ಮಂಡ್ಯ: ಬಿ-ಖಾತೆ ಅರ್ಜಿ ತಿರಸ್ಕೃರಿಸುತ್ತಿರುವುದು ಏಕೆ?

| Published : Jul 15 2025, 01:00 AM IST

ಸಾರಾಂಶ

ಅನಧಿಕೃತ ಕಟ್ಟಡಗಳಿಗೆ ಅವಕಾಶವಾಗದಂತೆ ರಾಜ್ಯ ಸರ್ಕಾರ ಬಿ- ಖಾತೆಗೆ ಅವಕಾಶ ಮಾಡಿಕೊಟ್ಟಿದೆ. ಬಿ- ಖಾತೆಯಲ್ಲಿ ಮಂಡ್ಯ ನಗರವನ್ನು ಮುಂಚೂಣಿ ಸ್ಥಾನದಲ್ಲಿರಿಸಲು ಶ್ರಮವಹಿಸುತ್ತಾ ಅಭಿಯಾನ ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬಿ- ಖಾತಾ ಮಾಡುವಂತೆ ಸರ್ಕಾರದ ಆದೇಶವಿದ್ದರೂ ಬಿ- ಖಾತೆಗೆ ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸುತ್ತಿರುವುದೇಕೆ. ಇದರಿಂದ ಅಭಿವೃದ್ಧಿಗೆ ನಿರಂತರ ಶ್ರಮ ವಹಿಸುತ್ತಿರುವ ಶಾಸಕರಿಗೆ ಕೆಟ್ಟ ಹೆಸರು ಬರುತ್ತಿದೆ. ಜನರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅರ್ಜಿಗಳನ್ನು ತಿರಸ್ಕರಿಸುತ್ತಿರುವುದಕ್ಕೆ ಏನು ಕಾರಣ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ನಗರಸಭೆ ಸದಸ್ಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.ಸೋಮವಾರ ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಎಂ.ವಿ. ಪ್ರಕಾಶ್ (ನಾಗೇಶ್) ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೊದಲಿಗೆ ಮಾತನಾಡಿದ ಸದಸ್ಯ ಶ್ರೀಧರ್, ಅನಧಿಕೃತ ಕಟ್ಟಡಗಳಿಗೆ ಅವಕಾಶವಾಗದಂತೆ ರಾಜ್ಯ ಸರ್ಕಾರ ಬಿ- ಖಾತೆಗೆ ಅವಕಾಶ ಮಾಡಿಕೊಟ್ಟಿದೆ. ಬಿ- ಖಾತೆಯಲ್ಲಿ ಮಂಡ್ಯ ನಗರವನ್ನು ಮುಂಚೂಣಿ ಸ್ಥಾನದಲ್ಲಿರಿಸಲು ಶ್ರಮವಹಿಸುತ್ತಾ ಅಭಿಯಾನ ಆರಂಭಿಸಿದ್ದಾರೆ. ಈ ನಡುವೆ ಬಿ- ಖಾತೆಗೆ ಸಲ್ಲಿಕೆಯಾಗಿರುವ ಅರ್ಜಿಗಳು ತಿರಸ್ಕೃತಗೊಳ್ಳುತ್ತಿವೆ. ಈ ಸಮಸ್ಯೆ ಯಾರಿಂದ ಆಗುತ್ತಿದೆ ಎಂದು ಪ್ರಶ್ನಿಸಿದರು.ಬಿ- ಖಾತೆಗೆ ಪೂರಕವಾಗಿರುವ ದಾಖಲೆಗಳನ್ನು ಸಲ್ಲಿಸಿದರೂ ಏಕೆ ಮಾಡಿಕೊಡುತ್ತಿಲ್ಲ. ಕಂದಾಯ ಕಟ್ಟಿಸಿಕೊಂಡು ಬಿ- ಖಾತೆ ಮಾಡಿಕೊಡಲಿಲ್ಲವೆಂದರೆ ಜನರು ಸುಮ್ಮನಿದ್ದಾರೆಯೇ. ನಮಗೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅಧಿಕಾರಿಗಳು ಸೂಕ್ಷ್ಮವಾಗಿ ಇವೆಲ್ಲವನ್ನೂ ಗಮನಿಸಿ ಅರ್ಜಿ ಸಲ್ಲಿಸಿದವರಿಗೆ ಬಿ- ಖಾತೆ ಮಾಡಿಕೊಡುವಂತೆ ಒತ್ತಾಯಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯಾಧಿಕಾರಿ ರಾಜಶೇಖರ್ ಅವರು, ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಅರ್ಜಿಗಳು ತಿರಸ್ಕೃತಗೊಂಡಿವೆ. ಇದರ ಬಗ್ಗೆ ಕಂದಾಯ ನಿರೀಕ್ಷಕರಿಂದ ಮಾಹಿತಿ ಪಡೆದುಕೊಂಡು ಸರಿಪಡಿಸುವುದಾಗಿ ತಿಳಿಸಿದಾಗ, ಸದಸ್ಯ ಶ್ರೀಧರ್ ಮತ್ತೆ ಎದ್ದು ನಿಂತು ಇಂತಹ ಸಮಸ್ಯೆಗಳಿದ್ದರೆ ಶಾಸಕರ ಗಮನಕ್ಕೆ ತರಬೇಕು. ಅವರ ನೇತೃತ್ವದಲ್ಲಿ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಸೂಚಿಸುತ್ತಿದ್ದರು. ಈ ವಿಷಯದಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವಂತೆ ತಿಳಿಸಿದರು.ಸಭೆಯಲ್ಲಿದ್ದ ಶಾಸಕ ಪಿ.ರವಿಕುಮಾರ್, ಗುರುವಾರ (ಜು.17) ಬಿ- ಖಾತೆ ಸಂಬಂಧ ಸಭೆ ಕರೆದು ಚರ್ಚಿಸೋಣ. ಈಗ ಸಮಯವನ್ನು ಹಾಳು ಮಾಡುವುದು ಬೇಡ ಎಂದು ತೆರೆ ಎಳೆದರು.ಸರ್ವೆ ಕಾರ್ಯ ನಡೆದಿಲ್ಲವೇಕೆ?:ಸದಸ್ಯ ನಾಗೇಶ್ ಮಾತನಾಡಿ, ಉದಯಗಿರಿ ಬಡಾವಣೆಯಲ್ಲಿ ನಗರಸಭೆ ಜಾಗ ಮತ್ತು ಸ್ಮಶಾನ ಜಾಗ ಒತ್ತುವರಿಯಾಗಿದೆ. ಈ ವಿಷಯವಾಗಿ 2020ರಲ್ಲೇ ಜಿಲ್ಲಾಧಿಕಾರಿ ಎದುರು ಪ್ರಸ್ತಾವನೆ ಮಂಡಿಸಿದಾಗ ಈ ಜಾಗದ ಸರ್ವೇ ನಡೆಸುವಂತೆ ಆದೇಶಿಸಿದ್ದರು. ಆನಂತರ ರವಿಕುಮಾರ್ ಶಾಸಕರಾಗಿ ಆಯ್ಕೆಯಾದ ಬಳಿಕವೂ ಸರ್ವೇಗೆ ತೀರ್ಮಾನವಾಗಿತ್ತು. ಸಮಿತಿಯೂ ರಚನೆಯಾಗಿತ್ತು. ಇದುವರೆಗೂ ಸರ್ವೆ ಕಾರ್ಯ ನಡೆದಿಲ್ಲ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿ, 35 ವಾರ್ಡ್‌ಗಳಲ್ಲೂ ಇದೇ ಸಮಸ್ಯೆ ಇದೆ. ನಗರಸಭೆ ಜಾಗಗಳನ್ನು ಗುರುತಿಸಿ ನಾಮಫಲಕ ಹಾಕಿ ಎಂದು ಹೇಳಿದ್ದೆವು. ಆ ಕೆಲಸ ಕಂದಾಯಾಧಿಕಾರಿಗಳಿಂದ ಆಗಿಲ್ಲ. ನಿಮಗೇನಾದರೂ ಒತ್ತಡವಿದೆಯಾ, ಅಡಚಣೆ ಇದೆಯೋ ಅಥವಾ ಜೀವ ಬೆದರಿಕೆ ಇದೆಯೋ. ಏಕೆ ಈ ಕಾರ್ಯವನ್ನು ವಿಳಂಬ ಮಾಡುತ್ತಿದ್ದೀರಿ ಎಂದು ಕೇಳಿದರು.ಇದಕ್ಕೆ ಕಂದಾಯಾಧಿಕಾರಿ ರಾಜಶೇಖರ್ ಪ್ರತಿಕ್ರಿಯಿಸಿ, ಇದುವರೆಗೂ 65 ನಿವೇಶನಗಳನ್ನು ಗುರುತಿಸಿದ್ದೇವೆ. ಕಂದಾಯ ನಿರೀಕ್ಷಕರು, ಬಿಲ್ ಕಲೆಕ್ಟರ್ ತರಬೇತಿಗಾಗಿ ದೆಹಲಿಗೆ ಹೋಗಿದ್ದಾರೆ. ಅವರು ಬಂದ ನಂತರ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿದಾಗ, ಮತ್ತೆ ಎದ್ದು ನಿಂತ ನಾಗೇಶ್, ಇದು ಸಮಂಜಸವಾದ ಉತ್ತರವಲ್ಲ. 2020ರಲ್ಲೇ ಆದೇಶವಾಗಿದ್ದರೂ, ಸಮಿತಿ ರಚನೆಯಾಗಿ ಎರಡೂವರೆ ವರ್ಷವಾಗಿದ್ದರೂ ಈಗ ಸಿಬ್ಬಂದಿ ಕಾರಣವನ್ನು ಮುಂದಿಡುತ್ತಿರುವುದು ಹಾಸ್ಯಾಸ್ಪದವಲ್ಲವೇ.. ಪೌರಾಯುಕ್ತರು ಮಾರ್ಚ್ ತಿಂಗಳಿಂದಲೂ ಸರ್ವೇ ಮಾಡುವುದಾಗಿ ಹೇಳಿಕೊಂಡೇ ಬರುತ್ತಿದ್ದಾರೆ. ಇದುವರೆಗೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಸಭೆಯಲ್ಲಿ ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ಆಯುಕ್ತೆ ಯು.ಪಿ.ಪಂಪಾಶ್ರೀ ಇದ್ದರು.

------ಎಚ್.ಎಸ್. ಮಂಜು-ರಾಮಲಿಂಗು ನಡುವೆ ವಾಕ್ಸಮರಕನ್ನಡಪ್ರಭ ವಾರ್ತೆ ಮಂಡ್ಯ27ನೇ ವಾರ್ಡ್ ಅಭಿವೃದ್ಧಿ ವಿಚಾರದಲ್ಲಿ ಸದಸ್ಯ ಟಿ.ಕೆ.ರಾಮಲಿಂಗು ಹಾಗೂ 20ನೇ ವಾರ್ಡ್ ಸದಸ್ಯ ಎಚ್.ಎಸ್.ಮಂಜು ನಡುವೆ ವಾಕ್ಸಮರ ನಡೆಯಿತು.27ನೇ ವಾರ್ಡ್ ಅಭಿವೃದ್ಧಿಗೆ ಶಾಸಕರಿಂದ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ. ನಮ್ಮ ವಾರ್ಡ್‌ನ್ನು ಕಡೆಗಣಿಸಲಾಗುತ್ತಿದೆ ಎಂಬ ಟಿ.ಕೆ.ರಾಮಲಿಂಗು ಆರೋಪಕ್ಕೆ ಉತ್ತರಿಸಿದ ಸದಸ್ಯ ಎಚ್.ಎಸ್.ಮಂಜು, ಶಾಸಕರು ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತವಾಗಿದ್ದಾರೆ. ನಿಮ್ಮ ವಾರ್ಡ್‌ಗೆ 30 ಲಕ್ಷ ರು. ಕೊಟ್ಟಿದ್ದಾರೆ. ಭಾನುವಾರ ಶಾಸಕರು ನಿಮ್ಮ ವಾರ್ಡ್ ಭೇಟಿ ನೀಡಲು ಬಂದಿದ್ದಾಗ ನೀವೇ ಬಂದಿರಲಿಲ್ಲ. ಸದಸ್ಯರಾಗಿ ಅಲ್ಲಿ ನೀವು ಹಾಜರಿರಬೇಕಲ್ಲವೇ ಎಂದರು.ನಾನು ವಾರ್ಡ್‌ನಲ್ಲಿ ಇರಲಿಲ್ಲ ನಿಜ. 30 ಲಕ್ಷ ರು. ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದೀರಿ. ಅದೇನೋ ನಮಗೆ ಗೊತ್ತಿಲ್ಲ ಎಂದಾಗ, ನೀವು ನಮ್ಮ ಪಕ್ಷದಲ್ಲೇ ಇದ್ದಿದ್ದರೆ ನಿಮ್ಮನ್ನು ಶಾಸಕರು ಅಧ್ಯಕ್ಷರನ್ನಾಗಿ ಮಾಡುತ್ತಿದ್ದರು. ನೀವು ಬೇರೆ ಪಕ್ಷ ಸೇರಿ ಅಧ್ಯಕ್ಷರಾಗುವುದನ್ನು ಕಳೆದುಕೊಂಡಿರಿ. ಅದಕ್ಕೆ ಅಡ್ಡಗಾಲು ಹಾಕಲು ನೀವೇ ಇದ್ದಿರಲ್ಲ ಎಂದು ಟಿ.ಕೆ.ರಾಮಲಿಂಗು ಹಾಸ್ಯವಾಗಿ ನುಡಿದರು.----------------ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್‌ನ ಟಿ.ರವಿ ಅವಿರೋಧ ಆಯ್ಕೆನಗರಸಭೆ ಎರಡನೇ ಅವಧಿ ಆರಂಭವಾಗಿ 11 ತಿಂಗಳ ಬಳಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ 6ನೇ ವಾರ್ಡ್‌ನ ಸದಸ್ಯ ಟಿ.ರವಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರನ್ನು ಶಾಸಕರು ಮತ್ತು ಸದಸ್ಯರು ಅಭಿನಂದಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಟಿ.ರವಿ, ನನ್ನ ಮೇಲೆ ವಿಶ್ವಾಸವಿಟ್ಟು ಈ ಸ್ಥಾನಕ್ಕೆ ಆಯ್ಕೆ ಮಾಡಿದ ಶಾಸಕ ಪಿ.ರವಿಕುಮಾರ್ ಮತ್ತು ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಎಲ್ಲರ ವಿಶ್ವಾಸದೊಂದಿಗೆ ಅಭಿವೃದ್ಧಿಯಲ್ಲಿ ತೊಡಗುವುದಾಗಿ ಹೇಳಿದರು.೧೪ಕೆಎಂಎನ್‌ಡಿ-೮ಮಂಡ್ಯ ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ಅಧ್ಯಕ್ಷತೆಯಲ್ಲಿ ಸಾಮಾನ್ಯಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ೬ನೇ ವಾರ್ಡ್‌ನ ಸದಸ್ಯ ಟಿ.ರವಿ ಅವರನ್ನು ಆಯ್ಕೆ ಮಾಡಲಾಯಿತು. ಶಾಸಕ ಪಿ.ರವಿಕುಮಾರ್ ಹಾಜರಿದ್ದರು.೧೪ಕೆಎಂಎನ್‌ಡಿ-೯ಸಭೆಯಲ್ಲಿ ಸದಸ್ಯರಾದ ಹೆಚ್.ಎಸ್.ಮಂಜು,ಟಿ.ಕೆ.ರಾಮಲಿಂಗು ನಡುವೆ ವಾಕ್ಸಮರ ನಡೆಯಿತು.