ಮಂಗಳೂರು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ 33ನೇ ಘಟಿಕೋತ್ಸವ ಸಮಾರಂಭ ಮೇ 15 ರಂದು ಸಂಜೆ 3 ಗಂಟೆಗೆ ಮಂಗಳೂರು ಕ್ಯಾಂಪಸ್‌ನ ಡಾ. ಟಿ.ಎಂ.ಎ. ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ.
ಮೇ 16ರಂದು ಮಧ್ಯಾಹ್ನ 2.30ಕ್ಕೆ ಮಾಹೆ ಆನ್‌ಲೈನ್ ಶಿಕ್ಷಣದ 3ನೇ ಘಟಿಕೋತ್ಸವ ಆಯೋಜಿಸಲಾಗಿದ್ದು, ಆನ್‌ಲೈನ್ ಶಿಕ್ಷಣ ಪಡೆದ ಪದವೀಧರರಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಮಾಹೆ ಮಂಗಳೂರು ಕ್ಯಾಂಪಸ್‌ನ ಸಹ ಕುಲಪತಿ ಡಾ. ದಿಲೀಪ್ ಜಿ. ನಾಯಕ್ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮೇ 15 ರಂದು ನಡೆಯಲಿರುವ ಘಟಿಕೋತ್ಸವ ಸಮಾರಂಭದಲ್ಲಿ ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್‌ನ ನಿರ್ದೇಶಕರಾದ ಪ್ರೊ. (ಡಾ.) ಸುದೀಪ್ ಗುಪ್ತಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರಿನ ನಿಟ್ಟೆ ಎಜುಕೇಶನ್ ಟ್ರಸ್ಟ್‌ನ (ಪರಿಗಣಿತ ವಿಶ್ವವಿದ್ಯಾಲಯ) ಸಹ ಕುಲಾಧಿಪತಿ ಡಾ. ಎಂ. ಶಾಂತಾರಾಮ್ ಶೆಟ್ಟಿ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಮೇ 16ರ ಆನ್‌ಲೈನ್ ಶಿಕ್ಷಣದ ಘಟಿಕೋತ್ಸವದಲ್ಲಿ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಲೀ ಎಸ್. ನಾಯರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಯುನೆಕ್ಸ್ ಲರ್ನಿಂಗ್ ಸಿಇಒ ಅಂಬರೀಶ್ ಸಿನ್ಹಾ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.ಈ ಸಮಾರಂಭದಲ್ಲಿ ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಕುಲಪತಿ ಡಾ. ಶರತ್ ಕೆ. ರಾವ್, ಮಂಗಳೂರು ಕ್ಯಾಂಪಸ್‌ನ ಸಹ ಕುಲಪತಿ ಡಾ. ದಿಲೀಪ್ ಜಿ. ನಾಯಕ್, ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಕುಲಪತಿ ಡಾ. ನಾರಾಯಣ ಸಭಾಹಿತ್, ಮಾಹ ಬೆಂಗಳೂರು ಕ್ಯಾಂಪಸ್ ಹಾಗೂ ಎಂಎಲ್‌ಎಚ್‌ಎಸ್ ಸಹ ಕುಲಪತಿ ಪ್ರೊ. (ಡಾ.) ಮಧು ವೀರರಾಘವನ್, ಕುಲಸಚಿವ (ಮೌಲ್ಯಮಾಪನ) ಡಾ. ವಿನೋದ್ ವಿ. ಥಾಮಸ್ ಮತ್ತು ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಭಾಗವಹಿಸಲಿದ್ದಾರೆ ಎಂದರು.ಪದವಿ ಪ್ರದಾನ ಸಮಾರಂಭದಲ್ಲಿ ಪಿಎಚ್‌ಡಿ ಸೇರಿದಂತೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುವುದು. ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತರಿಗೆ ಶೈಕ್ಷಣಿಕ ಶ್ರೇಷ್ಠತೆಗಾಗಿ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಬದುಕಿನ ಹೊಸ ಪಯಣದ ಸಂಕಲ್ಪದೊಂದಿಗೆ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ ಎಂದರು.ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನನ್ಸ್‌ನ ಡೀನ್ ಡಾ. ಅಶಿತಾ ಉಪ್ಪೂರ್, ಅಸೋಸಿಯೆಟ್ ಡೀನ್ ಡಾ.ಶೀತಲ್ ಉಳ್ಳಾಲ್, ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕ ಭರತ್ ಕುಮಾರ್ ಇದ್ದರು.2,244 ಮಂದಿಗೆ ಪದವಿ: ಮಂಗಳೂರಿನಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ 22 ಪಿಎಚ್‌ಡಿ ಪದವಿ ಸೇರಿದಂತೆ 1,258 ಮಂದಿ, ಮಾಹೆ ಆನ್‌ಲೈನ್ ಮೂಲಕ ಶಿಕ್ಷಣ ಪಡೆದ 986 ಮಂದಿಗೆ ಸೇರಿದಂತೆ ಒಟ್ಟು 2,244 ಮಂದಿಗೆ ಎರಡು ದಿನಗಳ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಲಾಗುವುದು ಎಂದು ಡಾ.ದಿಲೀಪ್ ಜಿ. ನಾಯಕ್ ವಿವರಿಸಿದರು.