ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ನಿವಾಸಿಗಳಿಗೆ ಭರವಸೆ ನೀಡಿದರು.

ಇನ್ನೆರಡು ದಿನದಲ್ಲಿ ನಾನೇ ಅಧಿಕಾರಿಗಳ ಜೊತೆ ಬಂದು ಬಡಾವಣೆಗೆ ಬಂದು ಕುಡಿಯುವ ನೀರು, ಬೀದಿ ದೀಪ ವ್ಯವಸ್ಥೆ ಸರಿಪಡಿಸಿಕೊಡುತ್ತೇನೆ. ಶಾಸಕರು ವಿದೇಶದಿಂದ ಬಂದ ನಂತರ ಅವರ ಸಮ್ಮುಖದಲ್ಲೇ ಸಭೆ ಕರೆದು ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತೇವೆ. ೩೦ ವರ್ಷಗಳಿಂದ ಇರುವ ಸಮಸ್ಯೆಯನ್ನು ಒಂದೇ ಬಾರಿಗೆ ಪರಿಹರಿಸಲಾಗುವುದಿಲ್ಲ. ನಮಗೂ ಸಮಯಾವಕಾಶ ನೀಡುವಂತೆ ನಿವಾಸಿಗಳಲ್ಲಿ ಮನವಿ ಮಾಡಿದರು.

ಬಡಾವಣೆಯಲ್ಲಿ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಶಾಸಕರ ಮೂಲಕ ಸರ್ಕಾರದ ಗಮನಸೆಳೆದು ಜಂಗಲ್ ಕಟಿಂಗ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುವುದು. ಮನೆ ಕಟ್ಟುವುದಕ್ಕೆ ಲೈಸೆನ್ಸ್ ಸಿಗದಿರುವುದಕ್ಕೆ ಸಿಬಿಐ ನ್ಯಾಯಾಲಯದಲ್ಲಿ ಪ್ರಕರಣಗಳಿವೆ. ಅವುಗಳ ಬಗ್ಗೆಯೂ ಸರ್ಕಾರದ ಹಂತದಲ್ಲಿ ಗಮನಸೆಳೆದು ಕಾನೂನಾತ್ಮಕ ಸಮಸ್ಯೆಗಳಿಂದ ಹೊರತಂದು ಇ-ಸ್ವತ್ತು ಮಾಡಿಕೊಡುವುದಕ್ಕೂ ಗಂಭೀರ ಪ್ರಯತ್ನ ನಡೆಸಲಾಗುತ್ತಿದೆ ಎಂದರು.