ಮಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ ಸಾವಿರ ದಿನಗಳ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆಗಳನ್ನು ಈ ಸರ್ಕಾರ ಸೃಷ್ಟಿಸಿದೆ. ಸಂಭ್ರಮಪಡುವಂಥ ಕೆಲಸ ಏನು ಮಾಡಿದ್ದೀರಿ? ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಭಿವೃದ್ಧಿ ಕಾರ್ಯಗಳು ನಡೆಯದೆ ಆಡಳಿತ ವ್ಯವಸ್ಥೆಯೇ ನೆಲಕಚ್ಚಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕಾಗಿ ಸಂಭ್ರಮಾಚರಣೆ ಮಾಡ್ತಿದ್ದೀರಾ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 1 ಸಾವಿರ ದಿನಗಳಲ್ಲಿ ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ, ಸಚಿವರು ಶಾಸಕರುಗಳ ಬಂಧನ, ರೈತರ ಆತ್ಮಹತ್ಯೆ, ಅತ್ಯಾಚಾರ ಏರಿಕೆ, ಗುತ್ತಿಗೆದಾರರ ಬಿಲ್‌ ಬಾಕಿ, ಪರಿಶಿಷ್ಟಜಾತಿ- ಪಂಗಡಕ್ಕೆ ಮೀಸಲಿಟ್ಟ ಹಣ ಅಕ್ರಮ ವರ್ಗಾವಣೆ, ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆ, ಗೃಹಲಕ್ಷ್ಮೀ ಹಣ ದುರುಪಯೋಗ, ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ, ಅಬಕಾರಿ ಲೈಸೆನ್ಸ್‌ ಹಗರಣಗಳು ನಡೆದಿದ್ದು, ಇದನ್ನೆಲ್ಲ ಮಾಡಿದ್ದೀವಿ ಅಂತ ಸಂಭ್ರಮಪಡ್ತಾ ಇದ್ದೀರಾ? ಒಂದಾದರೂ ಸಂಭ್ರಮದ ವಿಚಾರ ಹೇಳಿ ಎಂದು ಟೀಕಿಸಿದರು.

ಕಾಂಗ್ರೆಸ್‌ ಸರ್ಕಾರಕ್ಕೆ ಜನರ ಸಮಸ್ಯೆ ಬಗೆಹರಿಸುವುದಕ್ಕಿಂತ ಕುರ್ಚಿ ಸಮಸ್ಯೆಯೇ ಮುಖ್ಯವಾಗಿದೆ. ಕರ್ನಾಟಕದಲ್ಲಿ ಒಂದಾದರೂ ಶಾಶ್ವತವಾದ ಯಾವ ಯೋಜನೆ ಮಾಡಿದ್ದೀರಿ? ಏನನ್ನೂ ಮಾಡದೆ ಯಾವುದಕ್ಕಾಗಿ ಸಂಭ್ರಮಿಸುತ್ತಿದ್ದೀರಿ? ಜನರ ಜೇಬಿಗೆ ಕತ್ತರಿ ಹಾಕಿದ್ದೀರಿ. ಹಾಲಿನಿಂದ ಆಲ್ಕೋಹಾಲ್‌ವರೆಗೆ ದರ ಏರಿಸಿದ್ದೀರಿ. ರೈತರು ಬಳಸುವ ಬಿತ್ತನೆ ಬೀಜದ ದರವೂ ಏರಿಕೆಯಾಗಿದೆ. ಆಡು ಮುಟ್ಟದ ಸೊಪ್ಪಿಲ್ಲ, ರಾಜ್ಯ ಸರ್ಕಾರ ಏರಿಸದೇ ಇರುವ ವಸ್ತುಗಳೇ ಇಲ್ಲ ಎಂದು ಸಿಟಿ ರವಿ ಆಕ್ಷೇಪಿಸಿದರು.

ಸಂಭ್ರಮಿಸೋದು ವಿಕೃತ ಮನಸ್ಥಿತಿ:

ಒಂದು ಸಾವಿರ ದಿನಗಳ ಆಡಳಿತದಲ್ಲಿ ನಿಮ್ಮ ಸಾಧನೆ ಏನು? ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ರಾಜ್ಯದ ಸಾಲ ಏರಿಕೆಯಾಗಿದೆ. ಜನರು ಸಂಕಟಪಡುತ್ತಿದ್ದರೆ ನೀವು ಸಂಭ್ರಮಪಡೋದು ವಿಕೃತ ಮನಸ್ಥಿತಿಯ ಪರಮಾವಧಿ ಎಂದ ಅವರು, ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಸೃಷ್ಟಿಸಿದೆ. ಸರ್ಕಾರಕ್ಕೆ ಪ್ರಖ್ಯಾತಿ ತರುವ ಒಂದೇ ಒಂದು ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.


ಬಜೆಟ್‌ ಮೊದಲು ಕುರ್ಚಿ ಸಮಸ್ಯೆ ನೀಗಿಸಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನತೆ 136 ಸೀಟ್‌ ಕೊಟ್ಟಿದ್ದಾರೆ. ಆದರೆ ಈಗ ಸಿಎಂ ಯಾರು ಎನ್ನೋದು ಕಾಂಗ್ರೆಸ್‌ನ ಸಮಸ್ಯೆಯೇ ಹೊರತು ಜನರ ಸಮಸ್ಯೆ ಅಲ್ಲ. ಮುಂಬರುವ ಬಜೆಟ್‌ ಮಂಡನೆಗಿಂತ ಮೊದಲಾದರೂ ಸಿಎಂ ಕುರ್ಚಿ ಸಮಸ್ಯೆಯನ್ನು ಬಗೆಹರಿಸಿ, ಆಡಳಿತದ ಹಳಿ ತಪ್ಪಿದ್ದನ್ನು ಸರಿಪಡಿಸಿ ಎಂದು ಸಿ.ಟಿ. ರವಿ ಸಲಹೆ ನೀಡಿದರು.

ರಾಜ್ಯದ ಬಿಜೆಪಿ ಆಡಳಿತವಿದ್ದಾಗಲೂ ಗುತ್ತಿಗೆದಾರರಿಂದ ಭ್ರಷ್ಟಾಚಾರ ಆರೋಪ, ಅಧಿಕಾರ ಹಂಚಿಕೆ ಕುರಿತಂತೆ ವಿವಾದ ಆಗಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಸರಕಾರದಲ್ಲಿರುವ ಇದ್ದ ಭ್ರಷ್ಟಾಚಾರ ಸಾಬೀತಾಗಿಲ್ಲ ಎಂದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮುಖಂಡರಾದ ವಿಕಾಸ್‌ ಕುಮಾರ್‌, ವಸಂತ್‌ ಪೂಜಾರಿ ಇದ್ದರು.ಬಿಜೆಪಿ ಶಾಸಕ ಬೈರತಿ ಬಸವರಾಜ್‌ ಅವರ ಮೇಲಿನ ಆರೋಪ ರಾಜಕೀಯ ಪ್ರೇರಿತ. ಅವರ ಮೇಲಿನ ಆರೋಪಕ್ಕೆ ಯಾವ ಸಾಕ್ಷಿಯೂ ಇಲ್ಲ.

- ಸಿ.ಟಿ. ರವಿ, ವಿಧಾನ ಪರಿಷತ್‌ ಸದಸ್ಯ